ಕೋಲಾರ: ಕೋವಿಡ್-19 ಲಾಕ್‌ಡೌನ್‌ನಿಂದ ಜನಜೀವನ ಕಷ್ಟವಾಗಿರುವ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡು ತಿಂಗಳ ಪಡಿತರವನ್ನು ವಿತರಿಸುತ್ತಿದೆ. ಇದನ್ನೇ ಬಂಡ ವಾಳ ಮಾಡಿಕೊಂಡ ಕೆಲ ನ್ಯಾಯಬೆಲೆ ಅಂಗಡಿ ಮಾಲಿಕರು, ಹಣ ಪಡೆಯುವುದು, ಉಪ್ಪು, ಸೋಪು, ಇತರೆ ಪದಾರ್ಥಗಳನ್ನು ಖರೀದಿಸಿದ್ರೆ ಮಾತ್ರ ಪಡಿತರ ಕೊಡುವುದಾಗಿ ಒತ್ತಡ ಹಾಕಿರುವ ಆರೋಪಗಳು ಸಾಕಷ್ಟು ಕೇಳಿ ಬಂದಿವೆ. ಇದರ ನಡುವೆ ಶೇ.80 ಆಹಾರ
ಪದಾರ್ಥಗಳನ್ನು ವಿತರಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾದ್ಯಂತ ಶನಿವಾರ ಮಧ್ಯಾಹ್ನ 1 ಗಂಟೆಯವರೆಗೂ ಶೇ.79.16 ಪಡಿತರ ವಿತರಣೆಯಾಗಿದ್ದರೆ, ಕೋಲಾರ ನಗರದಲ್ಲಿ ಶೇ.94.84 ಅತಿ ಹೆಚ್ಚು, ಶೇ.73.14 ಕೆಜಿಎಫ್ ನಲ್ಲಿ ಕಡಿಮೆ ಪ್ರಮಾಣದಲ್ಲಿ ಪಡಿತರ ವಿತರಣೆ ಯಾಗಿದೆ. ಜಿಲ್ಲೆಯಲ್ಲಿ 601 ನ್ಯಾಯಬೆಲೆ ಅಂಗಡಿಗಳಿದ್ದು, 12956 ಮೆಟ್ರಿಕ್ ಟನ್ ಅಕ್ಕಿ ಹಾಗೂ 1270 ಮೆಟ್ರಿಕ್ ಟನ್ ಗೋಧಿ ವಿತರಣೆ ಗುರಿ ಹೊಂದಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 3.44 ಲಕ್ಷ ಪಡಿತರ ಚೀಟಿಗಳಿದ್ದು, 2.72 ಲಕ್ಷ ಚೀಟಿಗಳಿಗೆ ಆಹಾರ ಪದಾರ್ಥ ವಿತರಿಸಲಾಗಿದೆ. ಎರಡು ಮೂರು ದಿನಗಳಲ್ಲಿ ಪಡಿತರ ಕಾರ್ಯ ಪೂರ್ಣಗೊಳ್ಳಲಿದೆ.
ಸಾಮಾಜಿಕ ಅಂತರ: ಆರಂಭಿಕ ದಿನಗಳಲ್ಲಿ ಜನರು ಪಡಿತರ ಪಡೆಯಲು ಅಂಗಡಿಗಳಿಗೆ ಮುಗಿ ಬಿದ್ದಿದ್ದರು. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಕರವಾಗಿತ್ತು. ಒಂದೆರೆಡು ದಿನ ಕಳೆಯುವುದರೊಳ ಗಾಗಿ ಪಡಿತರ ಸಿಕ್ಕೇ ಸಿಗುತ್ತದೆಯೆಂಬ ಖಾತ್ರಿ ಬಂದಿದ್ದರಿಂದ ಜನತೆ ಸಾಮಾಜಿಕ ಅಂತರ ಕಾಯ್ದಕೊಳ್ಳಲು ಆರಂಭಿಸಿದರು.
ಸೋಪು, ಉಪ್ಪು ಇತ್ಯಾದಿ ಖರೀದಿಸಿ: ಕೆಲವುನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ದರಕ್ಕಿಂತಲೂ ಹೆಚ್ಚು ಹಣ ಪಡೆಯುತ್ತಿದ್ದು, ಪಡಿತರದ ಜೊತೆಗೆ ಸೋಪು, ಉಪ್ಪು ಇತ್ಯಾದಿ ಖರೀದಿಸಲೇಬೇಕೆಂದು ಕಡ್ಡಾಯ ಮಾಡಲಾಗುತ್ತಿರುವ ದೂರುಗಳಿದ್ದವು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು, ಶ್ರೀನಿವಾಸ ಪುರ, ಮುಳಬಾಗಿಲು, ಕೆಜಿಎಫ್ ನ್ಯಾಯಬೆಲೆ ಅಂಗಡಿಗಳಿಗೆ ದಂಡ ವಿಧಿಸಿ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಪಡಿತರ ವಿತರಣೆ ದೂರುಗಳಿಗೆ ಆಹಾರ ಶಿರಸ್ತೇದಾರ್ ಹಾಗೂ ನಿರೀಕ್ಷಕರಿಗೆ ದೂರು ನೀಡಬಹುದಾಗಿದೆ.
ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ವಿತರಣೆ
ಕಾರ್ಯ 2-3 ದಿನಗಳಲ್ಲಿ ಪೂರ್ಣ ಗೊಳ್ಳುವ ನಿರೀಕ್ಷೆ ಇದೆ. ಪಡಿತರ ಪಡೆಯಲು ಇಡೀ ತಿಂಗಳು ಅವಕಾಶವಿದೆ. ಪಡಿತರ ನೀಡುವಿಕೆ ಪೂರ್ಣಗೊಂಡ ನಂತರ ಅಂಗಡಿ ಮುಚ್ಚಲಾಗುತ್ತದೆ.
●ಸಿ.ಸುಬ್ರಮಣಿ,ಆಹಾರ ನಿರೀಕ್ಷಕರು, ಕೋಲಾರ