ಹೊಸದಿಲ್ಲಿ : ಹಿಂಸಾತ್ರಸ್ತ ಪಶ್ಚಿಮ ಬಂಗಾಲ ಸಹಿತ 9 ರಾಜ್ಯಗಳಲ್ಲಿ ಏಳನೇ ಮತ್ತು ಕೊನೇ ಹಂತದ ಚುನಾವಣೆ ಮೇ 19ರಂದು ನಡೆಯಲಿದೆ.
ಇದನ್ನು ಸಾಂಗವಾಗಿ ನೆರವೇರಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಪಶ್ಚಿಮ ಬಂಗಾಲದಲ್ಲಿ 710 ತುಕಡಿಗಳ ಭದ್ರತಾ ಸಿಬಂದಿಗಳನ್ನು ನಿಯೋಜಿಸಲಾಗುವುದು ಎಂದು ಹೇಳಿದೆ.
ಮುಕ್ತ, ನ್ಯಾಯ ಸಮ್ಮತ ಮತ್ತು ನಿರ್ಭೀತ ಮತದಾನ ನಡೆಯುವಂತೆ ಮಾಡುವ ನಿಟ್ಟಿನಲ್ಲಿ ತಾನು ಈ ಅಭೂತಪೂರ್ವ ಭದ್ರತಾ ವ್ಯವಸ್ಥೆ ಕೈಗೊಂಡಿರುವುದಾಗಿ ಆಯೋಗ ಹೇಳಿದೆ.
ಮೇ 19ರಂದು 9 ರಾಜ್ಯಗಳಲ್ಲಿ ನಡೆಯುವ 7ನೇ ಮತ್ತು ಕೊನೇ ಹಂತದ ಚುನಾವಣೆಗೆ ಇದೇ ಮೊದಲ ಬಾರಿಗೆಂಬಂತೆ ನಿಗದಿತ ಅವಧಿಗೂ 20 ತಾಸು ಮುನ್ನ, ನಿನ್ನೆ ಗುರುವಾರ ರಾತ್ರಿ 10 ಗಂಟೆಗೆ ಚುನಾವಣಾ ಪ್ರಚಾರ ಕಾರ್ಯಕ್ಕೆ ಆಯೋಗದ ಆದೇಶದ ಪ್ರಕಾರ ತೆರೆ ಬಿದ್ದಿದೆ.
34 ಕಂಪೆನಿಗಳ ಭದ್ರತಾ ಸಿಬಂದಿಗಳು ಸ್ಟ್ರಾಂಗ್ ರೂಮ್ ಕಾವಲಿಗೆ ಮತ್ತು 676 ಕಂಪೆನಿಗಳ ಭದ್ರತಾ ಸಿಬಂದಿಗಳನ್ನು ಇತರ ಪ್ರದೇಶಗಳಿಗೆ ನಿಯೋಜಿಸಲಾಗುವುದು ಎಂದು ಚು.ಆಯೋಗ ಹೇಳಿದೆ.
ದಕ್ಷಿಣ ಬಂಗಾಲದ 9 ಲೋಕಸಭಾ ಕ್ಷೇತ್ರಗಳಿಗೆ ಮತದಾನವು ಮೇ 19ರ ಭಾನುವಾರ ನಡೆಯಲಿದ್ದು 111 ಅಭ್ಯರ್ಥಿಗಳ ಭವಿಷ್ಯವನ್ನು 1,49,63,064 ಮತದಾರರು ನಿರ್ಧರಿಸಲಿದ್ದಾರೆ.
ಆ 9 ಕ್ಷೇತ್ರಗಳೆಂದರೆ: ಕೋಲ್ಕತ ಉತ್ತರ, ಕೋಲ್ಕತ ದಕ್ಷಿಣ, ಡಮ್ ಡಮ್, ಬಾರಾಸಾತ್, ಬಸೀರ್‌ಹಾಟ್, ಜಾದವಪುರ, ಡೈಮಂಡ್ ಹಾರ್ಬರ್, ಜಯನಗರ (ಎಸ್‌ಸಿ) ಮತ್ತು ಮಾಥುರಪುರ (ಎಸ್‌ಸಿ).