Advertisement

ಪುರಸಭೆ ವ್ಯಾಪ್ತಿಯಲ್ಲಿ 847 ಅಕ್ರಮ ಕಟ್ಟಡಗಳು

12:46 PM Jun 30, 2017 | |

ಎಚ್‌.ಡಿ.ಕೋಟೆ: ಪುರಸಭೆ ವ್ಯಾಪ್ತಿಯಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳು ಪುರಸಭೆಯಿಂದ ಯಾವುದೇ ದಾಖಲೆ ಪಡೆಯದೆ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೆಲವರು ವಸತಿ ಉದ್ದೇಶಕ್ಕಾಗಿ ಪರವಾನಗಿ ಪಡೆದು ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಪುರಸಭೆ ಅಧಿಕಾರಿಗಳಾದ ನೀವು ಕರ್ತವ್ಯ ಮರೆತಿದ್ದಿರಿ ನಿಮ್ಮಿಂದ ಪುರಸಭೆಗೆ ಆರ್ಥಿಕ ನಷ್ಟವಾಗಿದೆ.

Advertisement

ನಿಮಗೆ ಕೆಲಸ ಮಾಡಲು ಆಗದಿದ್ದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದು ಪುರಸಭೆ ಆಡಳಿತ ಮಂಡಳಿಯ ಎಲ್ಲ ಸದಸ್ಯರೂ ಆಕ್ರೋಶ ವ್ಯಕ್ತಪಡಿಸಿ ಎಲ್ಲಾ ಅಧಿಕಾರಿಗಳನ್ನು ತರಾಟೆ ತಗೆದುಕೊಂಡ ಘಟನೆಗೆ ಸಾಮಾನ್ಯ ಸಭೆ ಸಾಕ್ಷಿಯಾಯಿತು.

ಪ್ರಭಾವಿಗಳಿಗೆ ಅನುಕೂಲ: ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸ»ಯಲ್ಲಿ ಸದಸ್ಯ ಎನ್‌.ಉಮಾಶಂಕರ್‌ ಮಾತನಾಡಿ, ಪಟ್ಟಣದ ಎನ್‌ಜಿಒ ಬಡಾವಣೆ ಸಮೀಪದ ಭವಾನಿ ಎಸ್ಟೇಟ್‌ ಬಡಾವಣೆಯಲ್ಲಿ ಅಕ್ರಮ ಖಾತೆಗಳಾಗಿದ್ದರೂ, ಅಲ್ಲಿಗೆ ಸೌಲಭ್ಯ ಕಲ್ಪಿಸುತ್ತಿದ್ದಿರಿ, ಯಾರದೋ ಪ್ರಭಾವಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಪುರಸಭೆ ಅನುದಾನ ಬಳಕೆ ಮಾಡಿ ಸೌಲಭ್ಯ ಕಲ್ಪಿಸುತ್ತಿದ್ದು, ಕೂಡಲೇ ಆ ಅಕ್ರಮ ಖಾತೆಗಳನ್ನು ರದ್ದುಪಡಿಸಿ ಅಂತವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೌಡಿಸಂ ಮಾಡುತ್ತಿದ್ದರಾ: ಸದಸ್ಯ ಪುಟ್ಟಬಸವನಾಯಕ ಮಾತನಾಡಿ, ಅಧ್ಯಕ್ಷರ ಪತಿ ಗೋವಿಂದಚಾರಿ ತಮ್ಮ ವಾರ್ಡಿನಲ್ಲಿ ಬಿಡಿಗಾಸಿನಷ್ಟು ಅಭಿವೃದ್ಧಿ ಮಾಡಲು ಸಾಧ್ಯವಾಗದಿದ್ದರೂ ಬೇರೆ ವಾರ್ಡಿಗಳಿಗೂ ಮೂಗು ತೂರಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದರೆ, ಮೊನ್ನೆ ತಾನೆ ನನ್ನ ವಾರ್ಡಿನಲ್ಲಿ ವ್ಯಕ್ತಿಯೋರ್ವರಿಗೆ ತಮ್ಮ ವಾರ್ಡಿಗೆ ಬಂದಿದ್ದ ಮನೆ ನೀಡಿ ಗೊಂದಲ ಮೂಡಿಸಿದ್ದು, ಅಧ್ಯಕ್ಷರ ಪತಿ ಹಾಗೂ ಇವರ ಮಕ್ಕಳು ರೌಡಿಸಂ ಮಾಡುತ್ತಿದ್ದರಾ ಎಂದು ಕಿಡಿಕಾರಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್‌.ಸಿ.ನರಸಿಂಹಮೂರ್ತಿ ಮಾತನಾಡಿ, ಅಧ್ಯಕ್ಷರೆ ನಿಮ್ಮ ಆಡಳಿತದಲ್ಲಿ ಬಿಗಿ ಇಲ್ಲ, ಸಭೆಯಲ್ಲಿ ಕೈಗೊಂಡ ನಡವಳಿಗಳ ಬಗ್ಗೆ ಸಭೆಯ ನಂತರದ ದಿನಗಳಲ್ಲಿ ಏನಾಗಿದೆ ಎಂದು ರಿವ್ಯೂವ್‌ ಮಾಡಲ್ಲ ಇನ್ನೆಲ್ಲಿಂದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡ್ತಾರೆ, ಎಲ್ಲಿಂದ ಅಭಿವೃದ್ಧಿ ಕಾರ್ಯಗಳು ಅಗುತ್ತವೆ ಎಂದು ಚೇಡಿಸಿದರು.

