Advertisement

ಒಂದೇ ವರ್ಷದಲ್ಲಿ 7,433 ಪಾಸ್‌ಪೋರ್ಟ್‌ ವಿತರಣೆ!

08:47 PM Jan 12, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಪಾಸ್‌ಪೋರ್ಟ್‌ ಅಂದರೆ ಶ್ರೀಮಂತರಿಗೆ, ಉದ್ದಿಮೆದಾರರಿಗೆ, ಬಂಡವಾಳಸ್ಥರಿಗೆ ಹಾಗೂ ವಿಐಪಿ ಮತ್ತು ದೊಡ್ಡ ದೊಡ್ಡ ಅಧಿಕಾರಿಗಳು ಮಾತ್ರ ಬಳಸುವುದು ಎನ್ನುವ ಕಾಲ ಇತ್ತು. ಅದರಲ್ಲೂ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದರೆ ಪೊಲೀಸ್‌ ಇಲಾಖೆ ಪರಿಶೀಲನೆ, ದಾಖಲೆಗಳ ತಪಾಸಣೆ ಹೆಸರಲ್ಲಿ ತಿಂಗಳಾನುಗಟ್ಟಲೇ ಕಾಯಬೇಕಿತ್ತು.

Advertisement

ಆದರೆ, ಈಗ ಕಾಲ ಬದಲಾಗಿದೆ. ಮೊದಲು ವಿದೇಶಿ ಪ್ರವಾಸಕ್ಕೆ ಮಾತ್ರ ಬಳಕೆ ಮಾಡಲಾಗುತ್ತಿದ್ದ ಪಾಸ್‌ಪೋರ್ಟ್‌ನ್ನು ಸರ್ಕಾರ ಉದ್ಯೋಗ ಪಡೆಯುವುದರಿಂದ ಗುರುತಿನ ಚೀಟಿಯಾಗಿ ಪರಿಗಣಿಸಲು ಕಡ್ಡಾಯಗೊಳಿಸಿರುವ ಪರಿಣಾಮ ಪಾಸ್‌ಪೋರ್ಟ್‌ ಪಡೆಯುವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಕಳೆದ 2019 ರಲ್ಲಿ ಜಿಲ್ಲೆಯಲ್ಲಿ ಆರಂಭಗೊಂಡ ಅಂಚೆ ಕಚೇರಿ ಪಾಸ್‌ಪೋರ್ಟ್‌ ಸೇವಾ ಕೇಂದ್ರದಲ್ಲಿ ಪಾಸ್‌ಪೋರ್ಟ್‌ ಪಡೆದವರ ಸಂಖ್ಯೆ ಒಂದೇ ವರ್ಷದಲ್ಲಿ 7,433 ದಾಟಿದೆ.

ಪಾಸ್‌ಪೋರ್ಟ್‌ ಪಡೆಯುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿ ಸಕಾಲದಲ್ಲಿ ಪೊಲೀಸ್‌ ಪರಿಶೀಲನೆ ಆಗದೇ ಜೊತೆಗೆ ಬೆಂಗಳೂರಿನ ಕೇಂದ್ರ ಕಚೇರಿಗೆ ಸುತ್ತಾಡಿ ತಾಂತ್ರಿಕ ಕಾರಣಗಳಿಂದ ಸಿಗದೇ ಗ್ರಾಹಕರು ಪಡುತ್ತಿದ್ದ ಪಡಿಪಾಟಲು ಗಮನಿಸಿ ಕೇಂದ್ರ ಸರ್ಕಾರ ಕಳೆದ ಅವಧಿಯಲ್ಲಿ ಜಿಲ್ಲೆಗೊಂದರಂತೆ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಅಂಚೆ ಕಚೇರಿಯಲ್ಲಿ ಕೇಂದ್ರ ತೆರೆದಿದ್ದು, ಗ್ರಾಹಕರಿಗೆ ಸೇವೆ ಸುಲಭವಾಗಿ ಕೈಗೆಟುಕುವಂತೆ ಮಾಡಿದೆ.

7,433 ಪಾಸ್‌ಪೋರ್ಟ್‌ ವಿತರಣೆ: ಜಿಲ್ಲಾ ಕೇಂದ್ರದ ಬಿಬಿ ರಸ್ತೆಯಲ್ಲಿರುವ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ತೆರೆದಿದ್ದು, ಜಿಲ್ಲೆ ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ಹೊರ ರಾಜ್ಯಗಳ ಜನತೆ ಕೂಡ ಜಿಲ್ಲೆಯ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಸೌಲಭ್ಯ ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದ್ದು, ದಿನಕ್ಕೆ ಕನಿಷ್ಠ 40 ರಿಂದ 50 ಮಂದಿ ಪಾಸ್‌ಪೋರ್ಟ್‌ಗಾಗಿ ಸೇವಾ ಕೇಂದ್ರದ ಕದ ತಟ್ಟುತ್ತಿರುವುದು ನಗರದಲ್ಲಿ ಕಂಡು ಬರುತ್ತಿದೆ.

