ನವದೆಹಲಿ : ಜಗತ್ತಿನಲ್ಲಿ ಎಂತೆಂತಹ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹೆ ಮಾಡಲು ಸಾಧ್ಯವಿಲ್ಲ. ತಮ್ಮ ವಯಸ್ಸಿಗೆ ಮೀರಿದ ಕೆಲಸಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಾರೆ. ಅಲ್ಲದೆ ಈ ವಯಸ್ಸಿನಲ್ಲಿ ಇಂತಹ ಕ್ರೇಜ್ ಹೇಗೆ ಹುಟ್ಟಿತು ಎಂದು ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತಾರೆ. ವಯಸ್ಸು ಕೇವಲ ಸಂಖ್ಯೆಗೆ ಮಾತ್ರ ಸೀಮಿತ, ನಾವು ಮಾಡುವ ಕೆಲಸ ಹಾಗೂ ಹವ್ಯಾಸಗಳಿಗೆ ಅಲ್ಲ ಎಂಬುದಕ್ಕೆ ರಷ್ಯಾ ದೇಶದ ಈ ವೃದ್ಧ ಸಾಕ್ಷಿಯಾಗಿದ್ದಾರೆ. ಅರೇ ಆ ತಾತ ಅಂತಹ ಕೆಲಸ ಏನು ಮಾಡಿದ್ದಾರೆ ಅಂದ್ರಾ ಮುಂದೆ ಓದಿ.
ಮನುಷ್ಯನಿಗೆ 60 ವರ್ಷ ಕಳೆದ ಮೇಲೆ ಅರುಳು ಮರುಳು ಅಂತಾರೆ. ಆದ್ರೆ ಕೆಲವು ಮಂದಿ ಮಾತ್ರ 60 ವರ್ಷ ಕಳೆದ ಮೇಲೂ ಸಖತ್ ಆಕ್ಟೀವ್ ಆಗ್ತಾರೆ. ಇದಕ್ಕೆ ಸಾಕ್ಷಿಯಾಗಿದ್ದಾರೆ, ರಷ್ಯಾ ದೇಶದ ವ್ಲಾಡಿಮಿರ್ ಇಲಿಚ್ ಸೆಡಕೋವ್.
ಇವರಿಗೆ ಒಂದು ವಿಚಿತ್ರವಾದ ಆಸೆ ಇದೆ. ಅದೇನೆಂದರೆ ತಮ್ಮ ದೇಹದ ಮೇಲೆ ಟ್ಯಾಟೂಗಳನ್ನು ಬಿಡಿಸಿಕೊಳ್ಳುವುದು. ಈ ತಾತ ಕೂಡ ತಮ್ಮ ದೇಹದ ಮೇಲೆ ಬರೋಬ್ಬರಿ 60 ಟ್ಯಾಟೂಗಳನ್ನು ಹಾಕಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ವ್ಲಾಡಿಮಿರ್ ಇಲಿಚ್ ಸೆಡಕೋವ್ ಅವರಿಗೆ ಸದ್ಯ 74 ವರ್ಷ. ಈ ವಯಸ್ಸಿನಲ್ಲೂ ತುಂಬಾ ಸ್ಟೈಲಿಶ್ ಉಡುಪು ಧರಿಸಿ ನೋಡುಗರನ್ನು ರಂಜಿಸುತ್ತಾರೆ. ಇವರು ಸಾಹಿತಿಯಾಗಿದ್ದು ಕೆಲವು ಪದ್ಯಗಳನ್ನೂ ಬರೆದಿದ್ದಾರಂತೆ. ಅಲ್ಲದೆ ಇವರಿಗೆ ಚಿತ್ರ ಕಲೆಯಲ್ಲೂ ಆಸಕ್ತಿ ಇದ್ದು, ಹಲವಾರು ಚಿತ್ರಗಳನ್ನು ಬಿಡಿಸಿದ್ದಾರೆ.
