ಬಾಗಲಕೋಟೆ: ಸುಮ್ನ ಮನ್ಯಾಗ್ ಇದ್ವಿ. ಇದು ಎಲ್ಲಿಂದ ಬಂತೋ ಕೋವಿಡ್ ಅಂತ್‌ಯಪಾ. ನನ್ನ ಮಕ್ಳು, ಮೊಮ್ಮಕ್ಕಳು ಬಿಟ್ಟು ಒಂದ್ ದಿನಾನೂ ಎಲ್ಲಿ ಹೋಗಿಲ್ಲ. ಈಗ 23 ದಿನಾ ದವಾಖ್ಯಾನ್ ಇರಬೇಕಾಯ್ತು. ಇದೆಂತ ರೋಗ್ ಯಪ್ಪಾ. ದವಾಖ್ಯಾನ್ಯಾಗ್, ಎಲ್ಲಾರೂ ನನಗ್ ತಾಯಿಯಂಗ್ ನೋಡ್ಯಾರ್. ಎಲ್ಲಾರಿಗೂ ದೇವರು ಚಲೋ ಇಡ್ಲಿಯಪ್ಪಾ…
ಮಹಾಮಾರಿ ಕೋವಿಡ್ ವೈರಸ್ ತಗುಲಿದ ಜಿಲ್ಲೆಯ 77 ಜನ ಸೋಂಕಿತರಲ್ಲೇ ಹಿರಿಯ ಸೋಂಕಿತ ವೃದ್ಧೆ ಬಾದಾಮಿ ತಾಲೂಕಿನ ಢಾಣಕಶಿರೂರಿನ 80 ವರ್ಷದ ವೃದ್ಧೆ, ಈಗ ಕೊರೊನಾ ಗೆದ್ದು ಬಂದಿದ್ದಾರೆ. ಕಳೆದ ಮೇ 7ರಂದು ತಮ್ಮ ಮನೆಯ ಪಕ್ಕದಲ್ಲಿದ್ದ ಗರ್ಭಿಣಿಯಾಗಿದ್ದ ( ಪಿ-607) ಮಹಿಳೆಯಿಂದ ಸೋಂಕು ತಗುಲಿದ್ದ 80 ವರ್ಷದ ವೃದ್ಧೆ ಪಿ-703, ಶನಿವಾರ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡರು. ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ವೃದ್ಧೆ, ಕೋವಿಡ್ ವೈರಸ್ ಕುರಿತು ತನ್ನ ಭಾಷೆಯಲ್ಲೇ ಮಾತನಾಡಿದರು.
ಮನ್ಯಾಗ್ ಸುಮ್ನ ಇದ್ವಿ: ನನಗ್ 6 ಜನ ಮಕ್ಕಳು, 10 ಜನ ಮೊಮ್ಮಕ್ಕಳು. ಎಲ್ಲಾರು ಕೂಡಿ, ಮನ್ಯಾಗ್ ಸುಮ್ನ ಇದ್ವಿ. ನನಗ್ ನೆಗಡಿ, ಕೆಮ್ಮ, ಯಾವುದೂ ಇರ್ಲಿಯಪ್ಪಾ. ಆದ್ರ ರಾತ್ರಿ ಸ್ವಲ್ಪ ಜ್ವರಾ ಬಂದಾಂಗ್ ಆಗಿದ್ರು. ನಮ್ಮ ಬಾಜೂಕಿನ ಹೊಟ್ಟಿ ಇದ್ದ ಹೆಣ್ಣು ಮಗಳಿಗಿ, ಕೋವಿಡ್ ಬಂದಿತ್ತಂತ. ನಮ್ಮೂರಿಗಿ ಇಂತಾ ಜಡ್ಡ (ರೋಗ) ಎಂದೂ ಬಂದಿರಲಿಲ್ಲ. ಹೆಣ್ಣು ಮಗಳಿಗಿ ಬಂತಾಗೇ ನಾವೆಲ್ಲ ಗಾಬರಿ ಆದ್ವಿ. ನಮಗೆಲ್ಲ ಒಂದ್ ಸಾಲ್ಯಾಗ್ ಇಟ್ಟಿದ್ರು. ನಾಕ್ ದಿನಾ ಆದ್ ಮ್ಯಾಗ್, ಅಜ್ಜಿ ನಿನಗ್ ದವಾಖ್ಯಾನಿಗಿ ಕರ್ಕೋಂಡು ಹೋಗಬೇಕು ಬಾ ಅಂದ್ರು. ಯಾಕ್ ಯಪ್ಪಾ ಎಂದು ಕೇಳ್ದೆ. ನಿನಗ್ ಕೋವಿಡ್ ಬಂದೈತಿ. ಏನೂ ಆಗಲ್ಲ ಬಾ ಅಂದ್ರು. ಗುರುವಾರ (ಮೇ 7) ದವಾಖ್ಯಾನಿಗಿ ಕರ್ಕೂಂಡು ಬಂದು, ದಿನಾ ಗುಳಿಗ್ ಕೊಡತಿದ್ರು. ಈಗ್ ಆ ರೋಗ್ ಹೋಗ್ಯಾದಂತ. ಮನಿಗಿ ಹೋಗು ಅಂದ್ರು. 14 ದಿನಾ ಎಲ್ಲಿ ತಿರಗ್ಯಾಡ್‌ಬ್ಯಾಡ್ ಅಂದಾರ. 23 ದಿನ ದವಾಖ್ಯಾನ್ಯಾಗ್ ಎಲ್ಲಾರ್ ಚಂದ್ ನೋಡ್ಯಾರ್. ತಾಯಿಯಂಗ್ ಕಾಳಜಿ ಮ್ಯಾಡ್ಯಾರ್. ಅವರಿಗಿ ದೇವರ್ ಚಲೋ ಇಡ್ಲಿ ಎಂದು ವೃದ್ಧೆ ಧನ್ಯತೆ ವ್ಯಕ್ತಪಡಿಸಿದರು.
ಅತ್ಯಂತ ಹಿರಿಯ ಸೋಂಕಿತೆ: ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 77 ಜನರಿಗೆ ಕೋವಿಡ್ ಸೋಂಕು ಖಚಿತಪಟ್ಟಿದ್ದು, ಅದರಲ್ಲಿ ಗುರುವಾರ ಬಿಡುಗಡೆಗೊಂಡ 80 ವರ್ಷದ ವೃದ್ಧೆ ಸಹಿತ ಮೂವರು ಸೇರಿದಂತೆ ಒಟ್ಟು 66 ಜನರು ಬಿಡುಗಡೆಗೊಂಡಿದ್ದಾರೆ. ಓರ್ವ ವೃದ್ಧ ಮೃತಪಟ್ಟಿದ್ದು, ಇನ್ನುಳಿದ 10 ಜನರಿಗೆ ಚಿಕಿತ್ಸೆ ಮುಂದುವರಿದಿದೆ. ಒಟ್ಟು 77 ಜನರಲ್ಲಿ ಢಾಣಕಶಿರೂರಿನ ಈ ವೃದ್ಧೆ, ಸೋಂಕಿತರಲ್ಲಿ ಅತ್ಯಂತ ಹಿರಿಯರು. 80 ವರ್ಷ ದಾಟಿದ್ದರಿಂದ ವೃದ್ಧೆಯ ಚಿಕಿತ್ಸೆಗೆ ಆಸ್ಪತ್ರೆಯ ವೈದ್ಯರು ವಿಶೇಷ ಕಾಳಜಿ ವಹಿಸಿದ್ದರು.
–ಶ್ರೀಶೈಲ ಕೆ. ಬಿರಾದಾರ