ವಿಶೇಷವಾಗಿ ವಿದೇಶ ಪ್ರವಾಸದ ಜೊತೆಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು, ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಂದ ಹೆಚ್ಚಿನದಾಗಿ ಪಾಸ್‌ಪೋರ್ಟ್‌ಗೆ ಬೇಡಿಕೆ ಬರುತ್ತಿದೆ. ಜೊತೆಗೆ ಬೆಂಗಳೂರು ಪಾಸ್‌ಪೋರ್ಟ್‌ ಕಚೇರಿ ದೂರ ಎಂಬ ಕಾರಣಕ್ಕೆ ಹಾಗೂ ಹೋಗಿ ಬರುವುದರಲ್ಲಿ ಒಂದು ದಿನ ಕಳೆದು ಹೋಗುತ್ತದೆ. ಹಣ ಹಾಗೂ ಸಮಯ ಉಳಿತಾಯದ ಜೊತೆಗೆ ಶೀಘ್ರಗತಿಯಲ್ಲಿ ಪಾಸ್‌ಪೋರ್ಟ್‌ ಕೈ ಸೇರುತ್ತದೆ ಎಂಬ ಕಾರಣಕ್ಕೆ ಚಿಕ್ಕಬಳ್ಳಾಪುರದ ಅಂಚೆ ಕಚೇರಿ ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ವಿವಿಧೆಡೆಗಳಿಂದ ಗ್ರಾಹಕರು ಬರುತ್ತಾರೆ.

Advertisement

ಸರ್ಕಾರಿ ನೌಕರರಿಗೆ ಎನ್‌ಒಸಿ ಇದ್ದರೆ ಸಾಕು: ಪಾಸ್‌ಪೋರ್ಟ್‌ ಪಡೆಯುವ ವಿಚಾರದಲ್ಲಿ ಸರ್ಕಾರಿ ನೌಕರರಿಗೆ ಸುಲಭವಾಗಿ ಪಾಸ್‌ಪೋರ್ಟ್‌ ಕೈಗೆ ಸಿಗಲಿದೆ. ಅರ್ಜಿ ಸಲ್ಲಿಸಿದರೆ ಅವರು ಪೊಲೀಸ್‌ ಇಲಾಖೆಯ ಪರಿಶೀಲನೆ ಇರುವುದಿಲ್ಲ. ಆದರೆ ಕಾರ್ಯ ನಿರ್ವಹಿಸುವ ಇಲಾಖೆಯಿಂದ ಎನ್‌ಒಸಿ ತಂದರೆ 10, 15 ದಿನಗಳಲ್ಲಿ ಪಾಸ್‌ಪೋರ್ಟ್‌ ಅವರ ವಿಳಾಸಕ್ಕೆ ರವಾನೆ ಆಗಲಿದೆ. ಹೀಗಾಗಿ ಸರ್ಕಾರಿ ನೌಕರರು ಪಾಸ್‌ಪೋರ್ಟ್‌ಗಾಗಿ ಹೆಚ್ಚು ಅರ್ಜಿ ಸಲ್ಲಿಸುತ್ತಿದ್ದಾರೆ.

ಗ್ರಾಹಕರು ಭಯ ಪಡುವ ಅಗತ್ಯವಿಲ್ಲ: ಅಂಚೆ ಕಚೇರಿ ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ಬರುವ ಗ್ರಾಹಕರು ಯಾವುದೇ ಭಯ ಪಡುವ ಅಗತ್ಯವಿಲ್ಲ. ನೇರವಾಗಿ ಬಂದು ಮಾಹಿತಿ ಪಡೆಯಬಹುದು. ಕೆಲವೊಮ್ಮೆ ಗ್ರಾಹಕರು ಅಗತ್ಯ ದಾಖಲೆಗಳನ್ನು ಪರಿಶೀಲನೆಗೆ ತಂದಿರುವುದಿಲ್ಲ. ಆದರೂ ನಾವು ತರಲು ಸಂಜೆಯವರೆಗೂ ಅವಕಾಶ ನೀಡಿ ಪಾಸ್‌ಪೋರ್ಟ್‌ ಪಡೆಯಲು ಅನುಕೂಲ ಮಾಡಿದ್ದೇವೆ. 18 ವರ್ಷ ಮೇಲ್ಪಟ್ಟವರಿಗೆ 1,500 ಹಾಗೂ 18 ವರ್ಷ ಕೆಳಗಿನ ಮಕ್ಕಳಿಗೆ 950 ರೂ. ಮಾತ್ರ ಪಾಸ್‌ಪೋರ್ಟ್‌ ಶುಲ್ಕ ಇರುತ್ತದೆ. ಕನಿಷ್ಠ 15 ರಿಂದ 20 ದಿನದಲ್ಲಿ ಪಾಸ್‌ಪೋರ್ಟ್‌ ಬರುತ್ತದೆ ಎಂದು ಪಾಸ್‌ಪೋರ್ಟ್‌ ಅಧಿಕಾರಿ ಪವನ್‌ ಕುಮಾರ್‌ ತಿಳಿಸಿದರು.

