Advertisement

735 ಸೋಂಕಿತರ ಪತ್ತೆ; ಹಿನ್ನೆಲೆ ನಾಪತ್ತೆ

05:48 AM Jul 02, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಬುಧವಾರ ಒಂದೇ ದಿನ ಮತ್ತೆ 735 ಕೋವಿಡ್‌-19 ಪ್ರಕರಣಗಳು ಪತ್ತೆಯಾಗಿವೆ. ಆದರೆ, ಅವರೆಲ್ಲರ ಸೋಂಕಿನ ಹಿನ್ನೆಲೆ ಮಾತ್ರ ಪತ್ತೆಯಾಗಿಲ್ಲ. ಇದು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ನಿದ್ದೆಗೆಡಿಸಿದೆ! ರಾಜ್ಯದಲ್ಲಿ ಇಡೀ ದಿನ ಒಟ್ಟಾರೆ 1,272 ಪ್ರಕರಣಗಳು  ದಾಖಲಾಗಿದ್ದು, ಅದರಲ್ಲಿ ಸುಮಾರು ಶೇ. 58ರಷ್ಟು ಪ್ರಕರಣಗಳು ಬೆಂಗಳೂರಿನಲ್ಲೇ ಆಗಿವೆ.

Advertisement

ವಿವಿಧೆಡೆ ದೃಢಪಟ್ಟ ಎಲ್ಲ ಸೋಂಕಿತರ ಹಿನ್ನೆಲೆ ಪತ್ತೆಯಾಗಿದೆ. ಆದರೆ, ನಗರದ ಎಲ್ಲ  735 ಪ್ರಕರಣಗಳ ಸೋಂಕಿನ ಮೂಲ ತಿಳಿದುಬಂದಿಲ್ಲ. ಈ ಮಧ್ಯೆ ಕಳೆದ ಮೂರ್‍ನಾಲ್ಕು ದಿನಗಳಿಂದ ಆರೋಗ್ಯ ಇಲಾಖೆ ಬಿಡುಗಡೆ ಮಾಡುವ ಬುಲೆಟಿನ್‌ನಲ್ಲಿ “ಸಂಪರ್ಕ ಹಿನ್ನೆಲೆ’ ಕಾಲಂ ಕಾಣೆಯಾಗಿದೆ. ಈ ಹಿಂದೆ ಯಾವುದೇ ಪ್ರಕರಣ  ದೃಢಪಟ್ಟರೂ ಆ ವ್ಯಕ್ತಿಯ ಸೋಂಕಿಗೆ ಮೂಲವನ್ನು ಉಲ್ಲೇಖೀಸಲಾಗುತ್ತಿತ್ತು.

ಈ ಮಧ್ಯೆ ನಗರದಲ್ಲಿ ಸೋಂಕಿತರ ಸಂಖ್ಯೆ 5,290ಕ್ಕೆ ಏರಿಕೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರಿನ 50 ವರ್ಷದ ಪುರುಷನಿಗೆ ತೀವ್ರ  ಉಸಿರಾಟ ತೊಂದರೆ (ಸಾರಿ), ಜ್ವರ ಲಕ್ಷಣಗಳು ಕಾಣಿಸಿಕೊಂಡಿತ್ತು. ಅಲ್ಲದೆ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದ ಇವರನ್ನು ಜೂನ್‌ 27ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 1ರಂದು ಚಿಕಿತ್ಸೆ ಫ‌ಲಿಸದೆ ಸಾವನ್ನಪ್ಪಿದ್ದಾರೆ.

ಅದೇ ರೀತಿ, ಬೆಂಗಳೂರಿನ 50 ವರ್ಷದ ಮಹಿಳೆ ವಿಷಮ ಶೀತಜ್ವರ (ಐಎಲ್‌ಐ), ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಜೂನ್‌ 29 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಧಿಕ ರಕ್ತದೊತ್ತಡ, ಮಧುಮೇಹ, ಅಸ್ತಮಾ ಸಮಸ್ಯೆ ಎದುರಿಸುತ್ತಿದ್ದ ಮಹಿಳೆ ಜೂ.30ರಂದು ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 97 ಆಗಿದೆ. ಒಟ್ಟಾರೆ ಸೋಂಕಿತ ಪ್ರಕರಣಗಳಲ್ಲಿ 543 ಮಂದಿ ಗುಣಮುಖರಾಗಿದ್ದಾರೆ.

