ಮಧ‍್ಯಪ್ರದೇಶ: ಕಂಟೈನರ್ ಟ್ರಕ್ ಮತ್ತು ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 8 ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿ, 55 ಕ್ಕಿಂತ ಹೆಚ್ಚು ಜನರು ಗಂಭಿರ ಗಾಯಗೊಂಡ ಘಟನೆ ಗುನಾ ಸಮೀಪದ ಕಂಟ್ ಎಂಬಲ್ಲಿ ನಡೆದಿದೆ.
ಈ ವಲಸೆ ಕಾರ್ಮಿಕರೆಲ್ಲರೂ ಮಹಾರಾಷ್ಟ್ರದಿಂದ ಉತ್ತರಪ್ರದೇಶದಲ್ಲಿರುವ ತಮ್ಮ ಮನೆಗಳಿಗೆ ಟ್ರಕ್ ನಲ್ಲಿ ತೆರಳುತ್ತಿದ್ದರು. ಗುರುವಾರ ಮುಂಜಾನೆ 2 ರಿಂದ 3 ಗಂಟೆಯ ವೇಳೆಗೆ ಈ ಅಪಘಾತ ಸಂಭವಿಸಿದ್ದು ಟ್ರಕ್ ಚಾಲಕ ಕೂಡಲೇ ಪರಾರಿಯಾಗಿದ್ದಾನೆ.
ಟ್ರಕ್ ನಲ್ಲಿ ಸುಮಾರು 70 ಜನರು ವಲಸೆ ಕಾರ್ಮಿಕರಿದ್ದರು ಎಂದು ತಿಳಿದುಬಂದಿದೆ. ಇವರಲ್ಲಿ ಅನೇಕರು ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯವರು. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎದುರಿನಿಂದ ಬಂದ ಬಸ್ ಗುನಾ ದಿಂದ ಅಹಮದಾಬಾದ್ ಕಡೆಗೆ ಪ್ರಯಾಣಿಸುತ್ತಿತ್ತು. ಅದೃಷ್ಟವಶಾತ್ ಇದರಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ. ಡ್ರೈವರ್, ಕ್ಲೀನರ್ ಸೇರಿದಂತೆ ಮೂರು ಜನರಿದ್ದು ಸಣ್ಣ ಪುಟ್ಟ ಗಾಯಗಳೋಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಮತ್ತೊಂದು ದುರಂತದಲ್ಲಿ, ನಡೆದುಕೊಂಡು ತಮ್ಮ ಮನೆಗೆ ತೆರಳುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಉತ್ತರ ಪ್ರದೇಶ ಸರ್ಕಾರಿ ಬಸ್ ಹರಿದ ಪರಿಣಾಮ ಆರು ಜನ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಮುಜಾಫರ್ ನಗರದಲ್ಲಿ ನಡೆದಿದೆ.