Advertisement

ಮಂಗಳೂರು ಪಾಲಿಕೆಗೆ 725 ಕೋ.ರೂ. ಸಾಲದ ಹೊರೆ !

09:08 PM Sep 23, 2020 | mahesh |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆಯು ದೊಡ್ಡ ಮೊತ್ತದ ಸಾಲದ ಸುಳಿಗೆ ಸಿಲುಕಿ ಆರ್ಥಿಕ ದಿವಾಳಿತನದ ಭೀತಿ ಎದುರುಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಏಕೆಂದರೆ, ಪಾಲಿಕೆಯು 11 ವರ್ಷಗಳ ಹಿಂದೆ ಏಷಿ ಯನ್‌ ಡೆವಲಪ್‌ಮೆಂಟಲ್‌ ಬ್ಯಾಂಕ್‌(ಎಡಿಬಿ)ನಿಂದ 380 ಕೋಟಿ ರೂ. ಸಾಲ ಪಡೆದುಕೊಂಡು ಇಲ್ಲಿವರೆಗೆ ಒಂದು ಕಂತು ಕೂಡ ಮರುಪಾವತಿಸದ ಕಾರಣ ಅದು ಈಗ ಬರೋಬರಿ 725 ಕೋಟಿ ರೂ.ಗಳಿಗೇರಿದೆ.

Advertisement

ಪಾಲಿಕೆಯು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದುಕೊಂಡು ಅದನ್ನು ಮರುಪಾವತಿಸುವುದಕ್ಕೆ ಸೂಕ್ತ ಸಂಪನ್ಮೂಲ ಕ್ರೋಡೀಕರಣವಾಗದೆ ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುರಿತ ದಾಖಲಾತಿ “ಉದಯವಾಣಿ’ಗೆ ಲಭ್ಯವಾಗಿದ್ದು, ಆ ಪ್ರಕಾರ 2009ರಲ್ಲಿ ಎಡಿಬಿ ಮೊದಲ ಹಂತದ ಕಾಮ ಗಾರಿಗೆಂದು ಪಡೆದುಕೊಂಡಿರುವ ಸಾಲಕ್ಕೆ ಪ್ರತಿಯಾಗಿ ಬಡ್ಡಿ ಒಳಗೊಂಡಂತೆ ಯಾವುದೇ ಹಣ ಮರುಪಾವತಿ ಆಗದಿರುವ ಅಂಶ ಬಹಿರಂಗಗೊಂಡಿದೆ.

ಪಾಲಿಕೆಯು ಒಳಚರಂಡಿ, ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಏಷ್ಯನ್‌ ಡೆವೆಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ) ನಿಂದ 380.22 ಕೋ.ರೂ. ಸಾಲ ಪಡೆದು ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ರಾಜ್ಯ ಸರಕಾರದ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತವು (ಕೆಯುಎಡಿಎಫ್‌ಸಿ) ಈ ಸಾಲಕ್ಕೆ ಜಾಮೀನುದಾರ. ವರ್ಷದಲ್ಲಿ ಎರಡು ಬಾರಿ (6 ತಿಂಗಳಿಗೊಮ್ಮೆ) ಈ ಸಾಲದ ಅಸಲು, ಬಡ್ಡಿಯನ್ನು ಮಂಗಳೂರು ಪಾಲಿಕೆ ಪಾವತಿಸಬೇಕಾಗಿದ್ದು, 2026ರೊಳಗೆ ಪೂರ್ಣವಾಗಿ ಮರುಪಾವತಿಸಬೇಕಾಗಿತ್ತು. ಆದರೆ ಇಲ್ಲಿಯವರೆಗೂ ಪಾಲಿಕೆಯು ಒಂದು ರೂ. ಕೂಡ ಪಾವತಿಸಲೇ ಇಲ್ಲ!

