ಹೊನ್ನಾಳಿ: ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ 8 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಹೊನ್ನಾಳಿ ಪಟ್ಟಣದಲ್ಲಿ ಶನಿವಾರ ಕೋವಿಡ್ ದೃಢಪಟ್ಟ ಮನೆಗಳನ್ನು ಸೀಲ್‌ಡೌನ್ ಮಾಡಿಸಿದ ನಂತರ ತಹಶೀಲ್ದಾರ್ ತುಷಾರ್ ಬಿ. ಹೊಸೂರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಪಟ್ಟಣದ ಅಕ್ಕಸಾಲಿಗರ ಬೀದಿಯಲ್ಲಿ 1, ಎ.ಕೆ. ಕಾಲೋನಿಯಲ್ಲಿ 2, ಟಿ.ಎಂ. ರಸ್ತೆಯಲ್ಲಿ 1, ತಾಲೂಕಿನ ಬಿದರಗಡ್ಡೆ ಗ್ರಾಮದಲ್ಲಿ 1 ಹಾಗೂ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ 2 ಮತ್ತು ತೆಗ್ಗಿಹಳ್ಳಿ ಗ್ರಾಮದಲ್ಲಿ 1 ಸೇರಿದಂತೆ ಒಟ್ಟು 8 ಪ್ರಕರಣಗಳು ವರದಿಯಾಗಿವೆ ಎಂದರು.
ಇದುವರೆಗೆ ಪಟ್ಟಣದಲ್ಲಿ 16 ಹಾಗೂ ಗ್ರಾಮಾಂತರದಲ್ಲಿ 21 ಪ್ರಕರಣಗಳು ಸೇರಿದಂತೆ ಒಟ್ಟು 37 ಜನರಿಗೆ ಸೋಂಕು ದೃಢಪಟ್ಟಿದೆ. ಅದರಲ್ಲಿ 12 ಜನರು ಗುಣಮುಖರಾಗಿದ್ದರೆ, 25 ಸಕ್ರಿಯ ಪ್ರಕರಣಗಳಿವೆ. ಪಟ್ಟಣ ಹಾಗೂ ಗ್ರಾಮಾಂತರ ಸೇರಿ ಒಟ್ಟು 17 ಕಡೆ ಕಂಟೇನ್ಮೆಂಟ್ ಝೋನ್ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೋವಿಡ್ ಸೋಂಕು ದೃಢಪಟ್ಟ ಮನೆಗಳ ಬಳಿ ಸೀಲ್‌ಡೌನ್ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು. ನಂತರ ಅಕ್ಕಪಕ್ಕದ ಮನೆಯವರಿಗೆ ಯಾರೂ ಮನೆಯಿಂದ ಹೊರಬರಬೇಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಎಂದು ಮನವಿ ಮಾಡಿದರು. ಕೋವಿಡ್ ಸೋಂಕಿತರಿಗೆ ಯಾವುದೇ ಅಪಾಯ ಎದುರಾಗುವುದಿಲ್ಲ. ಆದರೆ ಆತ್ಮವಿಶ್ವಾಸಬವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಯಾವುದೇ ಕಾಯಿಲೆಯನ್ನು ಗೆಲ್ಲಬಹುದು. ಬಹು ಮುಖ್ಯವಾಗಿ ಸರ್ಕಾರದ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಆಗ ಮಾತ್ರ ಕೊರೊನಾ ಸೋಂಕು ಹರಡುವಿಕೆಯಿಂದ ಪಾರಾಗಬಹುದು ಎಂದು ತಿಳಿಸಿದರು.
ಸಿಪಿಐ ಟಿ.ವಿ. ದೇವರಾಜ್, ಪಿಎಸ್‌ಐ ತಿಪ್ಪೇಸ್ವಾಮಿ, ಪಪಂ ಮುಖ್ಯಾಧಿ ಕಾರಿ ಎಸ್.ಆರ್. ವೀರಭದ್ರಯ್ಯ, ಕಿರಿಯ ಆರೋಗ್ಯ ಸಹಾಯಕ ನಾಗೇಶ್, ಕಂದಾಯಾಧಿಕಾರಿ ರಾಮಚಂದ್ರಪ್ಪ, ರವಿ ಉಪಸ್ಥಿತರಿದ್ದರು.