ಬ್ಯಾಡಗಿ: ಹಣ ದ್ವಿಗುಣ ಗೊಳಿಸುವುದಾಗಿ ಹಾಗೂ ಬಂಗಾರ ಕೊಡುವುದಾಗಿ ನಂಬಿಸಿ ಮೋಸವೆಸಗಿದ ವಿಜಯಪುರ ಮೂಲದ ಇಬ್ಬರು ಸುಮಾರು 85 ಲಕ್ಷ ರೂ. ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಮೋಟೆಬೆನ್ನೂರ ರಸ್ತೆಯಲ್ಲಿರುವ ಜಗದಂಬಾ ಹೋಟೆಲ್ ಮೇಲ್ಭಾಗದಲ್ಲಿನ ಮಳಿಗೆಯೊಂದರಲ್ಲಿದ್ದ ವಿಜಯಪುರ ಮೂಲದ ಸೈಯದ್ ಸೊಹೈಲ್ ಶೇಖ್ ಹಾಗೂ ಮೆಹಬೂಬ ಇಸ್ಮಾಯಿಲ್ ತಿಕ್ಕೋಟಿಕಲ್ ಎಂಬುವರು ವಂಚನೆ ನಡಸಿದ್ದಾಗಿ ತಿಳಿದು ಬಂದಿದೆ.
ಕಳೆದ 4 ತಿಂಗಳಿಂದ ಮಾಡರ್ನ್ ಮಾರ್ಕೆಟಿಂಗ್ ಗೋಲ್ಡ್ ಟ್ರೇಡರ್ಸ್ ಎಂಬ ಹೆಸರಲ್ಲಿ ಹಣ ದ್ವಿಗುಣಗೊಳಿಸುವ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ.
ಪ್ರತ್ಯೇಕ 2 ಸ್ಕೀಂ: ಸ್ಕೀಮ್ ನ ಒಂದರಲ್ಲಿ 21 ಸಾವಿರ ರೂ. ತುಂಬಿಸಿಕೊಂಡು 11 ದಿನಗಳ ಬಳಿಕ ಪ್ರತಿ ವಾರ 6 ಸಾವಿರ ರೂ.ನಂತೆ ಒಟ್ಟು 36 ಸಾವಿರ ರೂ. ಮೌಲ್ಯದ ಬಂಗಾರ, ಗೃಹೋಪಯೋಗಿ ವಸ್ತುಗಳನ್ನು ನೀಡುವುದಾಗಿ ನಂಬಿಸಿದ್ದರು. ಅಲ್ಲದೇ ಇನ್ನೊಂದು ಸ್ಕೀಮ್‌ನಲ್ಲಿ ಮೊದಲು ಶೇ.60 ಹಣ ತುಂಬಿಸಿಕೊಂಡು ಉಳಿದ ಹಣ ಕಂತುಗಳಲ್ಲಿ ಪಾವತಿಸಿದಲ್ಲಿ ಬಂಗಾರ ಕೊಡಿಸುವುದಾಗಿ ನಂಬಿಸಿದ್ದಾರೆ.
ಎರಡೂ ಸ್ಕೀಂಗಳ ನಡುವೆ ಒಟ್ಟು 213 ಗ್ರಾಹಕರಿಗೆ ವಂಚಿಸಿದ್ದು, ಬಳಿಕ ತಮ್ಮ ಕಾರ್ಯ ಚಟುವಟಿಕೆ ನಡೆಸುತ್ತಿದ್ದ ಕಚೇರಿ ಸ್ಥಗಿತಗೊಳಿಸಿ, ಮೊಬೈಲ್ ಸ್ವಿಚ್‌ಆಫ್ ಮಾಡಿ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಲು ಗ್ರಾಹಕರು ಪ್ರಯತ್ನಪಟ್ಟರಾದರೂ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಪಟ್ಟಣದ ಇಸ್ಲಾಂಪುರ ಓಣಿ ನಿವಾಸಿ ಮಹಮ್ಮದ ಇಸ್ಮಾಯಿಲ್ ಕಳಗೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನನ್ವಯ ವಂಚಕರ ಬಂಧನಕ್ಕೆ ಬಲೆ ಬೀಸಿದ ಬ್ಯಾಡಗಿ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 85 ಲಕ್ಷ ರೂ. ಪಡೆದು ವಂಚನೆ ನಡೆಸಿದ್ದಾಗಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಪೊಲೀಸರು ಆರೋಪಿಗಳನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.