Advertisement

ದಕ್ಷಿಣ ಕನ್ನಡ ಜಿಲ್ಲೆ: 79 ಮಂದಿಗೆ ಕೋವಿಡ್ 19 ಸೋಂಕು ದೃಢ; ಉಡುಪಿ ಜಿಲ್ಲೆ: 7ಪ್ರಕರಣ ದಾಖಲು

01:55 AM Jun 17, 2020 | Hari Prasad |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 79 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

Advertisement

ಜಿಲ್ಲೆಯಲ್ಲಿ ಒಂದೇ ದಿನ ಇಷ್ಟು ಸಂಖ್ಯೆಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿರುವುದು ಇದೇ ಮೊದಲು. ಬಾಧಿತರಲ್ಲಿ 75 ಮಂದಿಯೂ ಸೌದಿ ಅರೇಬಿಯಾದಿಂದ ಬಂದವರು.

ಸೌದಿಯಿಂದ ಹಿಂದಿರುಗಿ ಕ್ವಾರಂಟೈನ್‌ನಲ್ಲಿದ್ದ 2ರ ಬಾಲಕಿ, 12ರ ಬಾಲಕ, 18 ವರ್ಷದ ಯುವಕ, 20ರಿಂದ 30 ವರ್ಷದೊಳಗಿನ 42 ಮಂದಿ, 31ರಿಂದ 40 ವರ್ಷದೊಳಗಿನ 20 ಮಂದಿ, 41ರಿಂದ 50ರೊಳಗಿನ 8 ಮಂದಿ, 51ರಿಂದ 60 ವರ್ಷದೊಳಗಿನ 2 ಮಂದಿ, ಪುಣೆಯಿಂದ ಆಗಮಿಸಿ ಕ್ವಾರಂಟೈನ್‌ ನಲ್ಲಿದ್ದ 24 ವರ್ಷದ ಯುವಕ, ಮುಂಬಯಿಯಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ 23 ಮತ್ತು 20 ವರ್ಷದ ಯುವಕರು ಹಾಗೂ ಐಎಲ್‌ಐಯಿಂದ (ಇನ್‌ಫ್ಲೂಯೆನ್ಹಾ ಲೈಕ್‌ ಇಲ್‌ನೆಸ್‌) ಬಳಲುತ್ತಿದ್ದ ಪುತ್ತೂರಿನ 25ರ ಯುವಕನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

11 ಮಂದಿ ಬಿಡುಗಡೆ
ಕೋವಿಡ್ 19 ಸೋಂಕು ದೃಢಪಟ್ಟು ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 44 ವರ್ಷದ ವ್ಯಕ್ತಿ, 63 ವರ್ಷದ ವ್ಯಕ್ತಿ, 50 ವರ್ಷದ ವ್ಯಕ್ತಿ, 44 ವರ್ಷದ ವ್ಯಕ್ತಿ, 38 ವರ್ಷದ ಇಬ್ಬರು ವ್ಯಕ್ತಿಗಳು, 24 ವರ್ಷದ ಇಬ್ಬರು, 25 ವರ್ಷದ ವ್ಯಕ್ತಿ, 45 ವರ್ಷದ ವ್ಯಕ್ತಿ ಹಾಗೂ 33 ವರ್ಷದ ವ್ಯಕ್ತಿ ಬಿಡುಗಡೆಗೊಂಡವರು.

329 ವರದಿ ಬರಲು ಬಾಕಿ
ಆಸ್ಪತ್ರೆಯಲ್ಲಿ ಮಂಗಳವಾರ ಸ್ವೀಕರಿಸಲಾದ ಒಟ್ಟು 296 ಮಂದಿಯ ಗಂಟಲ ದ್ರವ ಮಾದರಿ ಪರೀಕ್ಷಾ ವರದಿ ಪೈಕಿ 79 ಪಾಸಿಟಿವ್‌, 217 ನೆಗೆಟಿವ್‌ ಬಂದಿದೆ. 329 ವರದಿ ಬರಲು ಬಾಕಿ ಇದ್ದು, ಹೊಸದಾಗಿ 84 ಮಂದಿಯ ಮಾದರಿ ಕಳುಹಿಸಲಾಗಿದೆ. 28 ಮಂದಿ ತೀವ್ರ ಉಸಿರಾಟದ ಸಮಸ್ಯೆಯಿಂದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

Advertisement

ಹಿರೇಬಂಡಾಡಿಯ ಯುವಕನಿಗೆ ಸೋಂಕು
ಹದಿನೈದು ದಿನಗಳ ಹಿಂದೆ ಮೆದುಳು ಜ್ವರ ಬಾಧಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾದ ಹಿರೇಬಂಡಾಡಿ ಗ್ರಾಮದ ಕೊಳ್ಳೇಜಾಲ್‌ ನಿವಾಸಿ ಯುವಕನಿಗೆ ಕೋವಿಡ್‌-19 ದೃಢ ಪಟ್ಟಿದೆ. ಯುವಕನ ಮನೆ, ಪ್ರಾಥಮಿಕ ಸಂಪರ್ಕ ಹೊಂದಿರುವ 2 ಮನೆಗಳನ್ನು ಸೀಲ್‌ಡೌನ್‌ ಮಾಡುವ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ.  5 ದಿನಗಳ ಹಿಂದೆ ಮತ್ತೆ ಜ್ವರ ಕಾಣಿಸಿಕೊಂಡ ಕಾರಣ ಪುತ್ತೂರು ಆಸ್ಪತ್ರೆಗೆ ಬಳಿಕ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿದಾಗ ಪಾಸಿಟಿವ್‌ ವರದಿ ಬಂದಿದೆ.

