Advertisement

75 ವರ್ಷದ ಬಳಿಕ ಬಂತು ಚಿತಾಭಸ್ಮ

09:14 AM Jun 06, 2019 | Team Udayavani |

ಹಿಸ್ಸಾರ್‌: ಎರಡನೇ ಮಹಾಯುದ್ಧದಲ್ಲಿ ಹುತಾತ್ಮರಾಗಿದ್ದ ಇಬ್ಬರು ಭಾರತೀಯ ಯೋಧರ ಚಿತಾಭಸ್ಮ ಬರೋಬ್ಬರಿ 75 ವರ್ಷಗಳ ಬಳಿಕ ಸ್ವಗ್ರಾಮಗಳನ್ನು ತಲುಪಿದೆ! ಅಚ್ಚರಿಯಾದರೂ ಇದು ಸತ್ಯ. ಯೋಧರ ಚಿತಾಭಸ್ಮವನ್ನು 75 ವರ್ಷಗಳ ನಂತರ ಇಟಲಿಯಿಂದ ಹರ್ಯಾಣದ ಹಿಸಾರ್‌ ಹಾಗೂ ಝಜ್ಜರ್‌ ಗ್ರಾಮಗಳಿಗೆ ಮಂಗಳವಾರ ತಂದು ಸಂಬಂಧಿಗಳಿಗೆ ಒಪ್ಪಿಸಲಾಯಿತು. 1939ರಿಂದ 1945ರವರೆಗೆ ನಡೆದಿದ್ದ 2ನೇ ಮಹಾ ಯುದ್ಧದಲ್ಲಿ ಈ ಯೋಧರು ಹುತಾತ್ಮರಾಗಿದ್ದರು.

Advertisement

ಭಾರತೀಯ ಸೇನೆಯ ನಿವೃತ್ತ ಅಧಿಕಾರಿಯಾದ ಕ್ಯಾ. ಪ್ರದೀಪ್‌ ಬಾಲಿ ಎಂಬುವರ ಹೇಳಿಕೆ ಪ್ರಕಾರ, ಯುದ್ಧದಲ್ಲಿ ಬ್ರಿಟನ್‌ ಪರವಾಗಿ ಕಾದಾಡಲು ಭಾರತದಿಂದ ಬ್ರಿಟನ್‌ಗೆ ತೆರಳಿದ್ದ ಭಾರತೀಯ ಸೈನಿಕರ 4ನೇ ಬೆಟಾಲಿಯನ್‌ನಲ್ಲಿದ್ದ 19 ವರ್ಷದ ಪಾಲು ರಾಮ್‌ ಹಾಗೂ 18 ವರ್ಷದ ಹರಿ ಸಿಂಗ್‌, ಜರ್ಮನಿ ವಿರುದ್ಧ ಯುದ್ಧ ಮಾಡುವಾಗ ಸಾವನ್ನಪ್ಪಿದ್ದರು.

ಯುದ್ಧ ಮುಗಿದು ದಶಕಗಳೇ ಉರುಳಿದ್ದರೂ ಈಗಲೂ ಐರೋಪ್ಯ ರಾಷ್ಟ್ರಗಳಲ್ಲಿ ಯುದ್ಧದ ಅವಶೇಷಗಳು ಸಿಗುತ್ತಿವೆ. ಅದರಂತೆ, ಪಾಲು ಮತ್ತು ಹರಿಯವರ ಮೃತದೇಹದ ಅವಶೇಷಗಳು, 1960ರ ದಶಕದಲ್ಲೇ ಸಿಕ್ಕಿದ್ದವು. ಆದರೆ, ಆಗ ಅವುಗಳ ಗುರುತು ಪತ್ತೆಯಾಗಿರಲಿಲ್ಲ. ಅವಶೇಷಗಳು ಯಾರವೆಂದು ಪತ್ತೆ ಮಾಡಲು ದಶಕಗಳೇ ಉರುಳಿದವು.

ಆರು ವರ್ಷಗಳ ಹಿಂದೆ, ಪಾಲು ರಾಮ್‌ ಹಾಗೂ ಹರಿ ಸಿಂಗ್‌ ಅವರ ಮೂಲ, ಡಿಎನ್‌ಎ ಪರೀಕ್ಷೆಯಿಂದ ದೃಢಪಟ್ಟಿತ್ತು. ಅವರು ಯುರೋಪಿಯನ್‌ ಯೋಧರಲ್ಲ ಎಂಬುದು ಸ್ಪಷ್ಟವಾದೊಡನೆ, ಭಾರತೀಯ ಸೇನೆಯ ನೆರವು ಪಡೆದು ಯೋಧರ ಕುಟುಂಬಗಳನ್ನು ಪತ್ತೆ ಹಚ್ಚಲಾಯಿತು.

ಯೋಧರಿಬ್ಬರ ಚಿತಾಭಸ್ಮ ಸ್ವಗ್ರಾಮಗಳಿಗೆ ಆಗಮಿಸಿದೊಡನೆ, ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಲ್ಲಿ ಸೇರಿದ್ದ ನೂರಾರು ಮಂದಿ ಭಾರತ್‌ ಮಾತಾಕಿ ಜೈ ಎಂದು ಘೋಷಣೆ ಕೂಗಿ ಹುತಾತ್ಮರಿಗೆ ನಮನ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next