Advertisement

ಬೆಳಗಾವಿಯಲ್ಲಿ ಜಾನುವಾರುಗಳ 82 ಆ್ಯಂಬುಲೆನ್ಸ್ ಲೋಕಾರ್ಪಣೆ: ಸಚಿವ ಚವ್ಹಾಣ್

06:18 PM Jul 17, 2022 | Team Udayavani |

ಬೆಂಗಳೂರು: ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಜಾನುವಾರುಗಳ ಸಂರಕ್ಷಣೆ ಮತ್ತು ಆರೋಗ್ಯ ಸೇವೆಗಾಗಿ 82 ಆ್ಯಂಬುಲೆನ್ಸ್ ಗಳನ್ನು ಜುಲೈ 19 ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಜುಲೈ 19ರಂದು ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಹಿರಿಯ ಸಚಿವರುಗಳು, ಸಂಸದರು, ಸ್ಥಳೀಯ ಶಾಸಕರು ಸಮ್ಮುಖದಲ್ಲಿ ಸುವರ್ಣಸೌಧದ ಆವರಣದಲ್ಲಿ ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಲೋಕಾರ್ಪಣೆ ನೇರವೇರಿಸಲಾಗುವುದು ಎಂದು ತಿಳಿಸಿದ್ದಾರೆ.

ರೈತರಿಗೆ, ಜಾನುವಾರು ಸಾಕಾಣಿಕೆದಾರರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಾನುವಾರುಗಳ ಸಂರಕ್ಷಣೆ, ಪಾಲನೆ ಮತ್ತು ಆರೋಗ್ಯ ರಕ್ಷಣೆಗಾಗಿ ಸುಸಜ್ಜಿತ ಶಸ್ತ್ರ ಚಿಕಿತ್ಸಾ ವಾಹನಗಳ ಮೂಲಕ ಪಶು ಸಂಜೀವಿನಿ ಯೋಜನೆ ಜಾರಿಗೆ ತರಲಾಗಿತ್ತು. ಇದರ ಮುಂದುವರೆದ ಭಾಗವೇ ಸಂಚಾರಿ ಪಶು ಚಿಕಿತ್ಸಾ ವಾಹನವಾಗಿದೆ. ರಾಜ್ಯದಲ್ಲಿ ದನ, ಎಮ್ಮೆ, ಕುರಿ, ಮೇಕೆ ಮತ್ತು ಹಂದಿ ಸೇರಿದಂತೆ 290 ಲಕ್ಷ ಜಾನುವಾರುಗಳಿದ್ದು, ಪ್ರತಿ ಒಂದು ಲಕ್ಷ ಜಾನುವಾರುಗಳಿಗೆ ಒಂದು ಸಂಚಾರಿ ಚಿಕಿತ್ಸಾ ವಾಹನವನ್ನು ಕೇಂದ್ರ ಸರ್ಕಾರದಿಂದ ಒದಗಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಗೊಪ್ರೇಮಿ ಗೋಭಕ್ತ ಪ್ರಧಾನಮಂತ್ರಿಯವರಾದ ನರೇಂದ್ರಮೋದಿ ಅವರ ಕನಸಿನ ಯೋಜನೆಯಾಗಿದೆ. 275 ಪಶು ಸಂಚಾರಿ ಚಿಕಿತ್ಸಾ ವಾಹನಗಳು ಕೇಂದ್ರ ಸರ್ಕಾರದ ಜನಪರ ಯೋಜನೆಯದ್ದಾಗಿದೆ. ಆ್ಯಂಬುಲೆನ್ಸಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ (60:40) ಅನುಪಾತದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಇಂತಹ ಜನಪರ ಯೋಜನೆ ಅನುಷ್ಠಾನಕ್ಕೆ ಸಹಕರಿಸಿದ ಪ್ರಧಾನಿ ನರೇಂದ್ರಮೋದಿ, ಕೇಂದ್ರ ಪಶು ಸಂಗೋಪನೆ ಸಚಿವ ಪುರುಷೋತ್ತಮ್ ರೂಪಾಲ್ ಜೀ ಅವರಿಗೆ ಅಭಿನಂದನೆ ಸಲ್ಲಿಸಿರುವ ಸಚಿವ ಪ್ರಭು ಚವ್ಹಾಣ್ ಅವರು, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಗೋಸಂರಕ್ಷಣೆ ಮಾಡಲಾಗುತ್ತಿದೆ ಎಂದು ಸ್ವಷ್ಟಪಡಿಸಿದ್ದಾರೆ.

ಸಂಚಾರಿ ಪಶು ಚಿಕಿತ್ಸಾ ವಾಹನಗಳ ನಿಗಾ ವ್ಯವಸ್ಥೆಗಾಗಿ ಪ್ರತ್ಯೇಕ ಕಾಲ್ ಸೆಂಟರ್ ಸ್ಥಾಪಿಸಲಾಗಿದ್ದು, ರೈತರಿಂದ 8277100200 ಅಥವಾ 1962ಕ್ಕೆ ಕರೆ ಬಂದ ತಕ್ಷಣ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿ ಚಿಕಿತ್ಸಾ ವಾಹನದಲ್ಲಿ ಪಶು ವೈದ್ಯ, ಪಶು ಸಹಾಯಕ ಮತ್ತು ವಾಹನ ಚಾಲಕ ಕಂ ಡಿ ದರ್ಜೆ ನೌಕಕರು ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದ್ದಾರೆ.

