Advertisement

National Awards: ಅತ್ಯುತ್ತಮ ನಟ ಪ್ರಶಸ್ತಿ ಪಡೆದ ರಿಷಬ್‌ ಶೆಟ್ಟಿ; 2 ಪ್ರಶಸ್ತಿ ಪಡೆದ KGF2

03:09 PM Aug 16, 2024 | Team Udayavani |

ಹೊಸದಿಲ್ಲಿ: ದೇಶದ ಚಲನಚಿತ್ರ ರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು (70th National Film Awards) ಶುಕ್ರವಾರ (ಆ.16) ಘೋಷಿಸಲಾಗಿದೆ. ದೇಶದಾದ್ಯಂತ ಅತ್ಯುತ್ತಮ ಚಲನಚಿತ್ರ ನಿರ್ಮಾಣ ಪ್ರತಿಭೆಗಳನ್ನು ಗೌರವಿಸಲು ವಾರ್ಷಿಕವಾಗಿ ಘೋಷಿಸಲಾಗುತ್ತದೆ.

Advertisement

ಇದೀಗ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಿಸಲಾಗಿದೆ. ಭಾರತೀಯ ಚಲನಚಿತ್ರ ರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ಕನ್ನಡ ಚಿತ್ರ ಕಾಂತಾರ ಚಿತ್ರಕ್ಕಾಗಿ ನಟ ರಿಷಬ್ ಶೆಟ್ಟಿ (Rishab Shetty) ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.

ಅಲ್ಲದೆ ಕಾಂತಾರ ಚಿತ್ರಕ್ಕೆ ಸಂಪೂರ್ಣ ಮನರಂಜನೆ ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಗಿದೆ.

ಕನ್ನಡದ ಮತ್ತೊಂದು ರೆಕಾರ್ಡ್‌ ಬ್ರೇಕಿಂಗ್‌ ಸಿನಿಮಾ ಕೆಜಿಎಫ್‌ 2 (KGF-2) ಚಿತ್ರವು ಎರಡು ವಿಭಾಗದಲ್ಲಿ ಪ್ರಶಸ್ತಿ ಬಾಚಿದೆ. ಕೆಜಿಎಫ್ ಅಧ್ಯಾಯ 2 ಅತ್ಯುತ್ತಮ ಕನ್ನಡ ಚಲನಚಿತ್ರ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಅದೇ ಚಿತ್ರವು ಅತ್ಯುತ್ತಮ ಸ್ಟಂಟ್ ಕೊರಿಯೋಗ್ರಫಿ ಪ್ರಶಸ್ತಿಯನ್ನು ಸಹ ಪಡೆದಿದೆ.

Advertisement

ಅತ್ಯುತ್ತಮ ಚೊಚ್ಚಲ ನಿರ್ದೇಶನದ ಚಿತ್ರ ಪ್ರಶಸ್ತಿಯನ್ನು ʼಮಧ್ಯಂತರʼ ಬಾಚಿಕೊಂಡಿದೆ. ಬಸ್ತಿ ದಿನೇಶ್‌ ಶೆಣೈ ಅವರು ಇದರ ನಿರ್ದೇಶಕರು.

ಅತ್ಯುತ್ತಮ ತೆಲುಗು ಚಿತ್ರ ಪ್ರಶಸ್ತಿಯು ಕಾರ್ತಿಕೇಯ-2 ಪಾಲಾಗಿದ್ದರೆ, ಅತ್ಯುತ್ತಮ ತಮಿಳು ಚಿತ್ರ ಪ್ರಶಸ್ತಿ ಪೊನ್ನಿಯನ್‌ ಸೆಲ್ವನ್‌ -2 ಚಿತ್ರದ ಪಾಲಾಗಿದೆ. ಶರ್ಮಿಳಾ ಟ್ಯಾಗೋರ್ ಅವರ ಗುಲ್ಮೊಹರ್ ಅತ್ಯುತ್ತಮ ಹಿಂದಿ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದೆ.

ಈ ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಇಬ್ಬರು ಪಡೆದುಕೊಂಡಿದ್ದಾರೆ. ತಮಿಳು ಚಿತ್ರ ತಿರುಚಿತ್ರಾಂಬಲಂಗಾಗಿ ನಿತ್ಯಾ ಮೆನೆನ್ ಮತ್ತು ಕಚ್ ಎಕ್ಸ್‌ಪ್ರೆಸ್‌ ಗಾಗಿ ಮಾನಸಿ ಪರೇಖ್ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.

ಬ್ರಹ್ಮಾಸ್ತ್ರ ಚಿತ್ರಕ್ಕಾಗಿ ಪ್ರೀತಮ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು. ಪೊನ್ನಿಯಿನ್ ಸೆಲ್ವನ್ 2 ಗಾಗಿ ಎಆರ್ ರೆಹಮಾನ್ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿ ಪಡೆದರು. ಆನಂದ್ ಕೃಷ್ಣಮೂರ್ತಿ ಅವರು ಪೊನ್ನಿಯಿನ್ ಸೆಲ್ವನ್ ಗಾಗಿ ಅತ್ಯುತ್ತಮ ಧ್ವನಿ ವಿನ್ಯಾಸ ಪ್ರಶಸ್ತಿ ಪಡೆದರು.

ಬ್ರಹ್ಮಾಸ್ತ್ರಕ್ಕಾಗಿ ಅರಿಜಿತ್ ಸಿಂಗ್ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಪಡೆದರು. ಉಂಚೈ ಚಿತ್ರಕ್ಕಾಗಿ ಸೂರಜ್ ಆರ್ ಬರ್ಜತ್ಯಾ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next