ಹೊಸಕೋಟೆ: ನಗರದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘವು 2019-20ನೇ ಸಾಲಿನಲ್ಲಿ 451 ಕೋಟಿ ರೂ. ವಹಿವಾಟು ನಡೆಸಿ 85 ಲಕ್ಷ ರೂ. ನಿವ್ವಳ ಲಾಭ ಗಳಿಸಿಕೊಂಡಿದೆ ಎಂದು ಸಂಘದ ಅಧ್ಯಕ್ಷ ಕೆ. ಕೃಷ್ಣ ಮೂರ್ತಿ ಹೇಳಿದರು.
ಅವರು ಸಂಘದಲ್ಲಿ ಏರ್ಪಡಿಸಿದ್ದ ಆನ್‌ಲೈನ್ ವಿಡಿಯೋ ಕಾನ್ಫರೆನ್ಸ್/ವರ್ಚ್ಯುವಲ್ ಮೂಲಕ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, 1976ರಲ್ಲಿ ಪ್ರಾರಂಭಗೊಂಡ ಸಂಘದಲ್ಲಿ ಪ್ರಸ್ತುತ ಎ ತರಗತಿಯ 4825ಸದಸ್ಯರಿಂದ ಒಟ್ಟು 2.11 ಕೋಟಿ ರೂ. ಷೇರು ಬಂಡವಾಳವನ್ನು ಹೊಂದಿದೆ. ಸದಸ್ಯರಿಂದ ಒಟ್ಟು57ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, ಸಂಘದ ಸೌಲಭ್ಯಗಳನ್ನು ಎಲ್ಲಾ ಸದಸ್ಯರು ಸಮರ್ಪಕವಾಗಿಬಳಸಿಕೊಂಡು ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.
ಸಂಘವು ತಾಲೂಕಿನ ಕಾರ್ಯ ವ್ಯಾಪ್ತಿಯಲ್ಲಿ 11 ಶಾಖೆಗಳಲ್ಲಿ ನಿಯಂತ್ರಿತ ಆಹಾರ ಧಾನ್ಯ ಮತ್ತು ಗೊಬ್ಬರ ಮಾರಾಟ ಮಾಡುತ್ತಿದ್ದು, 3.15 ಕೋಟಿ ರೂ. ವಹಿವಾಟು ನಡೆಸಿ 36 ಲಕ್ಷ ರೂ. ವ್ಯಾಪಾರ ಲಾಭಗಳಿಸಿದೆ ಎಂದರು. ಸಂಘವು ಸದಸ್ಯರಿಗೆ ಬಡ್ಡಿ ರಹಿತ3.75 ಕೋಟಿ ರೂ. ಸಾಲ ನೀಡಿದ್ದು, ವಸೂಲಾತಿಯ ಪ್ರಮಾಣ ಶೇ.98ರಷ್ಟಿದೆ.ಸ್ವಂತ ಬಂಡವಾಳದಲ್ಲಿ 49ಕೋಟಿರೂ. ಸಾಲ ವಿತರಿಸಲಾಗಿದೆ. ಕೋವಿಡ್-19, ಬರ ಪರಿಸ್ಥಿತಿ ಹಾಗೂ ಸರಕಾರದ ಸಾಲಮನ್ನಾ ಯೋಜನೆಯಿಂದಾಗಿ ವಸೂಲಾತಿಯ ಪ್ರಮಾಣ ಶೇ.93 ರಷ್ಟಿದ್ದು ಅನುತ್ಪಾದಕ ಆಸ್ತಿಗಳ ಪ್ರಮಾಣ ಶೇ.4.80ರಷ್ಟಾಗಲು ಕಾರಣವಾಗಿದೆ ಎಂದರು.
ಸರಕಾರದಿಂದ ರೈತರ ಸಾಲ ಮನ್ನಾ ಬಗ್ಗೆ 85 ಸಾಲಗಾರರ 28.80 ಲಕ್ಷ ರೂ. ಬಾಕಿಯಿದ್ದು, ಶೀಘ್ರ ಪಾವತಿಸುವಂತೆ ಮನವಿ ಮಾಡಲಾಗಿದೆ.ರೈತರ ಹಿತ ಕಾಪಾಡಲು ಸಂಘ ಬದ್ಧವಾಗಿದ್ದು, ಉತ್ತಮ ಕಾರ್ಯನಿರ್ವಹಣೆಯಿಂದಾಗಿ ಲಾಭ ಗಳಿಕೆಯಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಮುಂಚೂಣಿಯಲ್ಲಿದೆ ಎಂದರು.
ನಿರ್ದೇಶಕರಾದ ಕೆ.ಸತೀಶ್, ಸಿ.ವಿ.ಗಣೇಶ್, ಆರ್.ಸುಜಾತಾ, ರಾಜಪ್ಪ, ಕೆ.ಎಂ.ಕೃಷ್ಣಪ್ಪ, ಎನ್ .ವಿ.ವೆಂಕಟೇಶಪ್ಪ, ಅಶ್ವಥ್, ಡಿ.ಎಚ್.ಹರೀಶ್ ಬಾಬು, ಬಿ.ಮುನಿರಾಜು, ನಾಗರತ್ನ, ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿ ರಾಜಣ್ಣ, ಸಿಇಒ ಟಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು. ಲೆಕ್ಕಾಧಿಕಾರಿ ಎಸ್.ನಾರಾಯಣ್ ಲೆಕ್ಕಪತ್ರ, ಆಡಳಿತ ಮಂಡಳಿ ವರದಿ ಮಂಡಿಸಿದರು.