Advertisement
ತುರ್ತು ಸಂದರ್ಭ ಹಾಗೂ ಅಗ್ನಿ ಅವಘಡ ತಪ್ಪಿಸಲು ಏನೆಲ್ಲ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಬೇಕು, ದುರ್ಘಟನೆ ನಡೆದಾಗ ಯಾವ ರೀತಿಯ ರಕ್ಷಣಾ ಕ್ರಮಗಳನ್ನು ತ್ವರಿತಗತಿಯಲ್ಲಿ ಮಾಡಬೇಕು ಎಂಬ ಉದ್ದೇಶದಿಂದ ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ “ಸಮನ್ವಯ ಸಮಿತಿ’ ರಚನೆ ಮಾಡಲಾಗಿದೆ.
Related Articles
Advertisement
460 ಪಟಾಕಿ ಮಳಿಗೆಗಳು: ಎಂಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ 54 ಬಿಬಿಎಂಪಿ ಮೈದಾನಗಳಲ್ಲಿ 460 ಪಟಾಕಿ ಮಳಿಗೆ ತೆರೆಯಲು ಅನುಮತಿ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಮೈದಾನದಲ್ಲಿ ಒಂದು ಅಗ್ನಿಶಾಮಕ ವಾಹನ, ಸ್ಥಳೀಯ ಪೊಲೀಸ್ ಸಿಬ್ಬಂದಿ ನಿಯೊಜಿಸಲಾಗಿದೆ. ಹಾಗೇ ಅಗ್ನಿಶಾಮಕ ದಳದಿಂದ ಕೆಲವೊಂದು ಮಾರ್ಗಸೂಚಿಗಳನ್ನು ಪಟಾಕಿ ಮಾರಾಟಗಾರರಿಗೆ ನೀಡಲಾಗಿದ್ದು,
ಜನನಿಬಿಡ ಪ್ರದೇಶಗಳಲ್ಲಿ ಪಟಾಕಿ ಮಾರಾಟ ಮಾಡಬಾರದು. ಒಂದು ವೇಳೆ ಅಕ್ರಮವಾಗಿ ಮಾರಾಟ ಮಾಡಿ, ಅವಘಡ ಸಂಭವಿಸಿದರೆ ಅದಕ್ಕೆ ಮಳಿಗೆ ಮಾಲೀಕರೇ ಹೊಣೆ. ಮೈದಾನಗಳಲ್ಲಿ ಮಳಿಗೆ ತೆರೆಯುವ ಮಾಲೀಕರು ಮುನ್ನೆಚ್ಚರಿಕಾ ಕ್ರಮವಾಗಿ ನೀರು, ಬೆಂಕಿ ನಂದಕ ಇಟ್ಟುಕೊಳ್ಳಬೇಕು. ರಾತ್ರಿ ವೇಳೆ ಮಳಿಗೆಯಲ್ಲಿ ಮಲಗಬಾರದು ಹಾಗೂ ಇತರೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದರು.
ಪೊಲೀಸರಿಂದ ಜಾಗೃತಿ: ನಗರದಲ್ಲಿ ಪಟಾಕಿ ಸಿಡಿಸುವಾಗ ಪ್ರತಿ ವರ್ಷ 15-20 ಮಕ್ಕಳ ಕಣ್ಣಿಗೆ ಹಾನಿಯಾಗುತ್ತಿದೆ. ಹಾಗೆಯೇ ಮಕ್ಕಳು ಸೇರಿ ನೂರಕ್ಕೂ ಅಧಿಕ ಮಂದಿ ಪಟಾಕಿ ಅವಘಡದಿಂದ ಗಾಯಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್, ಟ್ವಿಟರ್ ಮೂಲಕ ಒಂದೆರಡು ದಿನಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತೇವೆ. ಅಲ್ಲದೆ, ಠಾಣಾ ವ್ಯಾಪ್ತಿಗಳಲ್ಲೂ ಅರಿವು ಮೂಡಿಸಲು ಸೂಚಿಸಲಾಗಿದೆ ಎಂದು ಪೊಲೀಸರು ಹೇಳಿದರು.
ತುರ್ತು ಸಂದರ್ಭದಲ್ಲಿ ಸ್ಪಂದಿಸಲು ಎಂಟು ವಲಯಗಳಲ್ಲಿ ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನೊಳಗೊಂಡ “ಸಮನ್ವಯ ಸಮಿತಿ’ ರಚಿಸಲಾಗಿದೆ. ಹಾಗೇ 24 ಗಂಟೆಯೂ ಬಿಬಿಎಂಪಿ ಆಸ್ಪತ್ರೆಗಳು, ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ.-ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ * ಮೋಹನ್ ಭದ್ರಾವತಿ