Advertisement

ಕೊಲ್ಹಾಪುರ ತುಳುಕೂಟದ 7ನೇ ವಾರ್ಷಿಕೋತ್ಸವ ಸಂಭ್ರಮ

01:46 PM Feb 26, 2019 | |

 ಕೊಲ್ಹಾಪುರ: ಕೊಲ್ಹಾಪುರ ಮತ್ತು ಆಸುಪಾಸಿನ ಇಚಲಕರಂಜಿ ಹಾಗೂ ಜೈಸಿಂಗ್‌ಪುರದ ತುಳು-ಕನ್ನಡ ಬಾಂಧವರ ಸಂಘಟನೆಯಾದ ಕೊಲ್ಹಾಪುರ ತುಳುಕೂಟದ 7ನೇ ವಾರ್ಷಿಕೋತ್ಸವ ಸಂಭ್ರಮವು ಫೆ. 17ರಂದು ರಾಮಕೃಷ್ಣ ಮಲ್ಟಿಪರ್ಪಸ್‌ ಲಾನ್‌ ಮತ್ತು ಹಾಲ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ, ಕಾರ್ಕಳ ಶಾಸಕ ವಿ. ಸುನೀಲ್‌ ಕುಮಾರ್‌ ಅವರು, ಕೊಲ್ಹಾಪುರ ತುಳುವರ ಆತಿಥ್ಯ ಮತ್ತು ತುಳುಕೂಟದ ಸಾಧನೆಗಳನ್ನು ಕಂಡಾಗ ಸಂತೋಷವಾಗುತ್ತಿದೆ. ನಮ್ಮೂರಿನಲ್ಲಿ ನಡೆಯುವುದಕ್ಕಿಂತ ಉತ್ತಮವಾದ ಕಾರ್ಯಕ್ರಮ ಗಳು ಇಲ್ಲಿ ನಡೆದಿರುವುದು ಅಭಿನಂದನೀಯ. ಕೊಲ್ಹಾಪುರ ಜನತೆಯ ಭಾಷಾಭಿಮಾನ ಮೆಚ್ಚುವಂಥದ್ದಾಗಿದೆ. ನಿಮ್ಮ ನಾಡು-ನುಡಿ, ಸಂಸ್ಕೃತಿಯ ಸೇವೆ ಮುಂದುವರಿಯಲಿ ಎಂದು ನುಡಿದು ಸಂಸ್ಥೆಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಅಭಿನಂದಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಗರ ಸೇವಕ ವಿಜಯಾನಂದ ಶೆಟ್ಟಿ ಇವರು ಮಾತನಾಡಿ, ತುಳುಕೂಟದ ಒಗ್ಗಟ್ಟು ಮತ್ತು ಕಾರ್ಯವೈಖರಿ ಅಭಿನಂದನೀಯವಾಗಿದೆ ಎಂದರು. ಇನ್ನೋರ್ವ ಅತಿಥಿ ಉದ್ಯಮಿ ವಿಟuಲ್‌ ಹೆಗ್ಡೆ ಇವರು ಮಾತನಾಡಿ ಶುಭ ಹಾರೈಸಿದರು.

ಸಮಾರಂಭದಲ್ಲಿ ಪುಣೆ ಬಂಟರ ಭವನದ ರೂವಾರಿ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನಕುರ್ಕಿಲ್‌ಬೆಟ್ಟು ಮತ್ತು ದಿವ್ಯಾ ಎಸ್‌. ಶೆಟ್ಟಿ ದಂಪತಿಯನ್ನು ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಿದರು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಸಂತೋಷ್‌ ಶೆಟ್ಟಿ ಅವರು, ತುಳುಕೂಟದ ವತಿಯಿಂದ ಅದ್ದೂರಿಯಾಗಿ ಸಮ್ಮಾನಿಸಿರುವುದಕ್ಕೆ ಸಂತೋಷ ವಾಗುತ್ತಿದೆ. ಈ ಸಮ್ಮಾನವನ್ನು ಪುಣೆ ಬಂಟರ ಪರವಾಗಿ ಮತ್ತು ಭವನದ ಸ್ಥಾಪನೆಗೆ ದೇಣಿಗೆ ನೀಡಿದ ಗಣ್ಯರಿಗೆ ಅರ್ಪಿಸುತ್ತಿದ್ದೇನೆ. ಪುಣೆ ಬಂಟರ ಭವನವನ್ನು ತುಳು-ಕನ್ನಡಿಗರ ಎಲ್ಲ ಕಾರ್ಯಕ್ರಮಗಳಿಗೆ ವಿನಿಯೋಗಿಸಿಕೊಳ್ಳಬಹುದು. ನಿಮ್ಮ ಸಂಸ್ಥೆಯ ನಾಡು-ನುಡಿ, ಸಂಸ್ಕೃತಿಯ ಸೇವೆ ಮಾದರಿಯಾಗಿದ್ದು, ಯುವಪೀಳಿಗೆಯನ್ನು ಸಂಸ್ಥೆಯು ಆಕರ್ಷಿಸುವಲ್ಲಿ ಮುಂದಾಗಲಿ  ಎಂದು ನುಡಿದು ಶುಭ ಹಾರೈಸಿದರು.

Advertisement

ಅತಿಥಿ-ಗಣ್ಯರು ದೀಪ  ಪ್ರಜ್ವಲಿಸಿ ಸಮಾ ರಂಭಕ್ಕೆ ಚಾಲನೆ ನೀಡಿದರು. ಪ್ರಾರಂಭದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯದರ್ಶಿ ವಿಜಯ ಶೆಟ್ಟಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ಆರ್‌. ಶೆಟ್ಟಿ ಅವರು ಸಮ್ಮಾನ ಪತ್ರ ವಾಚಿಸಿದರು.

ಸಮಾರಂಭದಲ್ಲಿ ಕಳೆದ ಸಾಲಿನ ಎಸ್‌ಎಸ್‌ಸಿ, ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಸದಸ್ಯ ಬಾಂಧವರ ಮಕ್ಕಳನ್ನು ವಿದ್ಯಾರ್ಥಿ ವೇತನವನ್ನಿತ್ತು ಗೌರವಿಸಲಾಯಿತು. ರಾಜೇಶ್‌ ಪಡುಬಿದ್ರೆ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಗಣ್ಯರೊಂದಿಗೆ ಸಂಸ್ಥೆಯ ಅಧ್ಯಕ್ಷ ತ್ಯಾಗರಾಜ್‌ ಶೆಟ್ಟಿ, ಗೌರವಾಧ್ಯಕ್ಷ ವಸಂತ ಶೆಟ್ಟಿ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಆಶಾಲತಾ ಎಸ್‌. ಶೆಟ್ಟಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ತುಳುಕೂಟದ ಸದಸ್ಯರು ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಕೊಲ್ಹಾಪುರ, ಬೆಳಗಾವಿ, ಇಚಲಕರಂಜಿ, ಜೈಸಿಂಗ್‌ಪುರ, ಸಾಂಗ್ಲಿ, ಕರಾಡ್‌, ಸತಾರ, ಪುಣೆ ಇನ್ನಿತೆರೆಡೆಗಳಿಂದ ತುಳು-ಕನ್ನಡಿಗರು ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next