ಬೆಳ್ತಂಗಡಿ: ತಾಲೂಕಿನ ಅಭಿವೃದ್ಧಿಗೆ 100 ಕೋ. ರೂ. ನೀಡುವ ಭರವಸೆ ಮುಖ್ಯಮಂತ್ರಿಗಳಿಂದ ದೊರೆತಿದ್ದು 25 ಕೋ.ರೂ.ಗಳ ಕಾಮಗಾರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದ್ದಾರೆ.
ಅವರು ಬುಧವಾರ ಪುದುವೆಟ್ಟು ಪಂ. ಆವರಣದಲ್ಲಿ ಪುದುವೆಟ್ಟು ಗ್ರಾಮದ ಮೇಲಡ್ಕ- ಸುರಳಿ- ಬೊಳ್ಮನಾರು ಮುರುಬರಿ ರಸ್ತೆಯ 5.30 ಕಿ.ಮೀ. ರಸ್ತೆ ರಚನೆ ಹಾಗೂ ಬೊಳ್ಮನಾರಿನಲ್ಲಿ ನೆರಿಯ ಹೊಳೆಗೆ ಇದೇ ರಸ್ತೆಯಲ್ಲಿ 100 ಮೀ. ಉದ್ದ ಸೇತುವೆಯನ್ನು ಒಟ್ಟು ರೂ. 7.42 ಕೋ.ರೂ. ಕಾಮಗಾರಿ ಯನ್ನು ಉದ್ಘಾಟಿಸಿದರು.
ನಿಗಮದ ಜವಾಬ್ದಾರಿ ನೀಡಿದಾಗ ನಿಗಮ ಬೇಡ, 500 ಕೋ.ರೂ.ಗಳ ಅನುದಾನ ನೀಡಿ. ತಾಲೂಕಿನ ಅಭಿವೃದ್ಧಿ ಮಾಡುತ್ತೇನೆ ಎಂದಿದ್ದೆ. ಆಗ 100 ಕೋ.ರೂ.ಗಳ ಭರವಸೆ ನೀಡಿ ನಿಗಮದ ಅಧ್ಯಕ್ಷತೆ ಒಪ್ಪಿಕೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದರು. ಅದರಂತೆ ಉಳಿಕೆ ಅನುದಾನದ ಕಾಮಗಾರಿಗಳ ಅಂದಾಜುಪಟ್ಟಿ ಕೂಡ ಶೀಘ್ರ ಸಲ್ಲಿಸಲಿದ್ದೇನೆ. ಈ ವರ್ಷ 15 ಕೋ.ರೂ. ವೆಚ್ಚದಲ್ಲಿ 11 ಸೇತುವೆಗಳ ಕಾಮಗಾರಿ ನಡೆದಿದೆ. ಪುದುವೆಟ್ಟಿನಲ್ಲಿ 35 ವರ್ಷಗಳ ಬಳಿಕ ಸೇತುವೆ ಬೇಡಿಕೆ ಈಡೇರಿದಂತಾಗಿದೆ. ಮುಗ್ರೋಡಿ ಕನ್‌ಸ್ಟ್ರಕ್ಷನ್ ಇವರು 1 ವರ್ಷ 6 ತಿಂಗಳ
ದಾಖಲೆ ಅವಧಿಯಲ್ಲಿ ಕಾಮಗಾರಿ ಮಾಡಿ ಮುಗಿಸಿದ್ದಾರೆ ಎಂದರು.ನೆರಿಯ ಪಂಚಾಯತ್ ಅಧ್ಯಕ್ಷೆ ನೀಲಮ್ಮ ಅಧ್ಯಕ್ಷತೆ ವಹಿಸಿದ್ದರು.
ಶಾಸಕರನ್ನು ಊರವರು ಬೆಳ್ಳಿಯ ಕಿರೀಟ ತೊಡಿಸಿ ಸಮ್ಮಾನಿಸಿದರು. ಗುತ್ತಿಗೆದಾರ ಹಾಗೂ ಎಂಜಿನಿಯರ್‌ರನ್ನು ಸಮ್ಮಾನಿಸಲಾಯಿತು.
ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ನಮಿತಾ, ತಾ.ಪಂ. ಸದಸ್ಯ ಸೆಬಾಸ್ಟಿಯನ್, ಧರ್ಮಸ್ಥಳ ಪಂಚಾಯತ್ ಅಧ್ಯಕ್ಷ ಚಂದನ್‌ಪ್ರಸಾದ್ ಕಾಮತ್, ಮಿಯ್ನಾರು ವನದುರ್ಗಾಪರಮೇಶ್ವರೀ ದೇವಸ್ಥಾನದ ಅಧ್ಯಕ್ಷ ರಮೇಶ್ ಪ್ರಭು, ಬೊಳ್ಮನಾರಿನ ಸೈಂಟ್ ಮೆರೀಸ್ ಚರ್ಚ್ ನ ಧರ್ಮ ಗುರು ಫಾ| ಜೋಸ್, ಬೊಳ್ಮನಾರಿನ ಮುಹಿಯುದೀನ್ ಜುಮಾ ಮಸೀದಿ ಧರ್ಮಗುರು ಮೊಹಿದೀನ್ ಜುಹುರಿ, ಎಪಿಎಂಸಿ ನಿರ್ದೇಶಕ ಅಬ್ದುಲ್ ಗಫೂರ್, ಯೋಜನಾ ಉಪವಿಭಾಗ ಮಂಗಳೂರು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಜಯಾನಂದಪೂಜಾರಿ, ಗುತ್ತಿಗೆದಾರ ಸುಧಾಕರ ಶೆಟ್ಟಿ ಮೊಗೆರೋಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರೋಜಿನಿ, ಸದಸ್ಯರಾದ ನಾರಾಯಣ, ಲಿಂಗಪ್ಪ ಸಾಲಿಯಾನ್, ಸುಜಾತಾ, ವಾರಿಜಾ,ಮಂಜುಳಾ, ವಸಂತಿ ಇದ್ದರು.
ಗ್ರಾ.ಪಂ. ಸದಸ್ಯ ಕೆ.ಜೆ. ಜೋಸೆಫ್ ಯಾನೆ ರೋಯಿ ಸ್ವಾಗತಿಸಿ, ಉಪಾಧ್ಯಕ್ಷ ಬೊಮ್ಮಣ್ಣ ಗೌಡ ವಂದಿಸಿದರು. ವಸಂತ ಪುದುವೆಟ್ಟು ಕಾರ್ಯಕ್ರಮ ನಿರ್ವಹಿಸಿದರು.