Advertisement

Lok Sabha Election 2.68 ಕೋಟಿ ಮಹಿಳಾ ಮತದಾರರ ಪ್ರತಿನಿಧಿಗಳಾಗಿ 8 ಮಂದಿ

10:39 PM Mar 26, 2024 | Team Udayavani |

ಬೆಂಗಳೂರು: ಈ ಬಾರಿ 28 ಲೋಕಸಭಾ ಕ್ಷೇತ್ರಗಳಲ್ಲಿನ 2.68 ಕೋಟಿ ಮಹಿಳಾ ಮತದಾರರ ಪ್ರತಿನಿಧಿಗಳಾಗಿ ಒಟ್ಟು 8 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್‌ನಿಂದ ಬರೋಬ್ಬರಿ 6 ಮಹಿಳೆಯರ ಹೆಸರು ಘೋಷಣೆಯಾಗಿದ್ದರೆ, ಬಿಜೆಪಿಯಿಂದ ಇಬ್ಬರ ಹೆಸರು ಪ್ರಕಟಗೊಂಡಿದೆ. ಜೆಡಿಎಸ್‌ ಸ್ಪರ್ಧಿಸಲು ಇಚ್ಛಿಸುತ್ತಿರುವ 3 ಕ್ಷೇತ್ರಗಳಲ್ಲಿ ಯಾವುದೇ ಮಹಿಳಾ ಅಭ್ಯರ್ಥಿಗಳಿಗೆ ಮಣೆ ಹಾಕಿಲ್ಲ.

Advertisement

ಆದರೆ, ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಅತಿ ಹೆಚ್ಚು ಮಹಿಳಾ ಸ್ಪರ್ಧಿಗಳ ಹೆಸರು ಘೋಷಣೆಯಾಗಿರುವುದು ಇದೇ ಬಾರಿ ಎಂಬುದು ಸಮಾಧಾನಕರ ಸಂಗತಿ.

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸ್ಪರ್ಧಿಸಿದ್ದ 219 ಮಹಿಳಾ ಅಭ್ಯರ್ಥಿಗಳ ಪೈಕಿ 11 ಮಂದಿ ಗೆದ್ದಿದ್ದರು. ಇನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರಿನ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಬಿಟ್ಟರೆ ಮತಾöವ ಮಹಿಳಾ ಅಭ್ಯರ್ಥಿಯೂ ಇರಲಿಲ್ಲ. ಇನ್ನು ಮಂಡ್ಯದಿಂದ ಪಕ್ಷೇತರರಾಗಿ ಗೆದ್ದಿದ್ದ ಸುಮಲತಾ ಅವರು ಬಿಜೆಪಿಗೆ ಬಾಹ್ಯ ಬೆಂಬಲ ಕೊಟ್ಟಿದ್ದರು. ಬಾಗಲಕೋಟೆ ಕಾಂಗ್ರೆಸಿನಿಂದ ವೀಣಾ ಕಾಶಪ್ಪನವರ್‌ ಸ್ಪರ್ಧಿಸಿದ್ದರೆ, ವಿಜಯಪುರದಿಂದ ಡಾ| ಸುನಿತಾ ದೇವಾನಂದ್‌ ಚವ್ಹಾಣ್‌ ಸ್ಪರ್ಧಿಸಿ ಸೋತಿದ್ದರು.

ವಿಧಾನಸಭೆಯಲ್ಲಿ ಶೇ.4.46
ಮಹಿಳಾ ಪ್ರಾತಿನಿಧ್ಯ
2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ 224 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿಯಿಂದ 12, ಕಾಂಗ್ರೆಸಿನಿಂದ 11, ಜೆಡಿಎಸ್‌ನಿಂದ 9 ಹಾಗೂ ಪಕ್ಷೇತರರು 184 ಮಂದಿ ಸ್ಪರ್ಧಿಸಿದ್ದರು. ಈ ವೇಳೆ 2.64 ಕೋಟಿ ಮಹಿಳಾ ಮತದಾರರಿದ್ದರು. ಅವರೆಲ್ಲರ ಪ್ರತಿನಿಧಿಗಳಾಗಿ ಸ್ಪರ್ಧಿಸಿದ್ದ 216 ಮಹಿಳಾ ಅಭ್ಯರ್ಥಿಗಳ ಪೈಕಿ 10 ಮಂದಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ. ಅಂದರೆ, ಸ್ಪರ್ಧಿಸಿದ್ದ ಶೇ.96.42 ರಷ್ಟು ಮಹಿಳಾ ಪ್ರತಿನಿಧಿಗಳ ಪೈಕಿ ಗೆದ್ದವರು ಶೇ.4.46 ಮಾತ್ರ.