Advertisement

ಸಾವಿರಕ್ಕೂ ಹೆಚ್ಚು ಅಕ್ರಮ ಕಟ್ಟಡಗಳಿವೆ..!: ಪಟ್ಟಣದಲ್ಲಿನ ಆಸ್ತಿಗೆ ಸಂಬಂಧಿಸಿದಂತೆ 6183 ಕಟ್ಟಡಗಳಿದ್ದು ಇದರಲ್ಲಿ ಯಾವುದೇ ದಾಖಲೇ ಇಲ್ಲದ ಸುಮಾರು 847 ಕಟ್ಟಡಗಳಿದ್ದು, ಇವು ಅನಿರ್ಧರಿತ ಅಕ್ರಮ ಕಟ್ಟಡಗಳಾಗಿವೆ ಎಂದು ಕಂದಾಯ ಅಧಿಕಾರಿ ಸುರೇಶ್‌ ತಿಳಿಸಿದರು. ಅಧಿಕಾರಿ ಹೇಳುತ್ತಿದ್ದಂತೆ ಎಲ್ಲ ಸದಸ್ಯರು ಯಾಕೆ ಇಂತವರ ಮೇಲೆ ಇನ್ನೂ ಕ್ರಮ ಅಗಿಲ್ಲ ಎಂದು ಸಿಡಿಮಿಡಿಗೊಂಡರು.

ಆಗ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್‌.ಸಿ.ನರಸಿಂಹಮೂರ್ತಿ ಮಾತನಾಡಿ, ಮುಂದಿನ ಸಭೆಯೊಳಗೆ ಪುರಸಭೆ ವ್ಯಾಪ್ತಿಯಲ್ಲಿ ಯಾರು ಅಕ್ರಮ ಆಸ್ತಿ ಹೊಂದಿದ್ದಾರೆ, ಯಾರು ಕಟ್ಟಡ ನಿರ್ಮಾಣಕ್ಕೆ ಪುರಸಭೆಯಿಂದ ಪರವಾನಗಿ ಪಡೆಯದೇ ನಿರ್ಮಾಣ ಮಾಡುತ್ತಿದ್ದಾರೆ, ಅವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ನಿಮ್ಮ ಮೇಲೆಯೇ ನಾವು ನಡವಳಿ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕೆ ಕಳುಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಅಕ್ರಮ ತಡೆಗೆ ಸಮಿತಿ ರಚನೆ: ಅಕ್ರಮಗಳ ಬಗ್ಗೆ ಅಧಿಕಾರಿಗಳಿಂದಲೆ ತಿಳಿದು ಬೆಚ್ಚಿ ಬಿದ್ದ ಆಡಳಿತ ಮಂಡಳಿ ಸದಸ್ಯರು ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಹಾಗೂ ನಿರ್ಮಾಣ ಆಗಿರುವ ಕಟ್ಟಡಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ಹಾಗೂ ಅಕ್ರಮ ನಡೆಯದಂತೆ ತಡೆಯುವ ಸಲುವಾಗಿ ಮುಖ್ಯಾಧಿಕಾರಿ ವಿಜಯ್‌ ಕುಮಾರ್‌ ನೇತೃತ್ವದಲ್ಲಿ ಕಿರಿಯ ಎಂಜಿನಿಯರ್‌ ಹರ್ಷ, ಪರಿಸರ ಎಂಜಿನಿಯರ್‌ ತೇಜಸ್ವಿನಿ, ಆರೋಗ್ಯ ನಿರೀಕ್ಷಕ ಹರೀಶ್‌ ಮತ್ತು ಕಂದಾಯ ಅಧಿಕಾರಿ ಸುರೇಶ್‌ ಒಳಗೊಂಡ ಸಮಿತಿಯೊಂದನ್ನು ರಚಿಸಿ ಮುಂದಿನ ಸಭೆಯೊಳಗೆ ಪುರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮ ಕಟ್ಟಡಗಳ ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಿದರು.

