ಅಪಿಯಾ (ಸಮೋವ): ಮಾಜಿ ವಿಶ್ವ ಚಾಂಪಿಯನ್ ಮೀರಾ ಬಾಯಿ ಚಾನು ಸಹಿತ ಭಾರತೀಯ ಲಿಫ್ಟರ್‌ಗಳು ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕಗಳ ಬೇಟೆ ಆರಂಭಿಸಿದ್ದಾರೆ.
ಸ್ಪರ್ಧೆಯ ಮೊದಲ ದಿನವೇ ಸೀನಿ ಯರ್, ಜೂನಿಯರ್ ಮತ್ತು ಯೂತ್ ವಿಭಾಗಗಳಲ್ಲಿ ಭಾರತೀ ಯರು 8 ಚಿನ್ನ ಸಹಿತ 13 ಪದಕ ಗೆದ್ದಿದ್ದಾರೆ.
ಸೀನಿಯರ್ ವನಿತಾ 49 ಕೆ.ಜಿ. ವಿಭಾಗದಲ್ಲಿ ಒಟ್ಟು 191 ಕೆ.ಜಿ. ಭಾರ ಎತ್ತಿದ ಮೀರಾಬಾಯಿ ಚಿನ್ನದೊಂದಿಗೆ ಮಿಂಚಿದರು. 45 ಕೆ.ಜಿ. ವಿಭಾಗದಲ್ಲಿ ಝಿಲಿ ದಾಲಬೆಹ್ರಾ ಕೂಡ ಸ್ವರ್ಣ ಗೆದ್ದರು. ಮೀರಾಬಾಯಿ ಕಳೆದ ಎಪ್ರಿಲ್ನಲ್ಲಿ ಚೀನದ ನಿಂಗ್ಬೂನಲ್ಲಿ ನಡೆದ ಏಶ್ಯನ್ ಸ್ಪರ್ಧೆಯಲ್ಲಿ ಒಟ್ಟು 190 ಭಾರ ಎತ್ತಿ ಸ್ವಲ್ಪದರಲ್ಲಿ ಪದಕ ಕಳೆದುಕೊಂಡಿದ್ದರು.
ವನಿತೆಯರ 55 ಕೆ.ಜಿ. ವಿಭಾಗದಲ್ಲಿ ಸರೋಕೈಬಾಮ್ ಬಿಂದಿಯಾರಾಣಿ ದೇವಿ ಮತ್ತು ಮಾತ್ಸಾ ಸಂತೋಷಿ ಅನುಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪಡೆದಿದ್ದಾರೆ. ಇದೇ ವಿಭಾಗದ ಪುರುಷರಲ್ಲಿ ರಿಶಿಕಾಂತ್ ಸಿಂಗ್ ಒಟ್ಟು 235 ಕೆ.ಜಿ. ಭಾರ ಎತ್ತಿ ಚಿನ್ನ ತಮ್ಮದಾಗಿಸಿಕೊಂಡರು.
ಒಲಿಂಪಿಕ್ ಅರ್ಹತಾ ಕೂಟ
ಈ ಚಾಂಪಿಯನ್‌ಶಿಪ್ ಒಲಿಂಪಿಕ್ ಅರ್ಹತಾ ಕೂಟ ವಾಗಿದೆ. ಮುಂದಿನ 18 ತಿಂಗಳ ಅವಧಿಯಲ್ಲಿ ನಡೆಯಲಿರುವ 6 ಕೂಟಗಳಲ್ಲಿ ಲಿಫ್ಟರ್‌ಗಳ ನಿರ್ವಹಣೆಯ ಆಧಾರದಲ್ಲಿ 4 ಉತ್ತಮ ನಿರ್ವ ಹಣೆಯನ್ನು ಪರಿಗಣಿಸಿ 2020ರ ಒಲಿಂಪಿಕ್ಸ್‌ಗೆ ಆಯ್ಕೆ ನಡೆಯಲಿದೆ.