Advertisement
ಜಿಲ್ಲಾ ಹಂತದ ಎಲ್ಲಾ ಶಾಲೆಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಮಾಹಿತಿ ಆಧರಿಸಿ ಸರ್ವಶಿಕ್ಷಾ ಅಭಿಯಾನದ ಅಧಿಕಾರಿಗಳು ಈ ಸಮೀಕ್ಷೆ ನಡೆಸಿದ್ದಾರೆ. ಈ ಕುರಿತು ಸರ್ವಶಿಕ್ಷಾ ಅಭಿಯಾನದ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದು, “ಜಿಲ್ಲಾ ಉಪನಿರ್ದೇಶಕರಿಂದ ಸಮೀಕ್ಷೆಯ ಮಾಹಿತಿ ಸಂಗ್ರಹಿಸಲಾಗಿದೆ. ರಾಜ್ಯದ ಸುಮಾರು 8 ಸಾವಿರ ಮಕ್ಕಳು ಶಾಲಾ ಶಿಕ್ಷಣದಿಂದ ದೂರ ಉಳಿದಿರುವುದು ಸಮೀಕ್ಷೆಯಿಂದ ಕಂಡುಬಂದಿದೆ’ ಎಂದಿದ್ದಾರೆ.
ರಾಯಚೂರು, ಯಾದಗಿರಿ, ಕುಲಬುರಗಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಲಾ 500ಕ್ಕೂ ಅಧಿಕ ಮಕ್ಕಳು ಶಾಲಾ ಶಿಕ್ಷಣದಿಂದ ಹೊರಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಲೆಗೆ ಸೇರಿ ಅರ್ಧಕ್ಕೆ ಬಿಟ್ಟ ಮತ್ತು ಶಾಲೆಯ ಮೆಟ್ಟಿಲು ಏರದೇ ಇರುವ ಮಕ್ಕಳನ್ನು ಸಮೀಕ್ಷೆಯ ವೇಳೆ ಪತ್ತೆಹಚ್ಚಲಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಸುಮಾರು ಒಂದು ಸಾವಿರ ಮಕ್ಕಳು ಶಾಲೆಯ ಮೆಟ್ಟಿಲನ್ನೇ ತುಳಿದಿಲ್ಲ ಎನ್ನುವ ಅಂಶವನ್ನು ಸಮೀಕ್ಷೆಯಲ್ಲಿ ಉಲ್ಲೇಖೀಸಲಾಗಿದೆ. 2016ರಲ್ಲಿ ಸರ್ವಶಿಕ್ಷಾ ಅಭಿಯಾನ ನಡೆಸಿದ ಸಮೀಕ್ಷೆಯಲ್ಲಿ 8,318 ಮಕ್ಕಳು ಶಾಲೆಯಿಂದ ಹೊರಗಿದ್ದರು. ಅದರಲ್ಲಿ ಬೆಂಗಳೂರು ನಗರ ಜಿಲ್ಲೆಯ 1795, ಕಲಬುರಗಿ ಜಿಲ್ಲೆಯ 1389 ಹಾಗೂ ಯಾದಗಿರಿ ಜಿಲ್ಲೆಯ 635 ಮಕ್ಕಳು ಸೇರಿದ್ದರು. ಆ ಎಲ್ಲಾ ವಿದ್ಯಾರ್ಥಿಗಳನ್ನು ವಿವಿಧ ಕಾರ್ಯಕ್ರಮದ ಮೂಲಕ ಪುನರ್ ಶಾಲೆಗೆ ಕರೆತರಲಾಗಿದೆ. ವಲಸೆ ಕುಟುಂಬ ಜಾಸ್ತಿ ಇರುವ ಬೆಂಗಳೂರು ನಗರ ಜಿಲ್ಲೆಯಲ್ಲಿ ಈ ವರ್ಷ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಶಿಕ್ಷಣ ವಂಚಿತ ಮಕ್ಕಳು ಇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Related Articles
2017 -18ನೇ ಸಾಲಿನಲ್ಲಿ ಶಾಲಾ ಶಿಕ್ಷಣದಿಂದ ಹೊರಗುಳಿದ ವಿದ್ಯಾರ್ಥಿಗಳ ಸಮೀಕ್ಷೆಗೆ ಸರ್ವಶಿಕ್ಷಾ ಅಭಿಯಾನದಿಂದ ಎನ್‌ಜಿಒಗಳ ಸಹಕಾರ ಪಡೆದುಕೊಂಡಿಲ್ಲ. ಡಿಸೆಂಬರ್ ತಿಂಗಳಲ್ಲಿ ಎಸ್‌ಎಸ್‌ಎ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಮತ್ತು ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೆ ಒಳಪಟ್ಟ ಶಾಲೆಗಳಿಗೆ ಭೇಟಿ ನೀಡಿದ್ದಾರೆ. 2ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಮಾಹಿತಿ ಪಡೆದಿದ್ದಾರೆ.