ಎಡಿಬಿ ಮೊದಲ ಹಂತದ ಯೋಜನೆಗಾಗಿ ಪಾಲಿಕೆಯು 380.22 ಕೋ.ರೂ. ಸಾಲ ಪಡೆದಿತ್ತು. ಅಸಲು-ಬಡ್ಡಿ ಪಾವತಿ ಮಾಡದ ಹಿನ್ನೆಲೆಯಲ್ಲಿ ಈ ಮೊತ್ತ ಇದೀಗ 725.95 ಕೋ.ರೂ.ಗೆ ಏರಿಕೆಯಾಗಿದೆ. ಅಂದರೆ, 345.73 ಕೋ.ರೂ.ಗಳನ್ನು ಪಾಲಿಕೆ ಹೆಚ್ಚುವರಿಯಾಗಿ ಪಾವತಿಸಬೇಕು. ಜತೆಗೆ ತಡವಾಗಿ ಪಾವತಿಸುವುದರಿಂದ ಶೇ.2.5ರಷ್ಟು ದಂಡ ಪಾವತಿಸಬೇಕಾಗಿದೆ.

ಹಾಲಿ-ಮಾಜಿ ಶಾಸಕರು ಏನೆನ್ನುತ್ತಾರೆ?
ಶಾಸಕ ವೇದವ್ಯಾಸ ಕಾಮತ್‌ ಅವರ ಪ್ರಕಾರ, ಪಾಲಿಕೆಯಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದ್ದ ಕಾಲದಲ್ಲಿ ಎಡಿಬಿ ಮೊದಲ ಹಂತದ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಅದೇವೇಳೆ ಸಾಲವನ್ನೂ ಪಡೆಯಲಾಗಿತ್ತು. ಬಳಿಕ ಕಾಂಗ್ರೆಸ್‌ ಆಡಳಿತವಿದ್ದರೂ ಸಾಲ ಮರುಪಾವತಿ ಬಗ್ಗೆ ಯಾವುದೇ ಕ್ರಮ ಕೈಗೊಂಡಿ ರಲಿಲ್ಲ. ಜತೆಗೆ, ಎಡಿಬಿ ಮೊದಲ ಯೋಜನೆಯನ್ನು ಅಸಮರ್ಪಕವಾಗಿ ಮಾಡಲಾಗಿತ್ತು. ಇದೀಗ ಪಾಲಿಕೆಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿದ್ದು, ಸರಕಾರದ ಜತೆಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Advertisement

ಮಾಜಿ ಶಾಸಕ ಜೆ.ಆರ್‌. ಲೋಬೋ ಪ್ರಕಾರ, ಮಂಗಳೂರಿನ ಅಭಿವೃದ್ಧಿಗಾಗಿ ಎಡಿಬಿ ಮೊದಲ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳಿಗೂ ಸಾಲ ನೀಡಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಅದರ ಕಾಮಗಾರಿ ಪೂರ್ಣವಾಗಿರಲಿಲ್ಲ. ಅಪೂರ್ಣ ಎಂದು ನಿರ್ಧರಿಸಿ, 2ನೇ ಹಂತದಲ್ಲಿ ಕಾಮಗಾರಿ ಮತ್ತೆ ನಡೆಸಲು ಅನುಮೋದನೆ ಪಡೆಯಲು ನಿರ್ಧರಿಸಲಾಯಿತು. ಹೀಗಾಗಿ 2ನೇ ಹಂತದ ಯೋಜನೆ ಸಾಕಾರವಾಗುವ ವೇಳೆಯಲ್ಲಿ ಸಾಲ ಮರುಪಾವತಿ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದಿದ್ದಾರೆ.

