ದೇವನಹಳ್ಳಿ: ಕೇಂದ್ರ ಸರ್ಕಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷೆಯ ಕಿಸಾನ್ ಸಮ್ಮಾನ್ ಯೋಜನೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ 7,334 ರೈತರು ಅರ್ಜಿಗಳನ್ನು ನೋಂದಣಿ ಮಾಡಿಸಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳು ದಾಖಲೆಗಳನ್ನು ಸಂಗ್ರಹಿಸಲು ರೈತರು ಬಿಸಿಲಿನ ಬೇಗೆಯಲ್ಲೂ ಸರದಿ ಸಾಲಿನಲ್ಲಿ ನಿಂತು ದಾಖಲೆಗಳ ಕ್ರೂಢೀಕರಣಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ, ಕಚೇರಿ ಸಿಬ್ಬಂದಿ ದಾಖಲೆಗಳನ್ನು ನೀಡಲು ಹರಸಾಹಸ ಪಡುತ್ತಿದ್ದಾರೆ.
ಐದು ಹೆಕ್ಟೇರ್ ಕೃಷಿ ಭೂಮಿ ಹೊಂದಿರುವ ರೈತ ಫನಾನುಭವಿಗಳಿಗೆ 6 ಸಾವಿರ ರೂ.ಅನ್ನು ಮೂರು ಕಂತುಗಳಲ್ಲಿ ಸಮಾನವಾಗಿ ಪಾವತಿಸಲಾಗುವುದು. ಈ ಸಂಬಂಧ ಅರ್ಜಿ ಸಲ್ಲಿಸುವಂತೆ ಕೃಷಿ ಇಲಾಖಾಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ ಅರ್ಜಿ ಸಲ್ಲಿಸಲು ರೈತರು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ 1.20 ರೈತರಿದ್ದಾರೆ. ಅದರಲ್ಲಿ 7,334 ರೈತರು ಅರ್ಜಿಗಳನ್ನು ಆನ್‌ಲೆ„ನ್ ಮೂಲಕ ನೋಂದಣಿ ಮಾಡಿಸಿದ್ದಾರೆ.
ಕೆಲಸ ಬಿಟ್ಟು ನಿಲ್ಲಬೇಕು: ಕಿಸಾನ್ ಸಮ್ಮಾನ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೆ, ನಾಡಕಚೇರಿ ಮತ್ತು ಅಟಲ್ ಜನಸ್ನೇಹಿ ಕೇಂದ್ರಗಳ ಮುಂದೆ ದಾಖಲೆಗಳನ್ನು ತೆಗೆದುಕೊಳ್ಳಲು ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಇದೆ. ಕೆಲವು ಗ್ರಾಪಂಗಳಲ್ಲಿ ಅಂತರ್ಜಾಲ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಒಂದು ಅರ್ಜಿ ಅಪ್‌ಲೋಡ್ ಆಗಬೇಕಾದರೆ ಕನಿಷ್ಠ ಪಕ್ಷ 15 ನಿಮಿಷ ಕಾಯಬೇಕಾಗುತ್ತದೆ.
ಅಂತರ್ಜಾಲದಲ್ಲಿ ಅಪ್‌ಲೋಡ್ ಸಮಯದಲ್ಲಿ ಪ್ರಕ್ರಿಯೆ ಕೊಂಡಿ ಸುತ್ತುತ್ತಿರುತ್ತದೆ. ಇದರಿಂದ ಸಮಯ ವ್ಯರ್ಥವಾಗುತ್ತಿದೆ. ಇತರೆ ಕೆಲಸ ಕಾರ್ಯಗಳನ್ನು ಬಿಟ್ಟು ನಿಲ್ಲುವಂತೆ ಆಗಿದೆ ಎಂದು ರೈತ ಮುನಿನಾರಾಯಣಪ್ಪ ಹೇಳುತ್ತಾರೆ. ತಾಲೂಕಿನಾದ್ಯಂತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಪಡೆದುಕೊಳ್ಳಬೇಕು. ಈ ಕುರಿತು ಜಾಗೃತಿ ಮೂಡಿಸುವ ಕಾರ್ಯ ಇಲಾಖೆ ವತಿಯಿಂದ ಮಾಡಲಾಗುತ್ತಿದೆ.
ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಎಂ.ಎನ್.ಮಂಜುಳಾ ಹೇಳಿದರು. ಇಡೀ ರಾಜ್ಯದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಜಿಲ್ಲೆ 8ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿರುವ ರೈತ ಸಂಪರ್ಕ ಕೇಂದ್ರ, ಅಟಲ್‌ಜೀ ಜನಸ್ನೇಹಿ, ಬಾಪೂಜಿ ಸೇವಾ ಕೇಂದ್ರ ಸೇರಿದಂತೆ ಹಲವಾರು ಕಡೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಹೆಚ್ಚಿನ ಡಾಟಾ ಎಂಟ್ರಿ ಆಪರೇಟರ್ಗಳ ಅವಶ್ಯಕತೆ ಇದೆ. ಹೊಸ ರೈತರಿಗೆ ಡಾಟಾ ಸಿಗುತ್ತಿಲ್ಲ. ಭೂಮಿ ಪೋರ್ಟಲ್‌ನಿಂದ ರೈತರ ಡಾಟಾ ಸಿಕ್ಕಿದರೆ ಕೆಲಸ ಸುಲಭವಾಗುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
* ಎಸ್.ಮಹೇಶ್