Advertisement

ನಾನು ಪಶು ಸಂಗೋಪನೆ ಇಲಾಖೆ ಸಚಿವನಾದ ನಂತರದಲ್ಲಿ ರಾಜ್ಯ ಸರ್ಕಾರದ ವತಿಯಿಂದ 15 ಪಶು ಚಿಕಿತ್ಸಾ ವಾಹನಗಳನ್ನು ಪಶು ಸಂಜೀವಿನಿ ಹೆಸರಲ್ಲಿ ಲೋಕಾರ್ಪಣೆ ಮಾಡಿದ್ದು ಗೋಸಂಕುಲಗಳ ಆರೋಗ್ಯ ಸೇವೆಗಾಗಿ ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರವು ಪಶು ಸಂಜೀವಿನಿ ಕಾರ್ಯಕ್ರಮವನ್ನು ಪ್ರಶಂಸಿಸಿ ರಾಜ್ಯಕ್ಕೆ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಒದಗಿಸಿದ್ದು, ದೇಶದಲ್ಲಿಯೇ ಮೊದಲಾಗಿದೆ.ಇದರ ಭಾಗವಾಗಿ ಬೆಂಗಳೂರು ವಿಭಾಗದ 70 ಅಂಬ್ಯುಲೆನ್ಸ್ ಅನ್ನು ಮೇ.7ರಂದು ಲೋಕಾರ್ಪಣೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಚಿಕ್ಕಮಗಳೂರು, ವಿಜಯಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಜಿಲ್ಲಾ ಸರ್ಕಾರಿ ಗೋಶಾಲೆಗಳು ಕಾರ್ಯನಿರ್ವಹಿಸುವ ಮೂಲಕ ಅಕ್ರಮ ಕಸಾಯಿಖಾನೆಗಳ ಪಾಲಾಗುತ್ತಿದ್ದ ಜಾನುವಾರುಗಳನ್ನು ರಕ್ಷಣೆ ಮಾಡಿ ಪಾಲನೆ ಮತ್ತು ಪೋಷಣೆ ಮುಖೇನ ಗೋಸಂತತಿಯನ್ನು ಸಂರಕ್ಷಣೆಯಲ್ಲಿ ಸದಾ ತೋಡಗಿಸಿಕೊಂಡಿದ್ದೇನೆ ಎಂದು ವಿವರಿಸಿದ್ದಾರೆ.

ಆರೋಗ್ಯ ಸೇವೆ ತುರ್ತು ಸಂದರ್ಭಗಳಲ್ಲಿ ಜನರು 108ಕ್ಕೆ ಕರೆ ಮಾಡಿದರೆ ಆ್ಯಂಬುಲೆನ್ಸ್ ಬರುತ್ತೆ. ಆದರೆ ಮಾತು ಬಾರದ ಜಾನುವಾರುಗಳ ಆರೋಗ್ಯ ಸಮಸ್ಯೆಗಳು ಎದುರಾದಾಗ ಏನು ಮಾಡಬೇಕೆಂದು ಯೋಚಿಸಿದಾಗ ಗೋಚರಿಸಿದ ಪಶು ಚಿಕಿತ್ಸಾ ವಾಹನವನ್ನು ಪಶು ಸಂಜೀವಿನಿ ಆ್ಯಂಬುಲೆನ್ಸ್ ಹೆಸರಲ್ಲಿ ಅನುಷ್ಠಾನಕ್ಕೆ ತರಲಾಗಿತ್ತು ಎಂದು ಪಶು ಸಂಜೀವಿನಿ ಆ್ಯಂಬುಲೆನ್ಸ್ ಕುರಿತು ತಿಳಿಸಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆ, ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ, ಪ್ರಾಣಿ ಸಹಾಯವಾಣಿ ಕೇಂದ್ರ ಸ್ಥಾಪನೆ, ಜಿಲ್ಲೆಗೊಂದು ಸರ್ಕಾರಿ ಗೋಶಾಲೆ, 400 ಪಶು ವೈದ್ಯರ ನೇಮಕಾತಿ, 250 ಪಶು ಪರಿವೀಕ್ಷಕರ ನೇಮಕಾತಿ, ಗೋಮಾತಾ ಸಹಕಾರ ಸಂಘ, ಪುಣ್ಯಕೋಟಿ ದತ್ತು ಯೋಜನೆ, ಆತ್ಮ ನಿರ್ಭರ ಗೋಶಾಲೆಗಳನ್ನಾಗಿ ಪರಿವರ್ತಿಸುವ ಕೆಲಸ ದೇಶದಲ್ಲಿಯೇ ರಾಜ್ಯದಲ್ಲೇ ಮೊದಲು ಎಂದು ಪ್ರಭು ಚವ್ಹಾಣ್ ಮಾಹಿತಿ ಹಂಚಿಕೊಂಡಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ನಂತರದಲ್ಲಿ 20000ಕ್ಕೂ ಮೇಲ್ಪಟ್ಟು ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದ್ದು, 900 ಎಫ್.ಐ.ಆರ್ ದಾಖಲಿಸಲಾಗಿದೆ. ಬಕ್ರೀದ್ ಸಂದರ್ಭದಲ್ಲಿ ಕಳೆದ ವರ್ಷಕ್ಕಿಂತ ಈ ಗೋವುಗಳು ಕಸಾಯಿಖಾನೆ ಪಾಲಾಗುವುದನ್ನು ತಪ್ಪಿಸಿ, ಶೇ. 50%-60% ಗೋವುಗಳ ರಕ್ಷಣೆಯಾಗಿದೆ ಎಂದು ಅನೇಕ ಜಾನುವಾರು ಪ್ರೀಯರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಪ್ರಭು ಚವ್ಹಾಣ್ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next