ಉಡುಪಿ ಜಿಲ್ಲೆ: 7 ಪ್ರಕರಣ ದಾಖಲು ; ಒಟ್ಟು 1,035ಕ್ಕೇರಿಕೆ; 65 ಮಂದಿ ಬಿಡುಗಡೆ
ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 7 ಕೋವಿಡ್ 19 ಸೋಂಕು ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ. ಸೋಂಕು ದೃಢಪಟ್ಟ 4 ಮಂದಿ ಪುರುಷರು, ಓರ್ವ ಮಹಿಳೆ ಹಾಗೂ ಇಬ್ಬರು ಮಕ್ಕಳು ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,035ಕ್ಕೆ ತಲುಪಿದೆ. ಮಂಗಳವಾರ ಒಟ್ಟು 100 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. 24 ಮಂದಿ 28 ದಿನಗಳ ನಿಗಾವಣೆ ಪೂರೈಸಿದ್ದಾರೆ.

ತೀವ್ರ ಉಸಿರಾಟದ ಸಮಸ್ಯೆಯುಳ್ಳ ಇಬ್ಬರು ಪುರುಷರು, ಮೂವರು ಮಹಿಳೆಯರು, ಸೋಂಕು ಸಂಪರ್ಕವುಳ್ಳ ಓರ್ವ ಪುರುಷ, ಫ್ಲ್ಯೂ ಜ್ವರ ಲಕ್ಷಣವುಳ್ಳ ಓರ್ವ ಪುರುಷ, ಇಬ್ಬರು ಮಹಿಳೆಯರ ಸಹಿತ ಒಟ್ಟು 9 ಮಂದಿ ಐಸೊಲೇಶನ್‌ ವಾರ್ಡ್‌ಗೆ ದಾಖಲಾಗಿದ್ದಾರೆ. 11 ಮಂದಿ ಐಸೊಲೇಶನ್‌ ವಾರ್ಡ್‌ನಿಂದ ಬಿಡುಗಡೆಯಾಗಿದ್ದಾರೆ.

84 ಮಂದಿಯ ಮಾದರಿ ಸಂಗ್ರಹ
ಹಾಟ್‌ಸ್ಪಾಟ್‌ ಸಂಪರ್ಕವುಳ್ಳ 62 ಮಂದಿ ಸಹಿತ ಒಟ್ಟು 84 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. 27 ಮಂದಿಯ ವರದಿ ನೆಗೆಟಿವ್‌ ಬಂದಿದೆ. 102 ವರದಿ ಬರಲು ಬಾಕಿಯಿವೆ. ಜಿಲ್ಲೆಯಲ್ಲಿ ಮಂಗಳವಾರ 65 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 885 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಬೇರೆ ಪ್ರದೇಶಗಳಿಂದ ಆಗಮಿಸಿದವರು ಸಾಮಾಜಿಕ ಅಂತರ ಕಾಪಾಡುವುದು ಅತೀ ಅಗತ್ಯ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

ಕೋಟ: ಇಬ್ಬರು ಮಕ್ಕಳಿಗೆ ಸೋಂಕು
ಕೋಟ ಹೋಬಳಿ ವ್ಯಾಪ್ತಿಯ ಕಾವಡಿ ಗ್ರಾಮದ ಮಾನಂಬಳ್ಳಿ ಹಾಗೂ ಕಾವಡಿ ಜನತಾ ಕಾಲನಿಯಲ್ಲಿ ವಾಸವಿದ್ದ ಮುಂಬಯಿಯಿಂದ ಆಗಮಿಸಿದ ಎಳು ಮತ್ತು ಒಂಬತ್ತು ವರ್ಷದ ಮಕ್ಕಳಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದ್ದು ಎರಡು ಮನೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲವು ದಿನಗಳ ಹಿಂದೆ ಎರಡು ಕುಟುಂಬಗಳು ಹುಟ್ಟೂರಿಗೆ ಆಗಮಿಸಿದ್ದು ಸರಕಾರದ ನಿಯಮದಂತೆ ಮನೆಗಳನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಇದೀಗ ಇಬ್ಬರು ಮಕ್ಕಳನ್ನು ಕೋವಿಡ್ 19 ಸೋಂಕು ಪರೀಕ್ಷೆಗೊಳಪಡಿಸುವ ಸಂದರ್ಭ ಸೋಂಕು ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next