ಶಿವಮೊಗ್ಗ: ಕೃಷಿ ಮತ್ತು ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಹೆಚ್ಚಿಸಿ ಆಹಾರ ಭದ್ರತೆ ಸುಧಾರಿಸಲು ಮತ್ತು ಗ್ರಾಮೀಣ ಬಡತನ ನಿರ್ಮೂಲನೆಗಾಗಿ ಸ್ಥಳೀಯ ಮಹಿಳೆಯರು ಸೇರಿದಂತೆ ಗ್ರಾಮೀಣ ಮಹಿಳೆಯರ ನಿರ್ಣಾಯಕ ಪಾತ್ರ ಮತ್ತು ಕೊಡುಗೆ ಗುರುತಿಸಲು ಭಾರತ ಸರ್ಕಾರ ಅಕ್ಟೋಬರ್ 15 ರಂದು ಮಹಿಳಾ ಕಿಸಾನ್ ದಿವಸ್ ಘೋಷಿಸಿದೆ ಎಂದು ಶಿವಮೊಗ್ಗ ಕೆವಿಕೆ ಗೃಹ ವಿಜ್ಞಾನಿ ಡಾ| ಜ್ಯೋತಿ ಎಂ. ರಾಥೋಡ್ ತಿಳಿಸಿದರು.
ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ಶಿಕಾರಿಪುರ ತಾಲೂಕಿನ ಹಿರೇಕೊರಲಹಳ್ಳಿ ಗ್ರಾಮದಲ್ಲಿ ಮಹಿಳಾ ಕಿಸಾನ್ ದಿವಸ್ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಶೇ.80 ರಷ್ಟು ಮಹಿಳೆಯರು ಕೃಷಿ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಗುರುತಿಸಲೆಂದೇ ಈ ದಿನ ಘೋಷಿಸಲಾಗಿದೆ.
ಇದಕ್ಕೆ “ಸಶಕ್ತ ಮಹಿಳಾ, ಸಶಕ್ತ ಭಾರತ’ ಎಂಬ ಅಡಿಬರಹ ನೀಡಲು ನಿರ್ಧರಿಸಲಾಗಿದೆ ಎಂದರು. ಗ್ರಾಮೀಣ ಕುಟುಂಬಗಳು ಮತ್ತು ಸಮುದಾಯಗಳನ್ನು ಉಳಿಸಿಕೊಳ್ಳುವಲ್ಲಿ, ಗ್ರಾಮೀಣ ಜೀವನೋಪಾ ಯವನ್ನು ಸುಧಾರಿಸುವಲ್ಲಿ ಮತ್ತು ಒಟ್ಟಾರೆ ಕೃಷಿ ಹಾಗೂ ಕುಟುಂಬದ ಯೋಗಕ್ಷೇಮದಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಹೀಗಾಗಿ ಕೃಷಿ ಜೀವವೈವಿಧ್ಯ ಸಂರಕ್ಷಣೆ ಮತ್ತು ಕೃಷಿ ಉತ್ಪಾದನೆ, ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ, ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ವಾತಾವರಣದ ಸ್ಥಿತಿ ಸ್ಥಾಪಕತ್ವ, ಕುಟುಂಬದ ಆದಾಯ, ಆರೋಗ್ಯ ಮತ್ತು ಶಿಕ್ಷಣ ಸುಧಾರಿತ ಜೀವನದ ಗುಣಮಟ್ಟ ಸುಧಾರಣೆಗೆ ಸರಕಾರದಿಂದ ಕೊಡುಗೆ ನೀಡುತ್ತಿದ್ದು ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಕೆ.ವಿ.ಕೆಯ ವಿಜ್ಞಾನಿ (ಪಶು ವಿಜ್ಞಾನ) ಡಾ| ಎಂ. ಅಶೋಕ್ ಮಾತನಾಡಿ, ಗ್ರಾಮೀಣಾಭಿವೃದ್ಧಿ ಸಚಿವಾಲಯವು ಜಾರಿಗೆ ತಂದಿರುವ ಮಹಿಳಾ ಕಿಸಾನ್ ಸಶಕ್ತಿಕರಣ್ ಪರಿಯೋಜನಾ (ಎಂಕೆಎಸ್‌ಪಿ)ಯ ಪ್ರಾಥಮಿಕ ಉದ್ದೇಶ ಮಹಿಳೆಯರು ಕೃಷಿಯಲ್ಲಿ ಭಾಗವಹಿಸುವಿಕೆ ಮತ್ತು ಉತ್ಪಾದಕತೆ ಹೆಚ್ಚಿಸುವುದಾಗಿದೆ. ವ್ಯವಸ್ಥಿತ ಹೂಡಿಕೆಗಳನ್ನು ಮಾಡುವ ಮೂಲಕ ಮಹಿಳೆಯರನ್ನು ಕೃಷಿಯಲ್ಲಿ ಸಬಲೀಕರಣಗೊಳಿಸುವುದು ಈ ಯೋಜನೆಯ ಮೂಲ ಉದ್ದೇಶ ಎಂದರು. ಕಾರ್ಯಕ್ರಮದಲ್ಲಿ ರಘು ಎ.ಎನ್. ಹಿರಿಯ ಸಂಶೋಧಕರು (ಆರ್ಯ ಯೋಜನೆ) ಕೆ.ವಿ.ಕೆ ಶಿವಮೊಗ್ಗ ಉಪಸ್ಥಿತರಿದ್ದರು.