ಪಕ್ಕದ ಜಿಲ್ಲೆ, ಹೊರ ರಾಜ್ಯಗಳಿಂದ ಬರುತ್ತಾರೆ..: ಚಿಕ್ಕಬಳ್ಳಾಪುರ ಒಳಗೊಂಡಂತೆ ಜಿಲ್ಲೆಯ ಚಿಂತಾಮಣಿ, ಗುಡಿಬಂಡೆ, ಶಿಡ್ಲಘಟ್ಟ, ಗೌರಿಬಿದನೂರು, ಬಾಗೇಪಲ್ಲಿ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ವಿಜಯಪುರ, ಯಲಹಂಕ, ಪಕ್ಕದ ನೆರೆ ರಾಜ್ಯ ಆಂಧ್ರಪ್ರದೇಶದ ಅನಂತಪುರ, ಕದಿರಿ, ಹಿಂದೂಪುರ, ತುಮಕೂರು ಜಿಲ್ಲೆಯ ಮಧುಗಿರಿ, ಪಾವಗಡ, ಶಿರಾ ಮತ್ತಿತರ ಕಡೆಗಳಿಂದ ಜಿಲ್ಲಾ ಕೇಂದ್ರದಲ್ಲಿರುವ ಅಂಚೆ ಕಚೇರಿ ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ಜನ ಬರುತ್ತಾರೆ.

ದಿನಕ್ಕೆ 50 ಅರ್ಜಿ ಮಿತಿ: ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಗೊಂಡ ಬಳಿಕ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮೊದಲು 30 ರಿಂದ 40 ಅರ್ಜಿ ಮಾತ್ರ ಸ್ವೀಕರಿಸಿ ಪರಿಶೀಲನೆಗೆ ಕರೆಯುತ್ತಿದ್ದೆವು. ಆದರೆ ಬೇಡಿಕೆ ಹೆಚ್ಚಾದಂತೆ ಈಗ ದಿನಕ್ಕೆ ಕೇವಲ 50 ಅರ್ಜಿ ಮಾತ್ರ ಪಡೆದು 50 ಮಂದಿಯನ್ನು ದಾಖಲೆಗಳ ಪರಿಶೀಲನೆಗೆ ಕರೆಸಿಕೊಳ್ಳಲಾಗುತ್ತಿದೆ. ಆದರೂ ಪಾಸ್‌ಪೋರ್ಟ್‌ಗಾಗಿ ಬೇಡಿಕೆ ಹೆಚ್ಚಾಗಿದೆ ಎಂದು ಅಂಚೆ ಕಚೇರಿ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಪಾಸ್‌ಪೋರ್ಟ್‌ ಅಧಿಕಾರಿ ಪವನ್‌ ಕುಮಾರ್‌ ಉದಯವಾಣಿಗೆ ತಿಳಿಸಿದರು.

ಚಿಕ್ಕಬಳ್ಳಾಪುರ ಅಂಚೆ ಕಚೇರಿ ಪಾಸ್‌ಪೋರ್ಟ್‌ ಸೇವಾ ಕೇಂದ್ರದಿಂದ ಜಿಲ್ಲೆಯ ಸುತ್ತಮುತ್ತಲಿನ ತಾಲೂಕುಗಳ ಹಾಗೂ ಜಿಲ್ಲೆಗಳ ಜನರಿಗೆ ಉತ್ತಮ ಸೇವೆ ಸಿಗುತ್ತಿದೆ. ತುಮಕೂರು, ಬೆಂಗಳೂರು, ಕೋಲಾರದಿಂದಲೂ ಕೆಲವರು ನಿತ್ಯ ಪಾಸ್‌ಪೋರ್ಟ್‌ಗಾಗಿ ಇಲ್ಲಿಗೆ ಬಂದು ಅರ್ಜಿ ಹಾಕುತ್ತಾರೆ. ಜಿಲ್ಲೆಯಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಗೊಂಡ ದಿನದಿಂದ ಇಲ್ಲಿಯವರೆಗೂ ಒಟ್ಟು 7,433 ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗಿದೆ.
-ಗುರುಪ್ರಸಾದ್‌, ಪಾಸ್‌ಪೋರ್ಟ್‌ ತನಿಖಾಧಿಕಾರಿ

ಜಿಲ್ಲಾ ಕೇಂದ್ರದಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ತೆರೆದು ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಿದೆ. ಈ ಮೊದಲು ಬೆಂಗಳೂರಿಗೆ ಹೋಗಬೇಕಾದರೆ ಇಡೀ ದಿನ ಸಮಯ ವ್ಯರ್ಥ ಆಗುತ್ತಿತ್ತು. ಈಗ ಒಮ್ಮೆ ಅರ್ಜಿ ಹಾಕಿದರೆ ಅಧಿಕಾರಿಗಳು ಹೇಳುವ ದಿನಕ್ಕೆ ದಾಖಲೆಗಳ ಪರಿಶೀಲನೆಗೆ ಬಂದು ಹೋದರೆ ಸಾಕಷ್ಟು ಮನೆಗೆ ಪಾಸ್‌ಪೋರ್ಟ್‌ ಬರುತ್ತದೆ.
-ಚೇತನ್‌ ಕುಮಾರ್‌, ಗೌರಿಬಿದನೂರು ನಿವಾಸಿ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next