ಮುಂದೇನು?
ಎಡಿಬಿ ಸಾಲಕ್ಕೆ ಸರಕಾರವೇ ಆಧಾರ ಇರುವ ಕಾರಣದಿಂದ ಸ್ಥಳೀಯ ಸಂಸ್ಥೆಗಳು ಸಾಲ ಮರುಪಾವತಿ ಮಾಡುವ ಬಗ್ಗೆ ಹೆಚ್ಚು ಆದ್ಯತೆ ನೀಡಿದಂತಿಲ್ಲ. ಈಗಾಗಲೇ ಕೆಯುಎಡಿಎಫ್‌ಸಿ ಪಾಲಿಕೆಗೆ ಹಲವು ಡಿಮಾಂಡ್‌ ನೋಟಿಸ್‌ ನೀಡಿದೆ. ಕನಿಷ್ಠ ಅಸಲು ಆದರೂ ಪಾವತಿಸುವಂತೆ
ಅನೌಪಚಾರಿಕ ಮಾತುಕತೆಯೂ ಒಂದೊಮ್ಮೆ ನಡೆದಿತ್ತು. ಆದರೆ ಮರುಪಾವತಿ ಮಾತ್ರ ಆಗಲೇ ಇಲ್ಲ. ಮುಂದೆ, ಪಾಲಿಕೆ ಅಥವಾ ಸರಕಾರ ಸಾಲವನ್ನು ಭರಿಸಲೇಬೇಕು. ಒಂದು ವೇಳೆ ಪಾಲಿಕೆಯ ಬದಲು ಸರಕಾರವೇ ಭರಿಸುವುದಾದರೆ ಮುಂಬರುವ ದಿನಗಳಲ್ಲಿ ಸರಕಾರದಿಂದ ಪಾಲಿಕೆಗೆ ಬರುವ ಅನುದಾನ ಕಡಿತವಾಗುವ ಸಾಧ್ಯತೆಯಿದೆ.

ಎಡಿಬಿ 2ನೇ ಹಂತದ ಯೋಜನೆಗೆ 859 ಕೋ.ರೂ.!
ಎಡಿಬಿ 1ನೇ ಯೋಜನೆಯ ಸಾಲ ಬಾಕಿ ಇರುವಾಗಲೇ ಇದೀಗ ಎರಡನೇ ಹಂತದ ಎಡಿಬಿ ಕಾಮಗಾರಿ ಮಂಗಳೂರಿನಲ್ಲಿ ಆರಂಭವಾಗಿದೆ. ಇದರಲ್ಲಿ 587 ಕೋ.ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯಿದ್ದು, ಈ ಪೈಕಿ 187 ಕೋ.ರೂ. ಎಡಿಬಿ ಸಾಲ ನೀಡಲಿದೆ. ಉಳಿದ ಹಣ ಸ್ಮಾರ್ಟ್‌ಸಿಟಿ, ಸರಕಾರದ ವಿವಿಧ ಮೂಲಗಳಿಂದ ದೊರೆಯಲಿವೆ. 272 ಕೋ.ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಗೆ ಉದ್ದೇಶಿಸಲಾಗಿದ್ದು, ಇದರಲ್ಲಿ 93 ಕೋ.ರೂ. ಎಡಿಬಿ ಸಾಲ, ಉಳಿದ 179 ಕೋ.ರೂ. ಅಮೃತ್‌ ಯೋಜನೆಯ ಅನುದಾನ.

ಸರಕಾರದ ಜತೆಗೆ ಚರ್ಚಿಸಿ ಕ್ರಮ
ಎಡಿಬಿ ಮೊದಲ ಹಂತದ ಯೋಜನೆಯು ಅಸಮರ್ಪಕವಾಗಿರುವ ಕಾರಣದಿಂದ ಎರಡನೇ ಹಂತದ ಕಾಮಗಾರಿಯನ್ನು ಇದೀಗ ಮಂಗಳೂರು ವ್ಯಾಪ್ತಿಯಲ್ಲಿ ಆರಂಭಿಸಲಾಗುತ್ತಿದೆ. ಎಡಿಬಿ ಮೊದಲ ಹಂತದ ಯೋಜನೆಯ ಸಾಲ ಮರುಪಾವತಿ ಪಾಲಿಕೆಯಿಂದ ಆಗದಿರುವ ಬಗ್ಗೆ ಸರಕಾರದ ಜತೆಗೆ ಮಾತುಕತೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು
-ದಿವಾಕರ ಪಾಂಡೇಶ್ವರ,  ಮೇಯರ್‌,  ಮಂಗಳೂರು ಮಹಾನಗರ ಪಾಲಿಕೆ ,

Advertisement

Udayavani is now on Telegram. Click here to join our channel and stay updated with the latest news.

Next