ಚಿಂಚೋಳಿ: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಕಾಸ್ಕಾರ್ಡ್ ಬ್ಯಾಂಕಿನಿಂದ ಪಡೆದುಕೊಂಡ ವಿವಿಧ ಯೋಜನೆ ಅಡಿಯಲ್ಲಿ 820.09 ಲಕ್ಷ ರೂ. ಸಾಲದ ಹೊರ ಬಾಕಿ ಇದ್ದು, ಬ್ಯಾಂಕಿಗೆ ಸಾಲಗಾರರ ಸದಸ್ಯರಿಂದ ಬರಬೇಕಾದ ಸಾಲದ ಅಸಲು 335.42 ಲಕ್ಷ ರೂ. ಇದೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜಗದೀಶಸಿಂಗ ಠಾಕೂರ ತಿಳಿಸಿದರು.
ಪಟ್ಟಣದ ಪಿಕಾರ್ಡ್ ಬ್ಯಾಂಕ್ ಸಭಾಂಗಣದಲ್ಲಿ ರವಿವಾರ ನಡೆದ 2017-18ನೇ ಸಾಲಿನ 52ನೇ ವಾರ್ಷಿಕ ಮಹಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾಂಕ್‌ನಲ್ಲಿ 10,984 ಸದಸ್ಯರು ಇದ್ದು, ಅದರಲ್ಲಿ ಪರಿಶಿಷ್ಟ ಜಾತಿಯವರು 1240 ಇದ್ದು, ಶೇರು ಬಂಡವಾಳ 64.95ಲಕ್ಷ ರೂ.ಇದೆ. ಬ್ಯಾಂಕಿನ ವಸೂಲಿ ಮತ್ತು ಬಾಕಿ 274.33 ಲಕ್ಷ ರೂ. ಇದ್ದು ಇದರಲ್ಲಿ 108.76ಲಕ್ಷ ರೂ. ವಸೂಲಿ ಆಗಿದೆ. ಬಾಕಿ 167.57ಲಕ್ಷ ರೂ.ಗಳನ್ನು ಹೊಸ ಸದಸ್ಯರಿಗೆ ಸಾಲ ಹಂಚಿಕೆ
ಅರ್ಹತೆ ಪಡೆದುಕೊಳ್ಳುವುದಕ್ಕಾಗಿ ಮರುಪಾವತಿ ಆಗಬೇಕಾಗಿದೆ. ಸಾಲ ವಸೂಲಾತಿ ಶೇ. 38.92 ರಷ್ಟು ಆಗಿದೆ ಎಂದು ತಿಳಿಸಿದರು.
ನಿರ್ದೇಶಕ ರಮೇಶ ಯಾಕಾಪುರ ಮಾತನಾಡಿ, ತಾಲೂಕನ್ನು ಪ್ರಸಕ್ತ ಸಾಲಿನಲ್ಲಿ ಸರಕಾರ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಸಾಲ ವಸೂಲಾತಿ ಮತ್ತು ಮರು ಪಾವತಿ ಆಗಿಲ್ಲ. ರಿಯಾಯ್ತಿ ಕೊಡಬೇಕಾಗಿದೆ. ಸಾಲಗಾರರಿಗೆ ಬ್ಯಾಂಕ್ ವತಿಯಿಂದ ಸಾಲ ಮರುಪಾವತಿಗಾಗಿ ಯಾವುದೇ ನೋಟಿಸ್ ಜಾರಿ ಗೊಳಿಸಬಾರದು. ಈ ಕುರಿತು ಸರಕಾರದ ಆದೇಶವಿದೆ ಎಂದು ಹೇಳಿದರು.
ಪಿಕಾರ್ಡ್ ಬ್ಯಾಂಕ್ ಕಾರ್ಯದರ್ಶಿ ನಾಗಣ್ಣ ಎಸ್. ಯಲೆ ಮಾತನಾಡಿ, ಬ್ಯಾಂಕ್ ಕಳೆದ ಮೂರು ವರ್ಷಗಳಿಂದ ನಷ್ಟದಲ್ಲಿದೆ ಎಂದರು. ಆಗ ಮಾಜಿ ನಿರ್ದೇಶಕ ಭೀಮರಾವ್ ಮರಾಠ ಮಾತನಾಡಿ, ಹಳೆ ಪಿಕಾರ್ಡ್ ಬ್ಯಾಂಕ್ ಶಿಥಿಲಾವಸ್ಥೆಯಲ್ಲಿದೆ. ಅದನ್ನು ಮಾರಾಟ ಮಾಡಿದರೆ ಬ್ಯಾಂಕಿಗೆ ಲಾಭ ಆಗುತ್ತದೆ ಎಂದು ಸಲಹೆ ನೀಡಿದರು. ಆಗ ಸದಸ್ಯರು ಬ್ಯಾಂಕಿನ ಜಾಗವನ್ನು ಕೆಲವರು ಕಬಳಿಕೆ ಮಾಡಿದ್ದಾರೆ. ಪುರಸಭೆಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಿ ಎಂದರು.
ಕಾರ್ಯದರ್ಶಿ ನಾಗಣ್ಣ,ಎಸ್. ಯಲೆ ಮಾತನಾಡಿ, ಬ್ಯಾಂಕಿನ ಖರ್ಚು, ಲಾಭ ಮತ್ತು ಹಾನಿ ಬಗ್ಗೆ ವಿವರಿಸಿದರು. ಉಪಾಧ್ಯಕ್ಷ ಬಸವರಾಜ ಕೆರೋಳಿ, ಜಿಪಂ ಸದಸ್ಯ ಸಂಜೀವನ್ ಯಾಕಾಪುರ, ನಿರ್ದೇಶಕರಾದ ರಮೇಶ ಯಾಕಾಪುರ, ಜರಣಪ್ಪ ಚಿಂಚೋಳಿ, ಜಗನ್ನಾಥ ಹಲಚೇರಿ, ಕೋಮಲಾಬಾಯಿ, ಪಂಚಾಕ್ಷರಿ ಸ್ವಾಮಿ, ಬಾಬುರಾವ್ ಬೋಯಿ, ಮಹಾದೇವ ರಟಕಲ್, ಲಕ್ಷ್ಮಣ ನಾಯಕ, ಮಹಾದೇವಿ ಇದ್ದರು. ಚಂದ್ರಕಾಂತ ರಾಠೊಡ ಸ್ವಾಗತಿಸಿದರು, ರಾಜಕುಮಾರ ಕಟ್ಟಿಮನಿ ವಂದಿಸಿದರು.