ಮಲ್ಲೇಶ್ವರ ಮಾರುಕಟ್ಟೆ ಲಾಕ್‌ಡೌನ್‌: ಕಾಡು ಮಲ್ಲೇಶ್ವರ ಸುತ್ತಲಿನ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಮಾರುಕಟ್ಟೆಯನ್ನು ಬಂದ್‌ ಮಾಡಿದ್ದಾರೆ.  ಕೆ.ಸಿ. ಜನರಲ್‌ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ಬಟ್ಟೆ, ಆಟಿಕೆ ವಸ್ತುಗಳು, ತರಕಾರಿ, ಹೂವು ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಬೀದಿ ಬದಿ ಮಾರಾಟ ಮಾಡುತ್ತಿದ್ದು, ಸೋಂಕು ಹೆಚ್ಚಳ ಹಿನ್ನೆಲೆ ಈ ಎಲ್ಲ ಅಂಗಡಿಗಳನ್ನು ಜು.  6ರವರೆಗೆ ಬಂದ್‌ ಮಾಡಿದ್ದಾರೆ.

Advertisement

ನಿಮ್ಹಾನ್ಸ್‌ನಲ್ಲಿ 15 ಮಂದಿಗೆ ಸೋಂಕು: ಕೋವಿಡ್‌ 19 ವಾರಿಯರ್ಸ್‌ ಅನ್ನು ತೀವ್ರವಾಗಿ ಕಾಡುತ್ತಿರುವ ಕೋವಿಡ್‌ 19, ನಿಮ್ಹಾನ್ಸ್‌ ವೊಂದರಲ್ಲೇ ಜೂನ್‌ನಲ್ಲಿ 15 ಮಂದಿಗೆ ಸೋಂಕು ತಗುಲಿದೆ. ಮಂಗಳವಾರ ಮತ್ತು ಬುಧವಾರ ತಲಾ  ಒಬ್ಬರು ವೈದ್ಯರು, ಇಬ್ಬರು ನರ್ಸ್‌, ಒಬ್ಬರು ಸ್ವತ್ಛತಾ ಸಿಬ್ಬಂದಿ, ಒಬ್ಬರು ಡಾಟಾ ಎಂಟ್ರಿ ಆಪರೇಟರ್‌ಗೆ ಸೋಂಕು ತಗುಲಿದೆ. ಇವರ ಸಂಪರ್ಕದಲ್ಲಿದ್ದ 30 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ನಿಮ್ಹಾನ್ಸ್‌ ವೈದ್ಯರು ತಿಳಿಸಿದ್ದಾರೆ.  ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ಈಗಿರುವ ವಿಭಾಗಕ್ಕೆ ಹೊಂದಿಕೊಂಡ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ವಾರ್ಡ್‌ವಾರು ಸೋಂಕಿನ ವಿವರ: ಪಾದರಾಯನಪುರ 81, ವಿಶ್ವೇಶ್ವರಪುರ 73, ಧರ್ಮರಾಯ ಸ್ವಾಮಿ ನಗರ 54, ಶಿವಾಜಿನಗರ 52, ಹೊಂಗಸಂದ್ರ 51, ಕೆ.ಆರ್‌. ಮಾರುಕಟ್ಟೆ 36, ಎಸ್‌.ಕೆ. ಗಾರ್ಡನ್‌ 35, ಸಂಪಂಗಿರಾಮ ನಗರ 28,  ಚಾಮರಾಜಪೇಟೆ 25, ಚಲವಾದಿ ಪಾಳ್ಯ 24, ಶಾಂತಲಾ ನಗರ 24, ಚಿಕ್ಕಪೇಟೆ 23, ಸಿದ್ದಾಪುರ 19, ಸಿಂಗಸಂದ್ರ 19, ಮಂಗಮ್ಮನಪಾಳ್ಯ 18, ಜ್ಞಾನಭಾರತಿ ನಗರ 18, ಹೂಡಿ 17, ಗೊಟ್ಟಿಗೆರೆ 16, ಕೆಂಗೇರಿ 15, ಕುಮಾರಸ್ವಾಮಿ ಲೇಔಟ್‌ 15  ಸೋಂಕಿತರು ದೃಢಪಟ್ಟಿದ್ದಾರೆ.

