ಡೆಹರಾಡೂನ್ : ಇಲ್ಲಿನ ವಸತಿ ಶಾಲೆಯೊಂದರ ಏಳನೇ ತರಗತಿಯ 12 ವರ್ಷ ಪ್ರಾಯದ ವಿದ್ಯಾರ್ಥಿಯನ್ನು ಆತನ ಹಿರಿಯ ಸಹಪಾಠಿಗಳೇ ತಾಸುಗಟ್ಟಲೆ ಹಿಂಸಿಸಿ ಹೊಡೆದು ಕೊಂದಿದ್ದು ಈ ಕೊಲೆ ಕೃತ್ಯವನ್ನು ಮುಚ್ಚಿ ಹಾಕಲು ಶಾಲೆಯ ಅಧಿಕಾರಿಗಳು ಬಾಲಕನ ಶವವನ್ನು ಶಾಲಾ ಅವರಣದಲ್ಲೇ ದಫನ ಮಾಡಿರುವ ಅತ್ಯಮಾನುಷ ಘಟನೆ ವರದಿಯಾಗಿದೆ.
ಈ ಘಟನೆ ಮಾರ್ಚ್ 10ರಂದು ನಡೆದಿತ್ತು. ಆದರೆ ತಡವಾಗಿ ಇದೀಗ ಬೆಳಕಿಗೆ ಬಂದಿದೆ. ಬಾಲಕ ಕೊಲೆಯಾದ ವಿಷಯವನ್ನು ಶಾಲಾಡಳಿತೆ ಹಾಪುರ್ ನಲ್ಲಿರುವ ಆತನ ಹೆತ್ತವರಿಗೆ ಕೂಡ ತಿಳಿಸಿರಲಿಲ್ಲ ಎಂದು ಡೆಹರಾಡೂನ್ ಎಸ್‌ಎಸ್‌ಪಿ ನಿವೇದಿತಾ ಕುಕ್ರೇತ್ ಹೇಳಿದ್ದಾರೆ.
ಶಾಲಾ ವಿದ್ಯಾರ್ಥಿಗಳು ಪಿಕ್‌ನಿಕ್ ಹೋಗಿದ್ದಾಗ 7ನೇ ತರಗತಿಯ ಬಾಲಕನು ಕೆಲವು ಬಿಸ್ಕತ್ತುಗಳನ್ನು ಕದ್ದಿದ್ದ. ಇದಕ್ಕಾಗಿ ಶಾಲೆಯ ಎಲ್ಲ ಮಕ್ಕಳಿಗೆ ಶಿಕ್ಷಕರು ಕ್ಯಾಂಪಸ್‌ನಲ್ಲೇ ಉಳಿಯಬೇಕೆಂಬ ಶಿಕ್ಷೆ ನೀಡಿದ್ದರು.
ಇದರಿಂದ ಕುಪಿತರಾದ ಹಿರಿಯ ಸಹಪಾಠಿಗಳು ಆರೋಪಿ ಬಾಲಕನನ್ನು ಕ್ರಿಕೆಟ್ ಬ್ಯಾಟ್, ವಿಕೆಟ್‌ಗಳಿಂದ ಹೊಡೆದು ಚಚ್ಚಿ ಸಾಯಿಸಿದರು. ಬಾಲಕನನ್ನು ಆಸ್ಪತ್ರೆಗೆ ಒಯ್ದಾಗ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಎಸ್‌ಎಸ್‌ಪಿ ಹೇಳಿದರು.
ಬಾಲಕನ ಕೊಲೆ ಕೃತ್ಯ ಸಂಬಂಧ ಪೊಲೀಸರು ಇಬ್ಬರು ವಿದ್ಯಾರ್ಥಿಗಳ ಸಹಿತ ಐವರನ್ನು ಬಂಧಿಸಿದ್ದಾರೆ. ಇತರ ಬಂಧಿತರೆಂದರೆ ಶಾಲಾ ಮ್ಯಾನೇಜರ್, ವಾರ್ಡನ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕ.
ಉತ್ತರಾಖಂಡದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದಾಗಲೇ ಬಾಲಕನ ಕೊಲೆ ಕೃತ್ಯ ಬೆಳಕಿಗೆ ಬಂದಿತು.