ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಕಳೆದ ಜನವರಿಯಲ್ಲಿ ನಡೆದ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಖರ್ಚು ವೆಚ್ಚ ಮಾಡಿದವರು ಉದ್ರಿ ಖಾತೆಯಲ್ಲೇ ಲೆಕ್ಕ ಬರೆದಿಟ್ಟುಕೊಳ್ಳುವಂತಾಗಿದ್ದು, ಇನ್ನೂ 3 ಕೋಟಿ ರೂ.ಗೂ ಅಧಿಕ ಹಣ ಸರ್ಕಾರದಿಂದ ಬಿಡುಗಡೆಯಾಗಿಲ್ಲ.
84ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನವನ್ನು ಸುಂದರ ಮಂಟಪ ಮತ್ತು ವೇದಿಕೆ ನಿರ್ಮಿಸಿ, ಅದಕ್ಕೆ ತಕ್ಕನಾದ ಕುರ್ಚಿ, ಕಲಾತಂಡಗಳು, ಕಲಾವಿದರು ಸೇರಿ ಅನೇಕರು ಶ್ರಮ ಹಾಕಿ ಸಮ್ಮೇಳನ ಯಶಸ್ವಿಗೊಳಿಸಿದರು. ಇದಕ್ಕೆ ಜಿಲ್ಲಾಡಳಿತವೇ ನೇತೃತ್ವ ವಹಿಸಿಕೊಂಡು ಕೆಲಸ ಮಾಡಿ ಸಮ್ಮೇಳನಕ್ಕೆ ಭರ್ಜರಿ ಮೆರುಗು ತಂದಿತ್ತು. ಆದರೆ ಸಮ್ಮೇಳನ ಮುಗಿದು 4 ತಿಂಗಳು ಕಳೆದರೂ ಕಲಾವಿದರು ಮತ್ತು ಸಣ್ಣಪುಟ್ಟ ಖರ್ಚು ಮಾಡಿದ ತುಂಡು ಗುತ್ತಿಗೆದಾರರು ಇನ್ನೂ ಸರ್ಕಾರ ದಿಂದ ಬರುವ ಬಾಕಿ ಹಣಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ರಾಜ್ಯ ಸರ್ಕಾರಕ್ಕೆ ಧಾರವಾಡ ಸಮ್ಮೇಳನ ನಡೆಸಲು 12 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕೂಡ ಸರ್ಕಾರದ ಮಟ್ಟದಲ್ಲಿ ಲಾಬಿ ಮಾಡಿ ಹೆಚ್ಚಿನ ಹಣಕಾಸಿನ ನೆರವು ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಸರ್ಕಾರ ಕೇವಲ 8 ಕೋಟಿ ಮಾತ್ರ ನೀಡುವುದಾಗಿ ಹೇಳಿತ್ತು. ಈ ಪೈಕಿ ಸದ್ಯಕ್ಕೆ 7 ಕೋಟಿ ಮಾತ್ರ ಜಿಲ್ಲಾಡಳಿತಕ್ಕೆ ತಲುಪಿಸಿದೆ.
