ನವದೆಹಲಿ:ದೇಶಾದ್ಯಂತ ಕೋವಿಡ್ 19 ಪರಿಸ್ಥಿತಿ ತೀವ್ರಗತಿಯಲ್ಲಿ ಸುಧಾರಣೆಯಾಗುತ್ತಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ (ಜೂನ್ 08) ತಿಳಿಸಿದ್ದು, ಲಸಿಕೆ ಅಭಿಯಾನದ ಪರಿಣಾಮವಾಗಿ ದಿನಂಪ್ರತಿ ಪತ್ತೆಯಾಗುತ್ತಿದ್ದ ಕೋವಿಡ್ ಪ್ರಕರಣ ಮತ್ತು ಸಾವಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗುವಂತಾಗಿದೆ ಎಂದು ಹೇಳಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಿದ್ರೆ ತಪ್ಪೇನು, ಅವರು ನವಾಜ್ ಷರೀಫ್ ಅಲ್ಲ: ಠಾಕ್ರೆ
ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲುವ್ ಅಗರ್ವಾಲ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ, ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ 19 ಪ್ರಕರಣ ಸಂಖ್ಯೆ ಇಳಿಕೆಯಾಗುತ್ತಿದೆ. ಕಳೆದ ಮೇ 7ಕ್ಕೆ ಹೋಲಿಸಿದಲ್ಲಿ ಸುಮಾರು ಶೇ.79ರಷ್ಟು ಪ್ರಕರಣ ಇಳಿಕೆಯಾಗಿದೆ. ಕಳೆದ ಒಂದು ತಿಂಗಳಿನಿಂದ 322 ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ದಿನಂಪ್ರತಿ ಇಳಿಕೆಯಾಗಿತ್ತು ಎಂದು ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಹೇಳಿದರು.
ಭಾರತದಲ್ಲಿನ ಚೇತರಿಕೆ ಪ್ರಮಾಣ ಕೂಡಾ ಶೇ.94.3ರಷ್ಟಿದೆ. ಜೂನ್ 1ರಿಂದ 7ರವರೆಗೆ ಒಟ್ಟಾರೆಯಾಗಿ ಪಾಸಿಟಿವಿಟಿ ದರ ಕೂಡಾ ಶೇ.6.3ಕ್ಕೆ ಇಳಿಕೆಯಾಗಿದೆ ಎಂದು ಅಗರ್ವಾಲ್ ತಿಳಿಸಿದ್ದಾರೆ. ಕಳೆದ ವಾರದಲ್ಲಿ ಶೇ.33ರಷ್ಟು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು ಎಂದರು.
ಕೋವಿಡ್ ಎರಡನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಎನ್ನುವುದಕ್ಕೆ ಜಾಗತಿಕವಾಗಿ ಅಥವಾ ಭಾರತದಲ್ಲಾಗಲಿ ಯಾವುದೇ ಅಂಕಿಅಂಶ ಇಲ್ಲ ಎಂದು ಏಮ್ಸ್ ನಿರ್ದೇಶಕ ಡಾ.ರಣ್ ದೀಪ್ ಗುಲೇರಿಯಾ ತಿಳಿಸಿದ್ದಾರೆ.