Advertisement

ಸೆಪ್ಟೆಂಬರ್‌ ಅಂತ್ಯದ ವರೆಗೂ 7ನೇ ಆರ್ಥಿಕ ಗಣತಿ: ದೀಪಾ

01:43 PM Jun 18, 2019 | Team Udayavani |

ಧಾರವಾಡ: ಜಿಲ್ಲೆಯ ಸಂಘಟಿತ ಮತ್ತು ಅಸಂಘಟಿತ ವಲಯದ ಎಲ್ಲ ಉದ್ಯಮಗಳ ಗಣತಿ ಕಾರ್ಯ ಜೂನ್‌ ತಿಂಗಳಲ್ಲಿಯೇ ಆರಂಭಗೊಳ್ಳಲಿದ್ದು, ಸೆಪ್ಟೆಂಬರ್‌ ಅಂತ್ಯದವರೆಗೆ ಏಳನೇ ಆರ್ಥಿಕ ಗಣತಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

Advertisement

ಡಿಸಿ ಕಚೇರಿಯಲ್ಲಿ ಸೋಮವಾರ ನಡೆದ ಏಳನೇ ಆರ್ಥಿಕ ಗಣತಿ ಜಿಲ್ಲಾ ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರನೇ ಆರ್ಥಿಕ ಗಣತಿ ಪ್ರಕಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 34549, ನಗರ ಪ್ರದೇಶಗಳಲ್ಲಿ 40152 ಸೇರಿ 74701 ಉದ್ದಿಮೆಗಳು ಇವೆ. ಈ ಅಂಕಿ-ಅಂಶಗಳನ್ನು ಪ್ರಸಕ್ತ ಏಳನೇ ಆರ್ಥಿಕ ಗಣತಿಯೊಂದಿಗೆ ಹೋಲಿಕೆ ಮಾಡಬೇಕು. ಉದ್ದಿಮೆದಾರರು ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು ಎಂದು ತಿಳಿಸಿದರು.

ಸಾಮಾನ್ಯ ಸೇವಾ ಕೇಂದ್ರಗಳು, ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಸೇಶನ್‌ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದೆ. ಕೃಷಿ, ಸರ್ಕಾರಿ, ಸಾರ್ವಜನಿಕ, ರಕ್ಷಣಾ ಸಂಸ್ಥೆಗಳು, ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಸರಕುಗಳ ಉತ್ಪಾದನೆ, ವಿತರಣೆ, ಮಾರಾಟ ಹಾಗೂ ರಾಷ್ಟ್ರೀಯ ಉತ್ಪನ್ನಕ್ಕೆ ಮೌಲ್ಯ ತಂದು ಕೊಡುವ ಸೇವಾ ಚಟುವಟಿಕೆಗಳನ್ನು ಆರ್ಥಿಕ ಚಟುವಟಿಕೆಗಳು ಎಂದು ಪರಿಗಣಿಸಲಾಗುತ್ತದೆ ಎಂದರು.

ಆರ್ಥಿಕ ಗಣತಿಯು ದೇಶದ ಪ್ರಗತಿಯಲ್ಲಿ ರಾಷ್ಟ್ರೀಯ ತಲಾ ಆದಾಯ, ಜಿಡಿಪಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 1977ರಿಂದ 2012-13ರ ವರೆಗೆ ಆರು ಆರ್ಥಿಕ ಗಣತಿಗಳು ನಡೆದಿವೆ. ಇದೀಗ 2019ರ ಸೆಪ್ಟೆಂಬರ್‌ ಅಂತ್ಯದವರೆಗೆ ಏಳನೇ ಆರ್ಥಿಕ ಗಣತಿ ನಡೆಯಲಿದೆ. ಈ ಬಾರಿ ಮೊಬೈಲ್ ಆ್ಯಪ್‌ನೊಂದಿಗೆ ಸಿಎಸ್‌ಸಿ ಮತ್ತು ಎನ್‌ಎಸ್‌ಎಸ್‌ಒ ಗಣತಿ ಕಾರ್ಯ ನಡೆಯಲಿದೆ. ಬ್ಲಾಕುಗಳ ರಚನೆ, ಗಣತಿದಾರರ-ಮೇಲ್ವಿಚಾರಕರ ನೇಮಕಾತಿ, ಕ್ಷೇತ್ರ ಕಾರ್ಯ, ಪ್ರಗತಿ ವರದಿ ಸಲ್ಲಿಸುವ ಹೊಣೆ ಅವರದ್ದಾಗಿರುತ್ತದೆ ಎಂದು ತಿಳಿಸಿದರು.

ಎರಡನೇ ಹಂತದ ಮೇಲ್ವಿಚಾರಣೆ ಯನ್ನು ಸಾಂಖ್ಯೀಕ ಇಲಾಖೆ ನಿರ್ವಹಿಸಲಿದೆ. ಉಸ್ತುವಾರಿ ಸಮಿತಿಯಲ್ಲಿರುವ ಎಲ್ಲ ಇಲಾಖೆಗಳ ಅಧಿಕಾರಿಗಳು ಕಾರ್ಯಾ ಚರಣೆ ಸುಗಮವಾಗಿ, ಸುಸೂತ್ರವಾಗಿ ನಡೆಸಲು ಸಹಕರಿಸಬೇಕು. ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು, ಕಾರ್ಯ ನಿರ್ವಾಹಕ ಅಧಿಕಾರಿಗಳು ಗಣತಿ ಕಾರ್ಯದಲ್ಲಿ ಸ್ಥಳ ಪರಿಶೀಲನೆ ಮಾಡಿ ಖಚಿತಪಡಿಸಿಕೊಳ್ಳಬೇಕು ಎಂದರು.

Advertisement

ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರು, ಜಿಲ್ಲಾ ಸಾಂಖ್ಯೀಕ ಅಧಿಕಾರಿ ದೀಪಕ್‌ ಮಡಿವಾಳರ, ಎನ್‌ಎಸ್‌ಎಸ್‌ಒ ನಿರ್ದೇಶಕ ಮನೋಹರ, ಕ್ಷೇತ್ರಾಧಿಕಾರಿ ಎಸ್‌.ವಿ. ವಡಕಣ್ಣವರ, ಸಿ.ಎಸ್‌.ಸಿ. ಸಂಯೋಜಕ ಸಿದ್ದರಾಮಯ್ಯ ಇಂಡಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next