ಮಾಸ್ತಿ: ಗ್ರಾಮದಲ್ಲಿನ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಕಾಲೇಜು ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿ ಪ್ರಾರಂಭಿಸಿ 8 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ 5 ವರ್ಷದಿಂದ ನನೆಗುದಿಗೆ ಬಿದ್ದಿದ್ದು, ಅಸ್ತಿತ್ವವನ್ನೂ ಕಳೆದುಕೊಳ್ಳುತ್ತಿದೆ.
ಸದ್ಯ ಸ್ವಂತ ಕಟ್ಟಡವಿಲ್ಲದೆ ಸೌಲಭ್ಯಗಳ ಕೊರತೆ ನಡುವೆ 15 ವರ್ಷಗಳಿಂದ ವಿದ್ಯಾರ್ಥಿ ನಿಲಯವು ಬಾಡಿಗೆ ಕಟ್ಟಡದಲ್ಲಿ ನಡೆಯಸಲಾಗುತ್ತಿದೆ. ಸಂತೆ ಮೈದಾನದ ಬಳಿ ಸುಸಜ್ಜಿತ ಕಟ್ಟಡ ನಿರ್ಮಿಸಲು 2 ಕೋಟಿ ರೂ.ಗೆ ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಸರ್ಕಾರ 2 ಹಂತದಲ್ಲಿ ಅನುದಾನ ಮಂಜೂರು ಮಾಡಿತ್ತಾದರೂ ಕಾಮಗಾರಿ ಪೂರ್ಣವಾಗಲೇ ಇಲ್ಲ.
ಆರಂಭದಿಂದಲೂ ಆಮೆ ವೇಗ: ಪ್ರಾರಂಭದಿಂದಲೂ ಮಂದಗತಿಯಲ್ಲಿ ಸಾಗುತ್ತಿದ್ದ ಕಟ್ಟಡ ಕಾಮಗಾರಿ ಸ್ಥಗಿತಗೊಂಡು 5 ವರ್ಷವಾಗಿದೆ. ಈ ಕಡೆ ಯಾರೂ ಗಮನ ಹರಿಸದ ಕಾರಣ, ಕಟ್ಟಡ ಒಳಗೆ, ಹೊರಗೆ ಗಿಡಗಂಟಿಗಳು ಬೆಳೆದು ವಿಷ ಜಂತುಗಳು ಸೇರಿಕೊಂಡಿವೆ. ಮದ್ಯ ವ್ಯಸನಿಗಳಿಗೆ ರಾತ್ರಿ ಬಾರ್ ಆಗಿದೆ. ಮದ್ಯದ ಬಾಟಲಿಗಳು ರಾಶಿ ಬದ್ದಿವೆ. ತ್ಯಾಜ್ಯ ಸುರಿದು ಅಲ್ಲೇ ಬಿಂಕಿ ಹಚ್ಚಿದ್ದರಿಂದ ಕಟ್ಟಿರುವ ಗೋಡೆಗಳು ಗುಣಮಟ್ಟ ಕಳೆದುಕೊಳ್ಳುವಂತಾಗಿದೆ.
ಊಟಕ್ಕೆ ಸೂಕ್ತ ಜಾಗವಿಲ್ಲ: ಕಟ್ಟಡ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಭೂಸೇನಾ ನಿಗಮದ ಎಂಜಿನಿಯರ್‌ಗಳು ಕಾಮಗಾರಿ ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಿದ್ದು, ಅನುಮಾನಗಳಿಗೆ ಎಡೆ ಮಾಡಿದೆ. ವರ್ಷದಿಂದ ಗೋಡೌನ್ ಮಾದರಿಯಲ್ಲಿರುವ ಚಿಕ್ಕ ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿ ನಿಲಯ ನಡೆಯುತ್ತಿದೆ. ವಿದ್ಯಾರ್ಥಿಗಳು ಆರಾಮವಾಗಿ ಕೂತು ಊಟ ಮಾಡಲು ಸಾಧ್ಯವಾಗುತ್ತಿಲ್ಲ. ನಿಲಯದ ವಿದ್ಯಾರ್ಥಿಗಳು ಉಳಿದುಕೊಳ್ಳಲು ಗ್ರಾಮದ ಲೋಕೊಪಯೋಗಿ ಇಲಾಖೆಗೆ ಸೇರಿದ ವಸತಿ ಗೃಹಗಳಲ್ಲಿ ಅನುಕೂಲ ಕಲ್ಪಿಸಲಾಗಿದೆ.