Advertisement
ಕಳೆದ ವರ್ಷ ಒಂದನೇ ತರಗತಿಗೆ ಸೇರಿದ ಮಗು ಈ ವರ್ಷ ಎರಡನೇ ತರಗತಿಯಲ್ಲಿ ಇದೆಯೋ? ಇಲ್ಲವೋ? ಎಂಬುದನ್ನು ಪರಿಶೀಲಿಸಲಾಗಿದೆ. ಮಗು ಬೇರೆ ಕಡೆ ವರ್ಗಾವಣೆ ಪಡೆದಿದ್ದರೆ ಅದರ ಮಾಹಿತಿಯನ್ನೂ ಶಾಲೆಗಳಿಂದ ಪಡೆಯಲಾಗಿದೆ. ವಿದ್ಯಾರ್ಥಿಗಳ ಹಾಜರಿ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಶಾಲೆಗೆ ಸತತವಾಗಿ ಗೈರಾಗಿರುವ ವಿದ್ಯಾರ್ಥಿಗಳ ವಿವರ ಪಡೆದು ಜಿಲ್ಲಾವಾರು ವರದಿ ಸಿದ್ಧಪಡಿಸಲಾಗಿದೆ. ಈ ಎಲ್ಲಾ ಮಾಹಿತಿಯನ್ನು ಬೆಂಗಳೂರಿನ ಎಸ್‌ಎಸ್‌ಎ ಕೇಂದ್ರ ಕಚೇರಿಗೆ ಸಲ್ಲಿಸಲಾಗುತ್ತಿದೆ.
2013ರಲ್ಲಿ ಸಮೀಕ್ಷೆ ನಡೆದಿತ್ತು2013ರಲ್ಲಿ ರಾಜ್ಯದ ಶಾಲಾ ಶಿಕ್ಷಣ ವಂಚಿತ ಮಕ್ಕಳ ಸಮಗ್ರ ಸಮೀಕ್ಷೆ ನಡೆಸಲಾಗಿತ್ತು. ಆಗ 40 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಕಂಡುಬಂದಿತ್ತು. ಆ ಎಲ್ಲಾ ಮಕ್ಕಳಿಗೆ ವಿಶೇಷ ತರಬೇತಿ ಮತ್ತು ಕಾರ್ಯಕ್ರಮದ ಮೂಲಕ ಪುನರ್ ಶಾಲಾ ಶಿಕ್ಷಣ ನೀಡಲಾಗಿದೆ. ಈ ವರ್ಷದ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಮತ್ತೆ ಸಮಗ್ರ ಸಮೀಕ್ಷೆ ನಡೆಯಲಿದೆ. ಶಾಲಾ ಶಿಕ್ಷಣ ವಂಚಿತ ಮಕ್ಕಳ ಸಮೀಕ್ಷೆಯನ್ನು ಡಿಸೆಂಬರ್ ತಿಂಗಳಲ್ಲಿ ಪ್ರತಿ ಶಾಲೆಗೆ ಹೋಗಿ ನಡೆಸಿದ್ದೇವೆ. ಎಲ್ಲಾ ಜಿಲ್ಲೆಗಳಿಂದ ವರದಿ ಸಂಗ್ರಹಿಸುತ್ತಿದ್ದೇವೆ. ಸುಮಾರು 8 ಸಾವಿರ ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.
– ಎಂ.ಆರ್.ಮಾರುತಿ, ಹಿರಿಯ ಕಾರ್ಯಕ್ರಮಾಧಿಕಾರಿ, ಸರ್ವಶಿಕ್ಷಾ ಅಭಿಯಾನ – ರಾಜು ಖಾರ್ವಿ ಕೊಡೇರಿ