ಮಡಿಕೇರಿ : ಕಳೆದ ವಾರ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಸುಮಾರು 700 ಕೋಟಿ ರೂ. ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಕೋಟೆ ಆವರಣದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಾಜಾರೋಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುರಿದ = ಮಳೆಗೆ ಸಾಕಷ್ಟು ಹಾನಿ ಸಂಭವಿಸಿದ್ದು, ಪ್ರಾಥಮಿಕವಾಗಿ ಸುಮಾರು 700 ಕೋಟಿ ರೂ. ನಷ್ಟದ ಅಂದಾಜು ಮಾಡಲಾಗಿದೆ. ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು. ಅಲ್ಲದೆ ಮುಂದಿನ ದಿನಗಳಲ್ಲಿ ವಿಸ್ತತವಾದ ವರದಿ ತಯಾರಿಸಲಾಗುವುದು ಎಂದರು.
ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ, ಕಾಫಿ ಮಂಡಳಿಯ ಅಧಿಕಾರಿ, ಸಿಬ್ಬಂದಿಗಳು ಈಗಾಗಲೇ ಕೃಷಿ ಫಸಲು ನಷ್ಟದ ಬಗ್ಗೆ ಜಂಟಿ ಸರ್ವೆ ಕೈಗೊಂಡಿದ್ದು ಶೀಘ್ರದಲ್ಲಿಯೇ ಪ್ರವಾಹ, ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿರಬಹುದಾದ ನಷ್ಟದ ಅಂದಾಜು ತಯಾರಿಸಿ ಸರ್ಕಾರಕ್ಕೆ ರವಾನಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರಲ್ಲದೆ, ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಸಂತ್ರಸ್ತರಿಗೆ ಪರಿಹಾರ ನೀಡಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ನುಡಿದರು.
ಅತಿವೃಷ್ಟಿ ಸಂದರ್ಭದಲ್ಲಿ ರಕ್ಷಣಾ ಪಡೆ, ಎನ್‌ಡಿಆರ್‌ಎಫ್, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವಗಳ ವಿಭಾಗ, ಗೃಹ ರಕ್ಷಕ ದಳ ಹೀಗೆ ಹಲವು ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡು ಸುಮಾರು 4 ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿರುವುದಾಗಿ ನುಡಿದ ಅವರು, ಸದ್ಯ ನಿರಾ]ತರಾದವರಿಗೆ ಪ್ರಥಮ ಆದ್ಯತೆಯಲ್ಲಿ ಪುರ್ನವಸತಿ ಕಲ್ಪಿಸಬೇಕಿದ್ದು, ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ತೋರ ಗ್ರಾಮದಲ್ಲಿ ಎನ್‌ಡಿಆರ್‌ಎಫ್ ತಂಡದಿಂದ ಕಾರ್ಯಾಚರಣೆ ಮುಂದುವರೆದಿದೆ ಎಂದು ಸ್ಪಷ್ಟಪಡಿಸಿದ ಅವರು, ಜಿಲ್ಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ನಿರ್ವಹಿಸಲ್ಪಡುತ್ತಿರುವ 41 ಪರಿಹಾರ ಕೇಂದ್ರಗಳಲ್ಲಿನ 2 ಸಾವಿರ ಕುಟುಂಬಗಳ ಸುಮಾರು 7 ಸಾವಿರ ಮಂದಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ರೀತಿಯ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಪರಿಹಾರ ಕೇಂದ್ರಗಳಲ್ಲಿನ ನಿರಾತರಿಗೆ ಅಗತ್ಯವಿರುವ ಹೊದಿಕೆ, ಬಟ್ಟೆ ಸೇರಿದಂತೆ ಮೂಲಸೌಕರ್ಯಗಳನ್ನು ಈಗಾಗಲೇ ಜಿಲ್ಲಾಡಳಿತದಿಂದ ನೀಡಲಾಗಿದೆ. ಪ್ರತಿ ಪರಿಹಾರ ಕೇಂದ್ರಗಳಲ್ಲಿಯೂ ನೋಡಲ್ ಅಧಿಕಾರಿ ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಪ್ರಸ್ತುತ ಬಹುತೇಕ ಕೇಂದ್ರಗಳು ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆ.16 ರಂದು ಶಾಲೆಗಳು ಪುನರಾರಂಭವಾಗಲಿವೆ. ಆ ಸಂದರ್ಭ ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರ ಸಂಖ್ಯೆಯನ್ನು ಗಮನಿಸಿ ಅನಂತರ ಅಂತಹ ಶಾಲೆಗಳಲ್ಲಿ ತರಗತಿ ಗಳನ್ನು ಯಾವ ರೀತಿ ನಡೆಸ ಬೇಕೆಂದು ತೀರ್ಮಾನಿಸಲಾಗುತ್ತದೆ ಎಂದರು