ಅಧಿಕಾರಿಗಳೇ ಶಾಮೀಲು: ಸದಸ್ಯ ವಿವೇಕ್‌ ಮಾತನಾಡಿ, ಕಚೇರಿಗೆ ಸರಿಯಾಗಿ ಅಧಿಕಾರಿಗಳು ಬರುತ್ತಿಲ್ಲ, ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ, ಪ್ರಶ್ನಿಸಿದರೆ ನಮ್ಮನೆ ನೀನು ಯಾರು ನಮ್ಮನ್ನು ಕೇಳಲು ಅಂತಾರೇ ಚುನಾಯಿತ ಜನಪ್ರತಿನಿಧಿಗಳಿಗೆ ಬೆಲೆ ಕೊಡದ ಇಂತ ಅಧಿಕಾರಿಗಳು ಇಲ್ಲಿರುವುದೇ ಬೇಡ. ಜೊತೆಗೆ ಇಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತಲು ಇಲ್ಲಿನ ಅಧಿಕಾರಿಗಳು ಸಾಥ್‌ ನೀಡುತ್ತಿದ್ದಾರೆ, ಯಾವುದೇ ದಾಖಲೆಗಳನ್ನು ಇ-ಆಸ್ತಿ ತಂತ್ರಾಂಶಕ್ಕೆ ನಮೂದಿಸುತ್ತಿಲ್ಲ, ನಾವು ಬಂದರೂ ಕೆಲಸ ಆಗುತ್ತಿಲ್ಲ, ಅದೇ ಇಲ್ಲಿ ಬ್ರೋಕರ್‌ಗಳು ಯಾವ ದಾಖಲೆ ಬೇಕಾದರು ಒಂದೇ ದಿನದಲ್ಲಿ ಪಡೆಯುತ್ತಿದ್ದು, ಇಲ್ಲಿನ ಅಧಿಕಾರಿಗಳು ಇದುವರೆಗೆ ನಡೆದಿರುವ ಅಕ್ರಮಗಳಲ್ಲಿ ಪಾಲುದಾರರಾಗಿದ್ದಾರೆ ಎಂದು ಅರೋಪಿಸಿದರು.

ಪುಟ್‌ಪಾತ್‌ ತೆರವು ನಿಶ್ಚಿತ: ಪುಟ್‌ಪಾತ್‌ ತೆರವು ವಿಚಾರವಾಗಿ ಪ್ರಸ್ತಾಪವಾಗಿ ಮುಂದಿನ ಸಭೆಯಲ್ಲಿ ಪುರಸಭೆಯ ಪರಿಮಳ ಹೋಟೆಲ್‌ ಜಾಗದಲ್ಲಿ ಎಲ್ಲ ಪುಟ್‌ಪಾತ್‌ ವ್ಯಾಪಾರಿಗಳಿಗೂ ತಾತ್ಕಾಲಿಕ ಶೆಡ್‌ ನಿರ್ಮಾಣ ಮಾಡಲು ಸುಮಾರು 10 ಲಕ್ಷ ರೂ. ಗಳ ಅಂದಾಜು ಪಟ್ಟಿ ತಯಾರು ಮಾಡಿ ಸಲ್ಲಿಸುವಂತೆ ಕಿರಿಯ ಎಂಜಿನಿಯರ್‌ ಹರ್ಷವರ್ಧನ್‌ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್‌.ಸಿ.ನರಸಿಂಹಮೂರ್ತಿ ಸೂಚಿಸಿದರು.

ಉಪಾಧ್ಯಕ್ಷೆ ಸುಮಾ ಸಂತೋಷ್‌, ಸದಸ್ಯರಾದ ಪುಟ್ಟಬಸವನಾಯ್ಕ, ತೋಟದ ರಾಜಣ್ಣ, ಅನ್ಸಾರ್‌ ಅಹಮದ್‌, ತಾಜ್‌, ಉಮಾಶಂಕರ್‌, ಅನಿಲ್‌, ವಿವೇಕ್‌, ಮಹೇಶ್ವರಿ ಗುರುಮಲ್ಲು, ಸುಹಾಸಿನಿ ದಿನೇಶ್‌, ಮುಖ್ಯಾಧಿಕಾರಿ ವಿಜಯ್‌ ಕುಮಾರ್‌, ಕಿರಿಯ ಎಂಜಿನಿಯರ್‌ ಹರ್ಷ, ಪರಿಸರ ಎಂಜಿನಿಯರ್‌ ತೇಜಸ್ವಿನಿ, ಅಧಿಕಾರಿಗಳಾದ ಸಿದ್ದಯ್ಯ, ಶಫಿವುಲ್ಲಾ, ಕಂದಾಯ ಅಧಿಕಾರಿ ಸುರೇಶ್‌, ವೀಣಾ, ಹರೀಶ್‌ ಇತರರು ಇದ್ದರು.

ವರದಿ ನೀಡದಿದ್ದರೆ, ಡೀಸಿಗೆ ದೂರು
ಪಟ್ಟಣದಲ್ಲಿ ಪರವಾನಗಿ ಪಡೆಯದೆ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇನ್ನೂ ಅನೇಕ ಅಕ್ರಮಗಳು ನಡೆದಿವೆ, ಅಕ್ರಮಗಳು ನಿಲ್ಲಬೇಕು, ಹಾಗಾಗಿ 5 ಜನ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಮುಂದಿನ ಸಭೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಂಪೂರ್ಣ ವರದಿ ನೀಡಬೇಕು, ತಪ್ಪಿದಲ್ಲಿ ಇಲ್ಲಿನ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಂತೆ ನಾನೇ ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇನೆ.
-ಪುಟ್ಟಬಸವನಾಯ್ಕ, ಸದಸ್ಯ, ಪುರಸಭೆ ಎಚ್‌.ಡಿ.ಕೋಟೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next