2 ವರ್ಷಗಳ ಹಿಂದೆ ಜಿಪಂ ಸಿಇಒ ಆಗಿದ್ದ ಕಾವೇರಿ ಹಾಗೂ ಲತಾಕುಮಾರಿ ಸಹ ಸ್ಥಗಿತಗೊಂಡಿದ್ದ ಕಟ್ಟಡದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಎಂಜಿನಿಯರ್‌ಗಳಿಂದ ಮಾಹಿತಿ ಪಡೆದು, ಶೀಘ್ರ ಕಾಮಗಾರಿ ಪ್ರಾರಂಭಿಸುವ ಭರವಸೆ ನೀಡಿದ್ದರೂ ಪ್ರಯೋಜನವಾಗಿಲ್ಲ. 6 ತಿಂಗಳ ಹಿಂದೆ ಕೆ.ಎಚ್.ಮುನಿಯಪ್ಪ ಭೇಟಿ ನೀಡಿ ಪರಿಶೀಲಿಸಿ, ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಕಾಮಗಾರಿ ಪೂರ್ಣಗೊಳಿಸಲು ಮುಂದಿನ ಕ್ರಮ ಕೈಗೊಂಡು, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿ ಸಲಾಗುವುದು ಎಂದು ಭರವಸೆ ನೀಡಿದ್ದರು.
ಗೋಳು ಕೇಳ್ಳೋರಿಲ್ಲ: ಪ್ರಸಕ್ತ ವರ್ಷದಿಂದ ಕಾಲೇಜು ಪ್ರಾರಂಭವಾಗುತ್ತಿದ್ದರೂ, ವಿದ್ಯಾರ್ಥಿ ನಿಲಯದ ಕಾಮಗಾರಿ ಮಾತ್ರ ಪ್ರಾರಂಭವಾಗದೇ, ಪರ್ಯಾಯ ವ್ಯವಸ್ಥೆಗಾಗಿ ಜಿಲ್ಲಾ ಹಾಗೂ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಬಾಡಿಗೆ ಕಟ್ಟಡಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಾಸ್ತಿಯಲ್ಲಿ ವ್ಯಾಸಂಗ ಮಾಡುವ ದಲಿತರ ವಿದ್ಯಾರ್ಥಿಗಳಿಗೆ ವಸತಿ ನಿಲಯವಿದ್ದರೂ ಸ್ವಂತ ಕಟ್ಟಡವಿಲ್ಲದೆ, ಬಾಡಿಗೆ ಕಟ್ಟಡದಲ್ಲೇ ವ್ಯಾಸಂಗ ಮಾಡುವಂತಾಗಿದೆ. ವಿದ್ಯಾರ್ಥಿಗಳ ಗೋಳು ಕೇಳುವವರೇ ಇಲ್ಲದಂತಾಗಿದೆ.
ಸ್ಥಳೀಯ ಜನಪ್ರತಿನಿಧಿಗಳು ಇಚ್ಛಾಶಕ್ತಿ ಕೊರತೆಯೋ, ಅಧಿಕಾರಿಗಳ ನಿರ್ಲಕ್ಷ್ಯವೋ ತಿಳಿಯುತ್ತಿಲ್ಲ. ಶಾಸಕ ಕೆ.ವೈ.ನಂಜೇಗೌಡ, ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಡಳಿತ ಇತ್ತ ಗಮನ ಹರಿಸಿ ಆದಷ್ಟು ಬೇಗ ಅರ್ಧಕ್ಕೆ ಸ್ಥಗಿತಗೊಂಡಿರುವ ಕಾಲೇಜು ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕಾಗಿದೆ.
● ಎಂ.ಮೂರ್ತಿ