ದಾವಣಗೆರೆ: ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚಿಸಿ, 6 ತಿಂಗಳ ಒಳಗೆ ವರದಿ ಸಲ್ಲಿಸಲು ಕಾಲಾವಕಾಶ ನಿಗದಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಗುರುವಾರ ಸರ್ಕಾರಿ ನೌಕರರ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸಾಲಿನ ತಮ್ಮ ಬಜೆಟ್ ಭಾಷಣದಲ್ಲಿ 7ನೇ ವೇತನ ಆಯೋಗ ರಚಿಸುವುದಾಗಿ ತಿಳಿಸಿದ್ದರು. ಈಗ ಐಎಎಸ್ ಅಧಿಕಾರಿ ನೇತೃತ್ವದ ಸಮಿತಿ ರಚಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಆಯೋಗದ ಬದಲಿಗೆ ಸಮಿತಿ ರಚಿಸುವುದರಿಂದ ನೌಕರರಿಗೆ ಅನ್ಯಾಯವಾಗಲಿದೆ.
ಸಮಿತಿಯ ಬದಲಿಗೆ ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿ, 6 ತಿಂಗಳ ಒಳಗೆ ವರದಿ ಸಲ್ಲಿಸುವ ಕಾಲಾವಕಾಶ ನೀಡಬೇಕು ಹಾಗೂ ಜನವರಿಯಿಂದ ಅನ್ವಯವಾಗುವಂತೆ ಶೇ.30 ರಷ್ಟು ಮಧ್ಯಂತರ ಪರಿಹಾರ ಘೋಷಿಸಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.
ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಆಯೋಗ ರಚನೆಯಾದರೆ ಎಲ್ಲಾ ರಾಜ್ಯಗಳಲ್ಲಿನ ಸರ್ಕಾರಿ ನೌಕರರ ವೇತನ ಹೋಲಿಕೆ ಮಾಡುವ ಜೊತೆಗೆ ಸಾಮಾನ್ಯ ನೌಕರರನಿಂದ ಅಭಿಪ್ರಾಯ ಪಡೆದು, ವೇತನ ನಿಗದಿ ಪಡಿಸುತ್ತದೆ. ಸರ್ಕಾರ ಸಮಿತಿ ಪ್ರಸ್ತಾಪ ಕೈ ಬಿಟ್ಟು ಆಯೋಗ ರಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರಿ ನೌಕರರು ಈಗಾಗಲೇ 2 ವೇತನ ಆಯೋಗ ಕಳೆದುಕೊಂಡಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರಿ ನೌಕರರಿಗೂ ರಾಜ್ಯ ಸರ್ಕಾರಿ ನೌಕರರಿಗೆ ವೇತನ, ತುಟ್ಟಿಭತ್ಯೆಯಲ್ಲಿ ಸಾಕಷ್ಟು ಅಂತರ ಇದೆ. ಕೇಂದ್ರದ ನೌಕರರು ಶೇ. 72 ರಷ್ಟು ತುಟ್ಟಿಭತ್ಯೆ ಪಡೆದರೆ, ರಾಜ್ಯ ಸರ್ಕಾರಿ ನೌಕರರು ಶೇ. 30 ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದಾರೆ.
ಇನ್ನು ಸಮಿತಿ ರಚನೆಯಾದಲ್ಲಿ ಇನ್ನೂ ಅನ್ಯಾಯವಾಗಲಿದೆ. ಆದಷ್ಟು ಬೇಗ ವೇತನ ಆಯೋಗ ರಚಿಸಬೇಕು. ಹಳೆಯ ಪಿಂಚಣಿ ವ್ಯವಸ್ಥೆ ಮುಂದುವರೆಸಬೇಕು ಎಂದು ಒತ್ತಾಯಿಸಿದರು. ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯ ಎನ್.ಇ. ನಟರಾಜ್, ರಾಜ್ಯ ಕಾರ್ಯದರ್ಶಿ ಬಿ. ಶ್ರೀನಿವಾಸನಾಯಕ, ಜಿಲ್ಲಾ ಅಧ್ಯಕ್ಷ ಗೋವಿಂದಪ್ಪ ಸಾವಜ್ಜಿ, ಯು. ನಾಗೇಶ್, ವೀರಪ್ಪ, ಮೀರಾಬಾಯಿ, ಸಣ್ಣಪ್ಪ, ಎಚ್. ತ್ರಿಲೋಕ್ ಇತರರು ಇದ್ದರು.