ಬಿಎಂಟಿಸಿ; ಒಂದು ಪ್ರಕರಣ: ಬಿಎಂಟಿಸಿಯಲ್ಲಿ ಮತ್ತೂಂದು ಸೋಂಕು ಪ್ರಕರಣ ಪತ್ತೆಯಾಗಿದ್ದು, ಕೆಂಗೇರಿ (ಡಿಪೋ 37) ಘಟಕದಲ್ಲಿ ನಿರ್ವಾಹಕರೊಬ್ಬರಲ್ಲಿ ವೈರಸ್‌ ಕಾಣಿಸಿಕೊಂಡಿದೆ. ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರು, ಖಾಸಗಿ ಆಸ್ಪತ್ರೆಯಲ್ಲಿ ಈಚೆಗೆ ಪರೀಕ್ಷೆಗೊಳಗಾಗಿದ್ದರು. ಮಂಗಳವಾರ ಸಂಜೆ ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಬಸ್‌  ಚಾಲಕ ಸೇರಿದಂತೆ ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಟಪಾಲು ಕೇಂದ್ರ ಅನಾಥ: ಸೋಂಕು ಹಬ್ಬುವುದನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿಗೆ ಸಾರ್ವಜನಿಕರು ಬರುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಬಿಬಿಎಂಪಿಯ ಕೇಂದ್ರ ಕಚೇರಿಯ  ಮುಖ್ಯ ದ್ವಾರದಲ್ಲಿ ಇರಿಸಲಾಗಿದ್ದ ಟಪಾಲು ಕೇಂದ್ರ ಅಕ್ಷರಶಃ ಅನಾಥವಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿ ಬರುವ ಜನರನ್ನು ಒಳಗೆ ಬಿಡದೆ ಮುಖ್ಯ ದ್ವಾರದಲ್ಲೇ ಅರ್ಜಿ ಪಡೆದು ಇದನ್ನು ಇತ್ಯತ್ಯಾರ್ಥ ಮಾಡುವ ಉದ್ದೇಶದಿಂದ  ಟಪಾಲು ಕೇಂದ್ರವನ್ನು ಕಳೆದ ಎರಡು ದಿನಗಳ ಹಿಂದಷ್ಟೇ ಬಿಬಿಎಂಪಿ ಪ್ರಾರಂಭಿಸಿತ್ತು.

ಆದರೆ, ಈ ಟಪಾಲು ಕೇಂದ್ರದಲ್ಲಿ ಯಾವುದೇ ಸಿಬ್ಬಂದಿ ಇಲ್ಲ. ನಿತ್ಯ ಬಿಬಿಎಂಪಿ ಕೇಂದ್ರ ಕಚೇರಿಗೆ ಬರುವ ಜನರು ನೇರವಾಗಿ ಕೇಂದ್ರ ಕಚೇರಿಯನ್ನು  ಪ್ರವೇಶಿಸುತ್ತಿದ್ದಾರೆ. ಮಂಗಳವಾರ ವಷ್ಟೇ ವಿಶೇಷ ಆಯುಕ್ತ ರಂದೀಪ್‌ ಅವರ ಸಹಾಯಕ ಸಿಬ್ಬಂದಿ ಹಾಗೂ ಆರೋಗ್ಯ ವಿಭಾಗದ ಸಿಬ್ಬಂದಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಪಾಲಿಕೆಯ ಅಧಿಕಾರಿ  ವಲಯದಲ್ಲೂ ಸೋಂಕು ಭೀತಿ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next