ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರ ಈಗಿನ್ನು ಶೀಘ್ರವೇ ಕೇಂದ್ರ ಸರಕಾರಿ ನೌಕರರಿಗೆ ಶೇ.178ರಷ್ಟು ಎಚ್‌ಆರ್‌ಎ (ಮನೆ ಬಾಡಿಗೆ ಭತ್ಯೆ) ಏರಿಕೆಯನ್ನು ಪ್ರಕಟಿಸುವ ನಿರೀಕ್ಷೆ ಇದೆ.
ಇದಕ್ಕಾಗಿ ಕೇಂದ್ರ ಸರಕಾರ ಇದೀಗ ಭತ್ಯೆ ಹೆಚ್ಚಳ ಕುರಿತಾದ ಲವಾಸಾ ಮಂಡಳಿಯ ವರದಿಯನ್ನು ಎದುರು ನೋಡುತ್ತಿದೆ. ಅದು ಕೈ ಸೇರಿದಾಕ್ಷಣವೇ ಕೇಂದ್ರ ಸರಕಾರಿ ನೌಕರರ ಎಚ್‌ಆರ್‌ಎ ಶೇ.178 ರಷ್ಟು ಏರುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ಹಣಕಾಸು ಕಾರ್ಯದರ್ಶಿ ಅಶೋಕ್ ಲವಾಸಾ ನೇತೃತ್ವದ ಉನ್ನತ ಮಟ್ಟದ ಸಮಿತಿಯು ನಿನ್ನೆ ಗುರುವಾರವೇ ಹಣಕಾಸು ಸಚಿವ ಅರುಣ್ ಜೇತ್ಲಿ ಅವರಿಗೆ ಕೇಂದ್ರ ಸರಕಾರಿ ನೌಕರರ ಭತ್ಯೆ ಹೆಚ್ಚಳದ ತನ್ನ ವರದಿಯನ್ನು ಸಲ್ಲಿಸಿದೆ.
ಈ ವರದಿಯನ್ನು ಕಾರ್ಯದರ್ಶಿಗಳ ದತ್ತಾಧಿಕಾರ ಸಮಿತಿಯು ಪರಿಶೀಲಿಸಲಿದೆ. ಅನಂತರ ಅದನ್ನು ಕೇಂದ್ರ ಸಚಿವ ಸಂಪುಟದ ಮುಂದೆ ಇರಿಸಲಾಗುವುದು.
ಲವಾಸಾ ಸಮಿತಿಯ ಶಿಫಾರಸಿನಿಂದಾಗಿ ಕೇಂದ್ರ ಸರಕಾರ 47 ಲಕ್ಷ ನೌಕರರಿಗೆ ಹಾಗೂ 53 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ಸರಕಾರಿ ನೌಕರರ ಒಟ್ಟು ವೇತನದಲ್ಲಿ ಭತ್ಯೆಗಳ ಅಂಶವೇ ಗಮನಾರ್ಹವಾಗಿದೆ.
ಕೇಂದ್ರ ಸರಕಾರವು ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಿಸಿದ ಬಳಿಕ ಅಶೋಕ ಲವಾಸಾ ಸಮಿತಿಯನ್ನು ಕಳೆದ ವರ್ಷ ಜೂನ್ ನಲ್ಲಿ ರೂಪಿಸಲಾಗಿತ್ತು.