ಲೋಕಸಭೆಯಲ್ಲಿ ಶೇ.28.57 ಮಹಿಳೆಯರ ಸ್ಪರ್ಧೆಗೆ ಅವಕಾಶ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳಿಂದ ಶೇ.28.57 ಮಹಿಳಾ ಸ್ಪರ್ಧಿಗಳಿಗೆ ಕಾಂಗ್ರೆಸ್‌ (ಶೇ.21.42) ಮತ್ತು ಬಿಜೆಪಿ (ಶೇ.7.14) ಅವಕಾಶ ಮಾಡಿಕೊಟ್ಟಿದ್ದು, ಅಂತಿಮ ಮತದಾರರ ಪಟ್ಟಿ ಪ್ರಕಾರ 2.68 ಕೋಟಿ ಮಹಿಳಾ ಮತದಾರರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 4 ಲಕ್ಷ ಮಹಿಳಾ ಮತದಾರರ ಸಂಖ್ಯೆ ಮಾತ್ರ ಹೆಚ್ಚಳವಾಗಿದೆ.

Advertisement

17ರಲ್ಲಿ 3 ಕ್ಷೇತ್ರಕ್ಕೆ ಪ್ರಮೀಳಾ ಪ್ರಾತಿನಿಧ್ಯ
ಉಡುಪಿ -ಚಿಕ್ಕಮಗಳೂರು, ತುಮಕೂರು, ದಾವಣಗೆರೆ, ಕೋಲಾರ, ಹಾಸನ, ಶಿವಮೊಗ್ಗ, ಚಾಮರಾಜನಗರ, ಮಂಡ್ಯ, ಬಾಗಲಕೋಟೆ, ದಕ್ಷಿಣ ಕನ್ನಡ, ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ಚಿಕ್ಕಬಳ್ಳಾಪುರ, ರಾಯಚೂರು, ಮೈಸೂರು ಸಹಿತ 17 ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಈ ಪೈಕಿ ಉಡುಪಿ-ಚಿಕ್ಕಮಗಳೂರಿನಲ್ಲಿ ಈ ಹಿಂದೆ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ ಸ್ಥಳಾಂತರಗೊಂಡಿದ್ದಾರೆ. ದಾವಣಗೆರೆೆಯಲ್ಲಿ ಬಿಜೆಪಿ (ಗಾಯತ್ರಿ ಸಿದ್ದೇಶ್ವರ) ಮತ್ತು ಕಾಂಗ್ರೆಸ್‌ (ಪ್ರಭಾ ಮಲ್ಲಿಕಾರ್ಜುನ) ಮಹಿಳಾ ಸ್ಪರ್ಧಿಗಳನ್ನೇ ಕಣಕ್ಕಿಳಿಸಲಿದೆ. ಅಂತೆಯೇ ಶಿವಮೊಗ್ಗ (ಗೀತಾ ಶಿವರಾಜಕುಮಾರ್‌) ಹಾಗೂ ಬಾಗಲಕೋಟೆ (ಸಂಯುಕ್ತಾ ಪಾಟೀಲ್‌) ಸೇರಿ ಮೂರು ಕ್ಷೇತ್ರದಲ್ಲಿ ಪ್ರಮೀಳೆಯರಿಗೆ ಪ್ರಾತಿನಿಧ್ಯ ಸಿಕ್ಕಂತಾಗಿದೆ.

ಕೈ-ಕಮಲದ ಮಹಿಳಾ ಅಭ್ಯರ್ಥಿಗಳು
ಕಾಂಗ್ರೆಸ್‌ ಪಕ್ಷವು ಚಿಕ್ಕೋಡಿಯಿಂದ ಪ್ರಿಯಾಂಕಾ ಜಾರಕಿಹೊಳಿ, ಬಾಗಲಕೋಟೆಯಿಂದ ಸಂಯುಕ್ತಾ ಪಾಟೀಲ್‌, ಉತ್ತರ ಕನ್ನಡದಿಂದ ಅಂಜಲಿ ನಿಂಬಾಳ್ಕರ್‌, ದಾವಣಗೆರೆಯಿಂದ ಪ್ರಭಾ ಮಲ್ಲಿಕಾರ್ಜುನ, ಶಿವಮೊಗ್ಗದಿಂದ ಗೀತಾ ಶಿವರಾಜಕುಮಾರ್‌, ಬೆಂಗಳೂರು ದಕ್ಷಿಣದಿಂದ ಸೌಮ್ಯಾ ರೆಡ್ಡಿ ಅವರನ್ನು ಕಣಕ್ಕಿಳಿಸುತ್ತಿದ್ದರೆ, ಬಿಜೆಪಿಯು ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ ಹಾಗೂ ದಾವಣಗೆರೆಯಿಂದ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್‌ ಕೊಟ್ಟಿದೆ.

-ಸಾಮಗ ಶೇಷಾದ್ರಿ

Advertisement

Udayavani is now on Telegram. Click here to join our channel and stay updated with the latest news.

Next