Advertisement

ಕಲೆಗಳತ್ತ ಒಲವು ತೋರಿದರೆ ಏಕಾಗ್ರತೆ ವೃದ್ಧಿ

02:05 PM May 03, 2022 | Team Udayavani |

ಧಾರವಾಡ: ಕಲೆ, ಸಾಹಿತ್ಯ, ರಂಗಭೂಮಿ, ಸಂಗೀತದ ಕಡೆ ಮಕ್ಕಳು ಹೆಚ್ಚು ಒಲವು ತೋರಿದರೆ ಏಕಾಗ್ರತೆಯೂ ಹೆಚ್ಚುತ್ತದೆ ಎಂದು ಪಂ| ಸೋಮನಾಥ ಮರಡೂರ ಹೇಳಿದರು.

Advertisement

ಆಲೂರು ವೆಂಕಟರಾವ್‌ ಸಾಂಸ್ಕೃತಿಕ ಭವನದಲ್ಲಿ ದರ್ಬಾರ ಸಂಗೀತ ಕಲಾ ಸಂಸ್ಥೆಯು ಪದ್ಮವಿಭೂಷಣ ಪಂ| ಪುಟ್ಟರಾಜ ಕವಿ ಗವಾಯಿಗಳ 109ನೇ ಜನ್ಮದಿನೋತ್ಸವ ಹಾಗೂ ಕಲಾ ಸಂಸ್ಥೆಯ 7ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಂಗೀತೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಲೆಗಳು ತಲೆತಲಾಂತರಗಳಿಂದ ನಮಗೆ ಬಳುವಳಿಯಾಗಿ ಬಂದಿವೆ. ಅವುಗಳನ್ನು ಅಷ್ಟೇ ಪ್ರಾಮಾಣಿಕವಾಗಿ ಮುಂದುವರಿಸಿಕೊಂಡು ಹೋಗಲು ಶ್ರಮಿಸಬೇಕಾಗಿದೆ. ಅದರಲ್ಲೂ ಸಂಗೀತವನ್ನು ನಾವು ನಮ್ಮ ಸಂತೋಷಕ್ಕಾಗಿ ಶ್ರದ್ಧಾ ಭಕ್ತಿಯಿಂದ ಕಲಿಯಬೇಕು ಎಂದರು.

ಕವಿವಿ ಲಲಿತಕಲಾ ಮತ್ತು ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಶಾಂತಾರಾಮ ಹೆಗಡೆ ಮಾತನಾಡಿ, ನಮ್ಮ ಸಂಗೀತ ಪರಂಪರೆಯ ಇತಿಹಾಸವನ್ನು ಅವಲೋಕಿಸಬೇಕು. ಸಂಗೀತ ಕ್ಷೇತ್ರದಲ್ಲಿ ಗುರು-ಶಿಷ್ಯ ಪರಂಪರೆ ಅವ್ಯಾಹತವಾಗಿ ನಡೆದು ಬಂದಿದ್ದು, ಆ ಪರಂಪರೆಯ ಭಾಗವಾಗಿಯೇ ಈಗ ಸಂಗೀತೋತ್ಸವ ಜರುಗುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ಪಂ| ಪುಟ್ಟರಾಜ ಕವಿ ಗವಾಯಿಗಳ ಹೆಸರನ್ನು ತೆಗೆದುಕೊಂಡಾಗ ಅವರ ಕೆಲವೊಂದು ಆದರ್ಶಗಳು ಮೂರ್ತ ಸ್ವರೂಪವಾಗಿ ನಮ್ಮ ಕಣ್ಣೆದುರು ಬರುತ್ತವೆ. ಗುರುವಂದನಾ ಪರಿಪಾಲನೆ, ಶಿವಭಕ್ತಿ ಅನುಷ್ಠಾನ, ದೈವಿಕ ಭೋಗಗಳ ತ್ಯಾಗ, ಜಾತ್ಯತೀತ ಸಮಾನತೆಯ ಭಾವ ಇವೆಲ್ಲವೂ ಮೂರ್ತ ರೂಪವಾಗಿ ಕಂಡುಬರುತ್ತವೆ. ಪಂ| ಪುಟ್ಟರಾಜ ಕವಿಗವಾಯಿಗಳು ಒಬ್ಬ ಶ್ರೇಷ್ಠ ಸಂಗೀತ ಸಂತರಾಗಿ, ಶ್ರೇಷ್ಠ ಗುರುಗಳಾಗಿ, ದೀನ-ದಲಿತರಿಗೆ ದಾರಿದೀಪವಾಗಿ ಬೆಳಕನ್ನು ಕೊಟ್ಟವರಾಗಿದ್ದಾರೆ ಎಂದರು.