ಮತ್ತೊಂದು ಇವರ ವಿಶೇಷತೆ ಏನಂದ್ರೆ ಇವರು ತಾವೇ ಚಿತ್ರ ವಿಚಿತ್ರವಾದ ಬಟ್ಟೆಗಳನ್ನು ತಮ್ಮ ಕಯ್ಯಾರ ಹೆಣೆಯುತ್ತಾರೆ. ಆ ಉಡುಪುಗಳನ್ನು ಧರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಇವರು ನೋಡುಗರನ್ನು ಆಕರ್ಷಣೆ ಮಾಡುತ್ತಾರೆ. ಇಷ್ಟೇ ಅಲ್ಲದೆ ಇತ್ತೀಚೆಗೆ ಮೇಕೆಯ ಮೇಲೆ ಕುಳಿತುಕೊಂಡು ಫೋಟೊಕ್ಕೆ ಪೋಸ್ ನೀಡಿರುವ ವ್ಲಾಡಿಮಿರ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ಟ್ಯಾಟೂ ಕ್ರೇಜ್ ಬಗ್ಗೆ ವ್ಲಾಡಿಮಿರ್ ಅವರನ್ನು ಕೇಳಿದರೆ, ಹಚ್ಚೆ(ಟ್ಯಾಟೂ) ಹಾಕಿಸಿಕೊಳ್ಳುವುದರಿಂದ ನನಗೆ ಖುಷಿ ಸಿಗುತ್ತದೆ. ಮತ್ತು ಟ್ಯಾಟೂ ನನಗೆ ಶಕ್ತಿ ನೀಡುತ್ತದೆ. ನನ್ನ ಮೈಮೇಲೆ ಇರುವ 60 ಟ್ಯಾಟೂಗಳು ನನ್ನ ಖುಷಿಯ ಹಿಂದಿರುವ ಗುಟ್ಟು ಎನ್ನುತ್ತಾರೆ. ಇವರು ಮುಂದಿನ ದಿನಗಳಲ್ಲಿ ನನ್ನ ಸಂಪೂರ್ಣ ದೇಹದ ತುಂಬ ಹಚ್ಚೆ ಹಾಕಿಸಿಕೊಳ್ಳುವ ಆಸೆ ಇದೆ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ಯಾಟೂ ತಾತ, ನನ್ನ ಜೀವನದಲ್ಲಿ ಅಹಿತಕರ ಭಾವನೆಯ ವಿರುದ್ಧದ ಹೋರಾಟದಲ್ಲಿ ಟ್ಯಾಟೂ ನನಗೆ ಶಕ್ತಿಯುತ ಸಾಮರ್ಥ್ಯವನ್ನು ನೀಡುತ್ತಿರುವುದರಿಂದ ನನಗೆ ಹಚ್ಚೆ ಬೇಕು. ಇದು ನನಗೆ ಶಕ್ತಿಯನ್ನು ನೀಡುತ್ತದೆ, ಮತ್ತು ಹಿಂದಿನ ನೆನಪುಗಳನ್ನು ಸಹ ತರುತ್ತದೆ ಎಂದಿದ್ದಾರೆ.
ಒಟ್ಟಾರೆ ಹೇಳುವುದಾದರೆ ತಮಗೆ ಇಷ್ಟ ಅನಿಸಿದ್ದನ್ನು ಮಾಡಬೇಕು. ಯಾರೇ ಏನೇ ಹೇಳಿದರೂ ಕೂಡ ನಮ್ಮ ಮನಸ್ಸಿಗೆ ಉಲ್ಲಾಸ ಮತ್ತು ಮುದ ನೀಡುವ ಕೆಲಸವನ್ನು ಮಾಡಬೇಕು. ಏನೇ ಮಾಡಿದರೂ ಕೂಡ ಒಳ್ಳೆಯ ರೀತಿಯಲ್ಲಿ ಮಾಡಬೇಕು ಎಂಬುದನ್ನು ಈ ಟ್ಯಾಟೂ ತಾತ ತಮ್ಮ ವಿಶೇಷ ಆಸಕ್ತಿ ಮೂಲಕ ಜನರಿಗೆ ತೋರಿಸಿಕೊಟ್ಟಿದ್ದಾರೆ.
-ಗಿರೀಶ ಗಂಗನಹಳ್ಳಿ