ವಾಷಿಂಗ್ಟನ್ : ಅಮೆರಿಕದ ಅಲಾಸ್ಕ ದಕ್ಷಿಣ ಕರಾವಳಿಯಲ್ಲಿ ಇಂದು ಮಂಗಳವಾರ 8.2 ಅಂಕಗಳ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿರುವುದಾಗಿ ಅಮೆರಿಕ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ.
ಅಲಾಸ್ಕ ಮಾತ್ರವಲ್ಲದೆ ಕೆನಡ ಪಶ್ಚಿಮ ಕರಾವಳಿಗೂ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ರಾಷ್ಟ್ರೀಯ ಸುನಾಮತಿ ಎಚ್ಚರಿಕೆ ಕೇಂದ್ರ ಹೇಳಿದೆ.
ಸ್ಥಳೀಯ ಕಾಲಮಾನ ಬೆಳಗ್ಗೆ 9.31ರ ಹೊತ್ತಿಗೆ ಅಲಾಸ್ಕ ಕೊಲ್ಲಿಯಲ್ಲಿ 280 ಕಿ.ಮೀ. ಆಗ್ನೇಯದಲ್ಲಿರುವ ಕೊಡಿಯಾಕ್ ಪಟ್ಟಣದಲ್ಲಿ ಭೂಕಂಪ ಸಂಭವಿಸಿತು ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ಹೇಳಿದೆ. ಈ ಭೂಕಂಪದ ಕೇಂದ್ರ ಬಿಂದು ಸಾಗರದಲ್ಲಿ 10 ಕಿ.ಮೀ. ಆಳದಲ್ಲಿ ಇತ್ತೆಂದು ಅದು ತಿಳಿಸಿದೆ.
ಅಮೆರಿಕದ ಪಶ್ಚಿಮ ಕರಾವಳಿ, ಕ್ಯಾಲಿಫೋರ್ನಿಯದ ಸಂಪೂರ್ಣ ಕರಾವಳಿ ಮತ್ತು ಒರೆಗಾನ್ ಹಾಗೂ ವಾಷಿಂಗ್ಟನ್‌ನ ಕೆಲ ಭಾಗಗಳು ಮಧ್ಯಮ ಸುನಾಮಿಗೆ ಈಡಾಗಬಹುದು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.
ಈ ಪ್ರಬಲ ಭೂಕಂಪದ ಪರಿಣಾಮವಾಗಿ ಉಂಟಾಗಿರಬಹುದಾದ ಜೀವ ಹಾನಿ, ನಾಶ ನಷ್ಟದ ಕುರಿತ ಯಾವುದೇ ವರದಿಗಳು ಈ ತನಕ ಬಂದಿಲ್ಲ.