Advertisement

ಪಂ| ರಾಜಶೇಖರ ಮನಸೂರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಾ| ವಿಜಯಮಹಾಂತೇಶ ಪೂಜಾರ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಕುಮಾರೇಶ್ವರ ಕಲ್ಚರಲ್‌ ಸೊಸೈಟಿ ಅಧ್ಯಕ್ಷ ಪ್ರಕಾಶ ಬಾಳಿಕಾಯಿ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಸಿ.ವಿ. ಹಾವನೂರ, ಕಲಾವಿದರಾದ ಸಾತಲಿಂಗಪ್ಪ ಕಲ್ಲೂರ ದೇಸಾಯಿ, ಡಾ| ಶ್ರೀಧರ ಕುಲಕರ್ಣಿ, ಡಾ|ಎ.ಎಲ್‌. ದೇಸಾಯಿ, ಡಾ| ಗುರುಬಸವ ಮಹಾಮನೆ, ಅನಿಲ ಮೇತ್ರಿ, ಮಹಾದೇವ ಸರಶೆಟ್ಟಿ, ಡಾ| ವೆಂಕಟೇಶ ಮುತ್ತಣ್ಣವರ, ಸುರೇಶ ಶಿಂಗನಳ್ಳಿ, ವಿನಾಯಕ ಇನಾಂದಾರ, ಶರಣಪ್ಪ ಪೂಜಾರ, ಕಲ್ಮೇಶ ಹೂಗಾರ, ವಿನುತ ಆರ್‌., ಮಂಜುನಾಥ ಅಂಜೂಟಿ, ಬಸವರಾಜ ಶಿರೋಸಿ, ವಿ.ಆರ್‌. ಪಾಟೀಲ ಇದ್ದರು. ಎನ್‌.ಬಿ. ದ್ಯಾಪುರ ನಿರೂಪಿಸಿದರು. ಬಸವರಾಜ ಹೂಗಾರ ಸ್ವಾಗತಿಸಿದರು. ಮಲ್ಲೇಶ ಹೂಗಾರ ವಂದಿಸಿದರು.

 ಸಂಗೀತೋತ್ಸವ: ನಂತರ ಜರುಗಿದ ಸಂಗೀತೋತ್ಸವದಲ್ಲಿ ಶ್ರೀಧರ ಭಜಂತ್ರಿಯವರ ಶಹನಾಯಿ ವಾದನಕ್ಕೆ ಕಲ್ಮೇಶ ಬಣ್ಣದನೂಲಮಠ ತಬಲಾ ಸಾಥ್‌ ನೀಡಿದರು. ಕಲಬುರಗಿಯ ಬದರಿನಾಥ ಮುಡಬಿಯವರ ವಯೋಲಿನ್‌ ವಾದನಕ್ಕೆ ತಬಲಾದಲ್ಲಿ ರಾಜಕುಮಾರ ಮುಡಬಿ ಸಾಥ್‌ ನೀಡಿದರು. ಕುಮಾರ ಮರಡೂರ ಅವರ ಗಾಯನಕ್ಕೆ ತಬಲಾದಲ್ಲಿ ಶ್ರೀಧರ ಮಾಂಡ್ರೆ ಮತ್ತು ಹಾರ್ಮೋನಿಯಂದಲ್ಲಿ ವಿನೋದ ಪಾಟೀಲ ಸಾಥ್‌ ನೀಡಿದರು. ತಾನಪೂರದಲ್ಲಿ ಕೃಷ್ಣಾ ಸುತಾರ ಮತ್ತು ಮಣಿಕಂಠ ನಿರ್ವಹಿಸಿದರು. ದರ್ಬಾರ ಸಂಗೀತ ಕಲಾ ಸಂಸ್ಥೆಯ ವಿದ್ಯಾರ್ಥಿಗಳು ಗಾಯನ ಪ್ರಸ್ತುತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next