Advertisement

8,000 ಹೆಕ್ಟೇರು ಬಿತ್ತನೆ ಗುರಿ,ಬೀಜ ಕೊರತೆಗೆ ಬದಲಿ ವ್ಯವಸ್ಥೆ

06:00 AM Jun 14, 2018 | Team Udayavani |

ಕಾರ್ಕಳ: ತಾಲೂಕಿನ ರೈತರು ಬಿತ್ತನೆ ಕಾರ್ಯಕ್ಕಾಗಿ ಗದ್ದೆಗಳನ್ನು ಸಜ್ಜುಗೊಳಿಸುವ ಕಾಯಕದಲ್ಲಿ ತೊಡಗಿದ್ದು, ಕೃಷಿ ಚಟುವಟಿಕೆ ವೇಗ ಪಡೆದುಕೊಂಡಿದೆ. ಪ್ರಾರಂಭದಲ್ಲೇ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಬೆಟ್ಟು ಗದ್ದೆಗಳನ್ನು ಕೂಡ ಬಿತ್ತನೆಗೆ ತಯಾರುಗೊಳಿಸಲು ಪೂರಕ ವಾತಾವರಣ ನಿರ್ಮಾಣವಾಗಿದೆ.

Advertisement

8,000 ಹೆಕ್ಟೇರು ಗುರಿ
ತಾಲೂಕಿನಲ್ಲಿ 2018ರ ಸಾಲಿನಲ್ಲಿ ಒಟ್ಟು 8,000 ಹೆಕ್ಟೇರು ಪ್ರದೇಶಗಳಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 2017ರಲ್ಲಿಯೂ 8,000 ಹೆಕ್ಟೇರು ಗುರಿ ಹೊಂದಲಾಗಿದ್ದು, 7,850 ಹೆಕ್ಟೇರು ಪ್ರದೇಶದಲ್ಲಿ ಬಿತ್ತನೆಯಾಗಿದೆ. 2016ರಲ್ಲಿ 8,500 ಹೆಕ್ಟೇರು ಗುರಿ ಹೊಂದಲಾಗಿತ್ತು, ಅದರಲ್ಲಿ 8,240 ಹೆಕ್ಟೇರು ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು.

ಎಂಒ4 ಕೊರತೆಗೆ ಬದಲಿ ವ್ಯವಸ್ಥೆ
ರೈತರು ಎಂಒ4 ಬೀಜಕ್ಕಾಗಿ ಈ ಬಾರಿ ಹೆಚ್ಚಿನ ಬೇಡಿಕೆ ಇಟ್ಟಿದ್ದು, ಬೀಜದ ಕೊರತೆ ಎದುರಾದ ಕಾರಣ ಉಮಾ ಹೆಸರಿನ ಬೀಜವನ್ನು ರೈತರಿಗೆ ಪೂರೈಸಲಾಗಿದೆ. ಜತೆಗೆ ಅನ್ನಪೂರ್ಣ, ಬಿಳಿ ಜಯ ಬೀಜಗಳು ಲಭ್ಯವಾಗಿದೆ. ಇವೆಲ್ಲವೂ ರೈತರಿಗೆ ಬೇಕಾದ ಸಮಯದಲ್ಲಿ ದೊರೆತಿದೆ.

ನೇರ ಬಿತ್ತನೆ ಕಾರ್ಯ ಪ್ರಾರಂಭ
ನೇರ ಬಿತ್ತನೆ ಮಾಡುವ ರೈತರು ಕೆಲವು ಭಾಗದಲ್ಲಿ ಈಗಾಗಲೇ ಬಿತ್ತನೆ ಆರಂಭಿಸಿದ್ದಾರೆ. ಇನ್ನು ನಾಟಿ ಕಾರ್ಯಕಗಳು ನಿಧಾನವಾಗಿ ಪ್ರಾರಂಭವಾಗುತ್ತಿದೆ. ಇದುವರೆಗೆ 15 ಹೆಕ್ಟೇರು ಪ್ರದೇಶದಲ್ಲಿ ಕಾರ್ಯ ಮುಗಿದಿದೆ. ಈ ಬಾರಿ ಬೀಜದ ಕೊರೆತೆಯಿಂದಾಗಿ ಬಿತ್ತನೆ ಅಲ್ಪಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬದಲಿ ಬೀಜದ ವ್ಯವಸ್ಥೆ ಮಾಡಲಾಗಿದೆ
ಕಳೆದ ಬಾರಿ ಶಿವಮೊಗ್ಗದಲ್ಲಿ ಮಳೆ ಇಲ್ಲದೇ ಬೆಳೆ ಸಮಸ್ಯೆಯಾಗಿ ಉತ್ಪಾದನೆ ಕಡಿಮೆಯಾಗಿತ್ತು. ಹೀಗಾಗಿ ಇಲ್ಲಿನ ರೈತರಿಗೆ ಬೀಜದ ಕೊರತೆಯಾಗಿದೆ. ಸದ್ಯ ಬದಲಿ ಬೀಜ ನೀಡಲಾಗಿದ್ದು, ಲೋಕಲ್‌ ತಳಿಯ ಬೀಜಗಳನ್ನು ಕೂಡ ಬಳಕೆ ಮಾಡಿ ಸಮಸ್ಯೆ ನಿವಾರಿಸಲಾಗಿದೆ. ಅಂದಾಜು 200 ಹೆಕ್ಟೇರ್‌ನಷ್ಟು ಪ್ರದೇಶಕ್ಕೆ ಬೀಜ ಕಡಿಮೆ ಆಗಬಹುದು. ಕರ್ನಾಟಕ ಸ್ಟೇಟ್‌ ಸೀಡ್‌ ಕಾರ್ಪೋರೇಶನ್‌ ಅವರು ಬೀಜ ಪೂರೈಸಿದ್ದಾರೆ.
– ಜಯರಾಜ್‌ ಪ್ರಕಾಶ್‌,
ಕಾರ್ಕಳ ತಾಲೂಕು ಸಹಾಯಕ ಕೃಷಿ ನಿದೇರ್ಶಕ

Advertisement

ನೀರಿನ ಸಮಸ್ಯೆಯಿಲ್ಲ
ಪ್ರಾರಂಭದಲ್ಲೇ ಉತ್ತಮ ಮಳೆಯಾಗಿದೆ. ಬಿತ್ತನೆಗೆ ನೀರಿನ ಸಮಸ್ಯೆಯಿಲ್ಲ. ಆದರೆ ಬೈಲು ಗದ್ದೆಗಳಲ್ಲಿ ನೀರು ಹೆಚ್ಚಿರುವುದರಿಂದ ಸದ್ಯಕ್ಕೆ ಬಿತ್ತನೆ ಮಾಡುವುದು ಕಷ್ಟ. ಮಳೆಯ ನೀರನ್ನೇ ನಂಬಿಕೊಂಡು ಬಿತ್ತೆನೆ ಮಾಡುವವರಿಗೆ ಈ ಬಾರಿ ಪ್ರಾರಂಭದಲ್ಲೇ ಬಿತ್ತನೆ ಪ್ರಾರಂಭಿಸಿದ್ದಾರೆ.
– ಶಿವಪ್ಪ ಪೂಜಾರಿ, ತೆಳ್ಳಾರು ರೈತ

Advertisement

Udayavani is now on Telegram. Click here to join our channel and stay updated with the latest news.

Next