ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗೆ ತೆರವಾಗಿದ್ದ ಎರಡು ತಾಪಂ ಕ್ಷೇತ್ರಗಳಿಗೆ ಭಾನುವಾರ 19 ಮತಗಟ್ಟೆಗಳಲ್ಲಿ ನಡೆದ ಉಪ ಚುನಾವಣೆ ಬಹುತೇಕ ಶಾಂತಿಯುತವಾಗಿ ತೆರೆ ಕಂಡಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ಶೇ.77.47 ಮತದಾನ ದಾಖಲಾಗಿದೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರುಬೂರು ಹಾಗೂ ಗೌರಿಬಿದನೂರು ತಾಲೂಕಿನ ಶ್ಯಾಂಪುರ ತಾಪಂ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 6,708 ಪುರುಷರು ಹಾಗೂ 6,619 ಮಹಿಳೆಯರು ಸೇರಿ ಒಟ್ಟು 13,327 ಮಂದಿ ಮತದಾರರ ಪೈಕಿ ಚುನಾವಣೆಯಲ್ಲಿ 5,198 ಪುರುಷರು, 5,126 ಮಹಿಳೆಯರು ಸೇರಿ ಒಟ್ಟು 10,324 ಮಂದಿ ಮಾತ್ರ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರುಬೂರು ತಾಪಂ ಉಪ ಚುನಾವಣೆಗೆ ಒಟ್ಟು 9 ಮತಗಟ್ಟೆಗಳನ್ನು ಸ್ಥಾಪಿಸಿದ್ದು ಒಟ್ಟು 3,075 ಪುರುಷರು, 3,085 ಮಹಿಳೆಯರು ಸೇರಿ ಒಟ್ಟು 6,708 ಮಂದಿ ಮತದಾರರ ಪೈಕಿ ಚುನಾವಣೆಯಲ್ಲಿ 2,488 ಪುರುಷರು, 2,509 ಮಹಿಳೆಯರು ಸೇರಿ ಒಟ್ಟು 4,997 ಮಂದಿ ತಮ್ಮ ಹಕ್ಕು ಚಲಾವಣೆ ಮಾಡುವ ಮೂಲಕ ಉಪ ಚುನಾವಣೆಯಲ್ಲಿ ಶೇ.81.12 ರಷ್ಟು ಮತದಾನ ದಾಖಲಾಗಿದೆ. ಕುರುಬೂರು ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಮಾಜಿ ಶಾಸಕ ಡಾ.ಎಂ.ಸಿ,ಸುಧಾಕರ್ ನೇತೃತ್ವದ ಭಾರತೀಯ ಪ್ರಜಾ ಪಕ್ಷದ ಅಭ್ಯರ್ಥಿ ಸೇರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕ್ಷೇತ್ರದ ತಾಪಂ ಸದಸ್ಯರಾಗಿದ್ದ ಸೀಕಲ್ಲು ರಾಜಕುಮಾರ್ ಕಳೆದ ಜುಲೈ ತಿಂಗಳಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದರು.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ಶ್ಯಾಂಪುರ ತಾಪಂ ಕ್ಷೇತ್ರಕ್ಕೆ 10 ಮತಗಟ್ಟೆಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಒಟ್ಟು 3,633 ಪುರುಷರು, 3,534 ಮಹಿಳೆಯರು ಸೇರಿ ಒಟ್ಟು 7,167 ಮಂದಿ ಮತದಾರರ ಪೈಕಿ ಚುನಾವಣೆಯಲ್ಲಿ 2,710 ಪುರುಷರು, 2,617 ಮಂದಿ ಮಹಿಳಾ ಮತದಾರರು ಸೇರಿ ಒಟ್ಟು 5,327 ಮಂದಿ ಮಾತ್ರ ತಮ್ಮ ಹಕ್ಕು ಚಲಾವಣೆ ಮಾಡುವ ಮೂಲಕ ಶೇ.73.33 ಮತದಾನ ದಾಖಲಾಗಿದೆ. ಶ್ಯಾಂಪುರ ತಾಪಂ ಉಪ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಸೆಣಸಾಟ ನಡೆದಿದ್ದು ಫಲಿತಾಂಶ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.