ಶ್ರೀನಗರ : ಉಗ್ರರ ಉಪಟಳದಿಂದ ಕಂಗೆಟ್ಟಿರುವ ಕಾಶ್ಮೀರ ಕಣಿವೆಯ ಕೆಲವೆಡೆ ಮಹಿಳೆಯರ ಜಡೆ ಕತ್ತರಿಸುವಂತ ವಿಕೃತ ಚಟುವಟಿಕೆ ಕಳೆದ ಕೆಲ ದಿನಗಳಿಂದ ವರದಿಯಾಗುತ್ತಿದ್ದು ಭದ್ರತಾ ವ್ಯವಸ್ಥೆಗೆ ಹೊಸ ಸವಾಲಾಗಿ ಪರಿಣಮಿಸಿದೆ. ಜಡೆ ಕತ್ತರಿಸುವ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂಬ ಶಂಕೆಯಲ್ಲಿ 70 ವರ್ಷ ಪ್ರಾಯದ ವೃದ್ಧನೊಬ್ಬನನ್ನು ಯುವಕನೊಬ್ಬ ಕಲ್ಲು ಹೊಡೆದು ಸಾಯಿಸಿದ ಬಗ್ಗೆ ವರದಿಯಾಗಿದೆ.
ಅನಂತ್‌ನಾಗ್‌ನ ದಾಂತೇರ್ ಎಂಬಲ್ಲಿ ಘಟನೆ ನಡೆದಿದ್ದು, ಅಬ್‌ದುಲ್ ಸಲಾಮ್ ವಾನಿ ಎಂಬ ವೃದ್ಧನನ್ನು ಮಸೀದಿಯಿಂದ ಪ್ರಾರ್ಥನೆ ಮುಗಿಸಿ ಬರುತ್ತಿದ್ದಂತೆ ಯುವಕನೊಬ್ಬ ಕಲ್ಲು ಹೊಡೆದು ಕೊಲೆಗೈದಿದ್ದಾನೆ ಎಂದು ವರದಿಯಾಗಿದೆ.
ವಾನಿ ಆಸ್ಪತ್ರೆಗೆ ಸಾಗಿಸುವಾಗಲೇ ಸಾವನ್ನಪ್ಪಿದ್ದು, ಈತನೇ ಜಡೆ ಕತ್ತರಿಸುವ ಎನ್ನುವ ಶಂಕೆಯಲ್ಲಿ ಹತ್ಯೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಅನಂತ್‌ನಾಗ್‌ನ ಪೊಲೀಸರು ನಮಗೆ ಈ ಬಗ್ಗೆ ತಿಳಿದಿಲ್ಲ, ಯಾವುದೇ ದೂರು ಬಂದಿಲ್ಲ ಎಂದಿದ್ದಾರೆ.
2 ದಿನಗಳ ಹಿಂದೆ ಲಿಂಗ ಪರಿವರ್ತನೆ ಮಾಡಿಕೊಂಡು ಮಹಿಳೆಯರಂತೆ ವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದರು. ಪೊಲೀಸರು ಆತನನ್ನು ರಕ್ಷಿಸಿದ್ದರು.
ನಿಶಾತ್ ಪ್ರದೇಶದಲ್ಲೂ ಇದೇ ಶಂಕೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಥಳಿಸಲಾಗಿತ್ತು. ಅವರನ್ನೂ ಪೊಲೀಸರು ರಕ್ಷಿಸಿದ್ದರು. ಇದೇ ರೀತಿ ಹಲವೆಡೆ ಜನರು ಅಪರಿಚಿತರನ್ನು ಥಳಿಸಿರುವ ಬಗ್ಗೆ ವರದಿಯಾಗಿದೆ.
ವಿಜಿಲೆಂಟ್ ಗುಂಪು ಈ ಬಗ್ಗೆ ಶೋಧಕ್ಕಿಳಿದಿದ್ದು ಶಂಕಿತರನ್ನು ವಶಕ್ಕೆ ಪಡೆದಿದೆ ಎನ್ನಲಾಗಿದೆ.