ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರು ಜೀವನೋತ್ಸಾಹ ಹಾಗೂ ಕರ್ತವ್ಯಪ್ರಜ್ಞೆಗೆ ಹೆಸರಾದವರು. ನ್ಯಾಯಶಾಸ್ತ್ರಜ್ಞರಾಗಿ, ಬರಹಗಾರರಾಗಿ ಹಾಗೂ ಸಮಾಜಮುಖೀ ಚಿಂತಕರಾಗಿ ಈ ನಾಡಿನ ಹಿರಿಮೆಯನ್ನು ಎತ್ತರಕ್ಕೆ ಕೊಂಡೊಯ್ದವರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತಿ ಹೊಂದಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ, ಹಂಗಾಮಿ ಅಧ್ಯಕ್ಷರಾಗಿ ಕ್ರಿಯಾಶೀಲರಾಗಿರುವ ಪಾಟೀಲರು, ಈಗ 80ನೇ ವಸಂತಕ್ಕೆ ಹೆಜ್ಜೆಯಿಡುತ್ತಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಜನ್ಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಸಿರಿಗೆರೆ ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಸುಪ್ರೀಂ ಕೋರ್ಟ್‌ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ವಾಗ್ಮಿ ಡಾ. ಗುರುರಾಜ ಕರಜಗಿ, ಆಶಯ ನುಡಿಗಳನ್ನಾಡುವರು. ಗೌರವಾನ್ವಿತ ಅತಿಥಿಗಳಾಗಿ, ಮಾಜಿ ಕೇಂದ್ರ ಸಚಿವ ಶಿವರಾಜ್ ವಿ. ಪಾಟೀಲ್, ಶಾಸಕ ಶ್ಯಾಮನೂರು ಶಿವಶಂಕರಪ್ಪ ಭಾಗವಹಿಸಲಿದ್ದಾರೆ. ಇದೇ ವೇಳೆ, ಪಾಟೀಲರ ಕುರಿತಾದ “ಸಾರ್ಥಕ ಬದುಕು’ (ಸಂ.: ಡಾ. ಅಮರೇಶ ಯತಗಲ್), ಅಭಿನಂದನ ಗ್ರಂಥ ಬಿಡುಗಡೆಯಾಗಲಿದೆ. ಬೆಳಗ್ಗೆ 9.30ರಿಂದ, ಗಾಯಕಿ ಸಂಗೀತಾ ಕಟ್ಟಿ ಅವರಿಂದ ಗಾಯನ ನಡೆಯಲಿದೆ.
ಯಾವಾಗ?: ಜ.12, ಭಾನುವಾರ ಬೆಳಗ್ಗೆ 10
ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