ಸಮ್ಮೇಳನಕ್ಕೆ ವರ್ಷದಿಂದ ವರ್ಷಕ್ಕೆ ಖರ್ಚು ಹೆಚ್ಚಾಗುತ್ತಿದ್ದು, ಸರ್ಕಾರ ಕನ್ನಡದ ಕೆಲಸಕ್ಕೆ ಹಣ ನೀಡಬೇಕೆಂದು ಧಾರವಾಡದ ಸಾಹಿತಿಗಳು ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರಲ್ಲಿ ಮನವಿ ಮಾಡಿದ್ದರು. ಧಾರವಾಡದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಕನಿಷ್ಠ 12 ಕೋಟಿ ರೂ.ನೀಡುವಂತೆ ಆರಂಭದಲ್ಲೇ ಆಗ್ರಹಿಸಿದ್ದರು. ಈವರೆಗೂ ಈ 12 ಕೋಟಿ ಪೈಕಿ ಸರ್ಕಾರದಿಂದ ಬರೀ 7 ಕೋಟಿ ರೂ. ಮಾತ್ರ ಬಂದಿದೆ. ಸಾಹಿತ್ಯ ಪರಿಷತ್ತಿನಿಂದ 1 ಕೋಟಿ ರೂ. ಬಂದಿದೆ. ಸದ್ಯಕ್ಕೆ ಇನ್ನು 3 ಕೋಟಿ ರೂ.ಗಳಾದರೂ ಸರ್ಕಾರ ಭರಿಸಲೇಬೇಕಿದ್ದು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಕನ್ನಡದ ಕೆಲಸಕ್ಕೆ ಹಣವಿಲ್ಲವೇ?: ಪ್ರತಿ ವರ್ಷ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸರ್ಕಾರ ಅದ್ಧೂರಿಯಾಗಿ ನಡೆಸಿಕೊಂಡು ಬಂದಿದೆ. ಸಾಹಿತ್ಯ ಪರಿಷತ್ತಿನ ಮೂಲಕ ನಡೆಯುವ ಈ ಕಾರ್ಯಕ್ರಮಕ್ಕೆ ಎಂದಿಗೂ ಅನುದಾನದ ಕೊರತೆ ಇಲ್ಲವೇ ಇಲ್ಲ ಎಂದು ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಮೇಲಿಂದ ಮೇಲೆ ಹೇಳುತ್ತಲೇ ಇರುತ್ತಾರೆ. ಆದರೆ ಸಮ್ಮೇಳನ ಮುಗಿದು 4 ತಿಂಗಳು ಕಳೆದರೂ ಇನ್ನೂ ಸಮ್ಮೇಳನಕ್ಕೆ ಖರ್ಚು ಮಾಡಿದ ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಇದೇನು ನೂರಾರು ಕೋಟಿ ಹಣವಲ್ಲ, ಕೇವಲ 12 ಕೋಟಿ ಅಷ್ಟೇ. ಇದಕ್ಕೆ ಸರ್ಕಾರ ಏಕೆ ಮೀನಮೇಷ ಎಣಿಸಬೇಕು ಎಂದು ಕನ್ನಡ ಸಾಹಿತ್ಯ ವಲಯ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದೆ.
ಸಾಹಿತಿಗಳು- ಸರ್ಕಾರ ನಡುವೆ ಮನಸ್ತಾಪ
ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂದಾಜು 6 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಬಂದವರಿಗೆಲ್ಲರಿಗೂ ಊಟ, ವಸತಿಗೆ ಕೋಟಿಗಟ್ಟಲೇ ಹಣ ಖರ್ಚಾಗಿದೆ. ಪೆಂಡಾಲ್, ಕುರ್ಚಿ, ಅಡುಗೆ, ಗೌರವಧನ ಹೀಗೆ ಎಲ್ಲವನ್ನೂ ಲೆಕ್ಕ ಹಾಕಿದರೆ ಸಮ್ಮೇಳನದ ಖರ್ಚು 11 ಕೋಟಿ ಗಡಿ ದಾಟುತ್ತಿದೆ. ಸರ್ಕಾರ ಈವರೆಗೂ ಬರೀ 7 ಕೋಟಿ ಮಾತ್ರ ನೀಡಿದ್ದು ಇನ್ನುಳಿದ ಹಣವನ್ನು ಬೇಗನೆ ನೀಡಬೇಕು ಎನ್ನುತ್ತಿದ್ದಾರೆ ಸಮ್ಮೇಳನದ ನೇತೃತ್ವ ವಹಿಸಿದ್ದ ಧಾರವಾಡ ಸಾಹಿತ್ಯ ಪರಿಷತ್ತಿನ ಸದಸ್ಯರು. ಆದರೆ ಸರ್ಕಾರ ಮಾತ್ರ 8 ಕೋಟಿಗಿಂತ ಹೆಚ್ಚಿನ ಹಣ ನೀಡುವುದು ಕಷ್ಟ ಎನ್ನುತ್ತಿದ್ದು, ಇದು ಸಾಹಿತಿಗಳು ಮತ್ತು ಸರ್ಕಾರದ ಮಧ್ಯೆ ಮನಸ್ತಾಪಕ್ಕೆ ಕಾರಣವಾಗಿದೆ.
-ಬಸವರಾಜ ಹೊಂಗಲ್