ವಿಧಾನಸಭೆ: ಅಧಿವೇಶನದ ಮೊದಲ ದಿನ ಎಚ್.ಎಸ್.ದೊರೆಸ್ವಾಮಿ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೀಡಿರುವ ಹೇಳಿಕೆ ಮೇಲೆ ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ವಿಧೇಯಕ ಸೇರಿ 8 ವಿಧೇಯಕಗಳನ್ನು ಮಂಡಿಸಲಾಯಿತು.
ಸರ್ವಜ್ಞ ಪ್ರಾಧಿಕಾರ ರಚನೆ: ಕವಿ ಸರ್ವಜ್ಞನ ಹುಟ್ಟೂರು ಅಭಿವೃದ್ಧಿ ಪಡಿಸಲು ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ವಿಧಾನ ಸಭೆಯಲ್ಲಿ ವಿಧೇಯಕ ಮಂಡಿಸಲಾಯಿತು. ಕಂದಾಯ ಸಚಿವ ಆರ್. ಅಶೋಕ್ ವಿಧೇಯಕ ಮಂಡಿಸಿದರು. ಹಾವೇರಿ ಜಿಲ್ಲೆಯ ಸರ್ವಜ್ಞನ ಜನ್ಮಸ್ಥಳ ಸೇರಿ ಹಿರೆಕೆರೂರು ಅಬಲೂರು, ಮಾಸೂರು ಹಾಗೂ ಸುತ್ತ ಮುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು, ಅಂತಾರಾಷ್ಟ್ರೀಯ ಯಾತ್ರಾ ಸ್ಥಳ, ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ಹಾಗೂ ನಿರ್ವಹಿಸಲು ಪ್ರಾಧಿಕಾರ ರಚಿಸಲು ಸರ್ಕಾರ ಈ ವಿಧೇಯಕ ಮಂಡಿಸಿದೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೋಟಾ: ನಗರ ಪಾಲಿಕೆ ಹಾಗೂ ಪುರಸಭೆ ಚುನಾವಣೆಯಲ್ಲಿ ಇವಿಎಂ ಬಳಕೆಯಲ್ಲಿ ನೋಟಾ (ಮೇಲಿನ ಯಾರೂ ಅಲ್ಲ) ಎಂಬ ಅಂಶ ಸೇರಿಸಲು ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ವಿಧೇಯಕ 2020 ಯನ್ನು ಮಂಡಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧೇಯಕ ಮಂಡನೆ ಮಾಡಿದರು.
ಪಟ್ಟಣ ಗ್ರಾಮಾಂತರ ತಿದ್ದುಪಡಿ ವಿಧೇಯಕ: ಯಾವುದೇ ಸಾರ್ವಜನಿಕ ಉದ್ದೇಶಕ್ಕಾಗಿ ಯೋಜನಾ ಪ್ರಾಧಿಕಾರ, ಸ್ಥಳೀಯ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ, ಸ್ಥಳೀಯ ಪ್ರಾಧಿಕಾರ, ಕರ್ನಾಟಕ ಕೊಳಗೇರಿ ಮಂಡಳಿ, ಕೆಐಎಡಿಬಿ, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಗಳು ನಿರ್ದಿಷ್ಟ ಉದ್ದೇಶಕ್ಕೆ ಪಡೆದ ಭೂಮಿಯನ್ನು ಅದೇ ಉದ್ದೇಶಕ್ಕೆ ಬಳಕೆ ಮಾಡಲು ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ರಾಯಚೂರು ವಿವಿ ಸ್ಥಾಪನೆಗೆ ವಿಧೇಯಕ: ಗುಲಬರ್ಗಾ ವಿವಿ ವಿಭಜಿಸಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳನ್ನೊಳಗೊಂಡ ರಾಯಚೂರು ವಿವಿ ಸ್ಥಾಪನೆಗೆ ಕನಾಟಕ ರಾಜ್ಯ ವಿಶ್ವ ವಿದ್ಯಾನಿಲಯಗಳ ಅಧಿನಿಯಮ 2000 ಕ್ಕೆ ತಿದ್ದುಪಡಿ ತರಲು ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಲಾಯಿತು. ಡಾ.ಡಿ.ಎಂ. ನಂಜುಂಡಪ್ಪ ಅವರ ವರದಿ ಆಧಾರದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ಹೈ-ಕ ಭಾಗದಲ್ಲಿ ಉನ್ನತ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ರಾಯಚೂರಿನಲ್ಲಿ ಹೊಸ ವಿಶ್ವ ವಿದ್ಯಾಲಯ ಸ್ಥಾಪನೆಗೆ ವಿಧೇಯಕ ಮಂಡಿಸಲಾಯಿತು. ಮಂಡ್ಯದಲ್ಲಿ ಕೇಂದ್ರ ಸ್ಥಾನ ಹೊಂದಿರುವ ಮತ್ತು ಸರ್ಕಾರಿ ಕಾಲೇಜು (ಸ್ವಾಯತ್ತ) ಏಕಾತ್ಮಕ ಸ್ವರೂಪದ ವಿಶ್ವ ವಿದ್ಯಾಲಯವಾಗಿ ಸ್ಥಾಪಿಸಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ರೇಸ್‌ಕೋರ್ಸ್ ಪರವಾನಗಿ ತಿದ್ದುಪಡಿ ವಿಧೇಯಕ: ರೇಸ್‌ಕೋರ್ಸ್‌ಗಳ ಸ್ಥಾಪನೆಗೆ ಅನುಮತಿ ಹಾಗೂ ದಂಡ ವಿಧಿಸುವ ಪ್ರಮಾಣವನ್ನು ಹೆಚ್ಚಿಸಲು ಹಾಗೂ ರೇಸ್‌ಗೆ ಪರವಾನಗಿ ನೀಡಲು ಹಾಗೂ ನಿಯಂತ್ರಿಸಲು ಪ್ರತ್ಯೇಕ ಅಧಿಕಾರಿ ನೇಮಿಸಲು ರಾಜ್ಯ ಸರ್ಕಾರ ರೇಸ್ ಕೋರ್ಸ್‌ಗಳಿಗೆ ಪರವಾನಗಿ ನೀಡುವ ತಿದ್ದುಪಡಿ ವಿಧೇಯಕ 2020 ಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಸಿಎಂ ಯಡಿಯೂರಪ್ಪ ವಿಧೇಯಕ ಮಂಡಿಸಿದ್ದು, ರೇಸ್‌ಕೋರ್ಸ್‌ಗಳಿಗೆ ಪರವಾನಗಿ ನೀಡಲು ಕರ್ನಾಟಕ ರೇಸ್ ಕೋರ್ಸುಗಳಿಗೆ ಪರವಾನಗಿ ನೀಡುವ ಅಧಿನಿಯಮ 1952 ಕ್ಕೆ ತಿದ್ದುಪಡಿ ತಂದು, ಮೂಲ ಕಾಯ್ದೆಯಲ್ಲಿ ಪರವಾನಗಿ ನೀಡಲು ಸರ್ಕಾರ ವಿಶೇಷ ಅಧಿಕಾರಿ ನೇಮಿಸಲು ಅವಕಾಶ ಕಲ್ಪಿಸಲಾಗಿದೆ.