ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ-ವನ್ಯಜೀವಿಗಳ ಸಂರಕ್ಷಣೆಗಾಗಿ ವಿವಿಧ ವಲಯಗಳಲ್ಲಿ ಅಳವಡಿಸಿದ್ದ ಟ್ರ್ಯಾಪಿಂಗ್ ಕ್ಯಾಮರಾಗಳನ್ನು ಕಳ್ಳತನ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ನಾಗರಹೊಳೆ ಉದ್ಯಾನದೊಳಗೆ ಅಕ್ರಮ ಪ್ರವೇಶಿಸಿರುವ ಕಳ್ಳರು ವೀರನಹೊಸಳ್ಳಿ, ಹುಣಸೂರು, ಆನೆಚೌಕೂರು ಹಾಗೂ ಕಲ್ಲಹಳ್ಳ ವಲಯಗಳ ಬಫರ್ ಝೋನ್‌ನಲ್ಲಿ ಅಳವಡಿಸಿದ್ದ ತಲಾ 2 ರಂತೆ 8 ಕ್ಯಾಮರಾಗಳನ್ನು ಹೊತ್ತೊಯ್ದಿದ್ದಾರೆ.
ಅರಣ್ಯ ಸಿಬ್ಬಂದಿಗಳು ಕ್ಯಾಮರಾದಲ್ಲಿನ ಚಿಪ್ ಸಂಗ್ರಹಣೆಗೆ ತೆರಳಿದ್ದ ವೇಳೆ ಕಳ್ಳತನವಾಗಿರುವುದು ಪತ್ತೆಯಾಗಿದೆ. ಕಲ್ಲಹಳ್ಳ ಹೊರತು ಪಡಿಸಿ ಉಳಿದ ವಲಯಗಳಲ್ಲಿ ಬಫರ್ ಝೋನ್‌ನಲ್ಲಿ ಕ್ಯಾಮರಾ ಕಳ್ಳತನ ಮಾಡಿರುವುದು ಕಂಡು ಬಂದಿದೆ.
ಇದನ್ನೂ ಓದಿ: ಸಕ್ಸಸ್ ಸ್ಟೋರಿ : ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ.!
ಉದ್ಯಾನದಲ್ಲಿ ಅಕ್ರಮ ಭೇಟೆ ನಡೆಸುವ ಹಾಗೂ ಮರಗಳ್ಳತನ ಮಾಡುವ ಖದೀಮರು ಈ ಕೃತ್ಯ ನಡೆಸಿರಬಹುದೆಂದು ಶಂಕಿಸಲಾಗಿದೆ.
ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆ, ಕೊಡಗಿನ ಪೊನ್ನಂಪೇಟೆ ಠಾಣೆಗಳಲ್ಲಿ ಆಯಾ ವಲಯ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಇಲಾಖೆ ವತಿಯಿಂದಲೂ ಕ್ಯಾಮರಾ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಡಿಸಿಎಫ್ ಮಹೇಶ್‌ಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.