ತೀಡಿದತಲೆ. ಹಣೆಯಲ್ಲಿ ನಗುವ ವಿಭೂತಿ, ಮಧ್ಯೆ ಕುಂಕುಮ, ಪೊದೆ ಮೀಸೆಯ ಕಣ್ಣ ಕೆಳಗೆ ಜೋತು ಬಿದ್ದು ಸುಕ್ಕು ಗಟ್ಟಿದ ಚರ್ಮದಿಂದಲೇ ಬಾಬು ಅವರಿಗೆ ವಯಸ್ಸು 70 ಅಂತ ಗುರುತು ಮಾಡಲು ಸಾಧ್ಯ. ಕುಂತ ಕುಂತಲ್ಲೇ ಮನಸ್ಸು ಏನೋ ತಾಳಹಾಕುತ್ತಿತ್ತು. ಶ್ರೋತ್ರೀಯ ಮನಸ್ಸಿನ ಬಾಬೂಜೀ ಸ್ಟಿಕ್ ಹಿಡಿದು ರುಂಬಾ, ಟೇಕ್ 5ಗಳನ್ನು ಹೇಳಿಕೊಡುತ್ತಿದ್ದರೆ ಅವರ ವಯಸ್ಸಿನ ಬಗ್ಗೆ ಯಾರಿಗೇ ಆದರೂ ಗುಮಾನಿ ಹುಟ್ಟಿಬಿಡುತ್ತದೆ.
ಬಾಬು ಎಂದೇ ಹೆಸರಾಗಿರುವ ಈ ಹಿರಿಯಜ್ಜನ ಒರಿಜಿನಲ್ ಹೆಸರು ಸುಕುಮಾರ್. ಇವರು ರಾಜ್ಯದಲ್ಲಿರುವ ಹಿರಿಯ ಡ್ರಮ್ಮರ್ . ಈ ಬೂಬು ಆರ್ಕೆಸ್ಟ್ರಾ ಜಗತ್ತಿನ ಅಷ್ಟೂ ಬೌಂಡರಿಗಳನ್ನು ದಾಟಿ ಬಂದಿದ್ದಾರೆ. ಹಾಗಂತ ಸುಮ್ಮನೆ ಕೂತಿಲ್ಲ. ದಿನ ಪೂರ್ತಿ ಡ್ರಮ್ಸ್‌ನ ಪಾಠಗಳನ್ನು ಹೇಳಿಕೊಡುವುದರಲ್ಲಿ ಬ್ಯುಸಿ. ಪರೀಕ್ಷೆ ಕಟ್ಟಿಸುವುದು, ಪದವಿ ಕೊಡಿಸುವುದು ಹೀಗೆ… ಬಾಬೂಜೀ ಪೂರ್ತಿ ಸಂಗೀತಕ್ಕೆ ಒಪ್ಪಿಸಿಕೊಂಡಿದ್ದಾರೆ. ಆದರೆ ಇದ್ಯಾವುದೂ ಹಣ ಸಂಪಾದನೆಗಾಗಿ ಅಲ್ಲ; ತನ್ನಲ್ಲಿರುವ ಸಂಗೀತ ಜ್ಞಾನ ಹಂಚುವುದಕ್ಕೆ.
ಬಾಬು ಅವರು ಡ್ರಮ್ ಕಲಿತಾಗ ಈಗಿನಂತೆ ಪ್ರೋತ್ಸಾಹ ಇರಲಿಲ್ಲ. ಅದರ ಗಾತ್ರಕ್ಕೆ ಕಲಿಯವವರು ಬೆಚ್ಚಿ ಬೀಳುತ್ತಿದ್ದರು. ಆಗೆಲ್ಲಾ ಬೆಂಗಳೂರು ದಕ್ಷಿಣ ಭಾಗಕ್ಕೆ ಡ್ರಮ್‌ಹೇಳಿಕೊಡುವ ಮೇಷ್ಟ್ರು ಒಬ್ಬರೇ ಇದ್ದದ್ದು. ಇಲ್ಲವಾದರೆ ಹಲಸೂರು, ಇಂದಿರಾನಗರದ ಕಡೆ ಬರಬೇಕಿತ್ತು. ಅಲ್ಲೂ ಕೂಡ ಇಬ್ಬರೋ, ಮೂವರೋ ಇದ್ದರು. 1971ರ ಆಸುಪಾಸು. ರಸೆಲ್ ಮಾರ್ಕೆಟ್‌ನಲ್ಲಿ ಚಿತ್ರಾಲಯ ಆರ್ಕೇಸ್ಟ್ರಾ ಅಂತ ಇತ್ತು. ಆಗಾಗ ಕಾರ್ಯಕ್ರಮಗಳನ್ನು ಕೊಡೋರು. ಇದನ್ನು ನೋಡಲು ಎನ್‌ಆರ್ ಕಾಲೋನಿಯಿಂದ ಹಲಸೂರಿಗೆ ಸೈಕಲ್‌ನಲ್ಲಿ ಹೋಗುತ್ತಿದ್ದರು ಸುಕುಮಾರ್. ಅದನ್ನೇ ನೋಡಿ ಕಲೀಬೇಕು ಅನ್ನೋ ಹುಚ್ಚು ಬಂತು. “ನಾನು ಡ್ರಮ್ಸ್ ಕಲೀಬಹುದಾ ಅಂತ ಒಂದು ಸಲ ಕೇಳಿದೆ. ಇದು ಕ್ರಿಶ್ಚಿಯನ್ ವಾದ್ಯ ನಿಮಗೆಲ್ಲಾ ಆಗಿಬರೋಲ್ಲ’ ಅಂದು ಬಿಟ್ಟರಂತೆ ಚಿತ್ರಾಲಯ ಆರ್ಕೆಸ್ಟ್ರಾದ ಡ್ರಮ್ಮರ್. ಆಮೇಲೆ ಏನಾದರೂ ಮಾಡಿ ಕಲಿಯಬೇಕು ಅನ್ನೋ ಹುಕಿ. ಆ ಕಾಲದಲ್ಲಿ ಆರ್ಕೇಸ್ಟ್ರಾ ಅಂದರೆ ಶೆಟ್ಟರ ಪಂಗಡದ ಮದುವೆ ಕಾರ್ಯಕ್ರಮಗಳಲ್ಲಿ ನೋಡಬಹುದಿತ್ತು ಇಲ್ಲವೇ ಗಣೇಶನ ಹಬ್ಬದ ಸಂದರ್ಭದಲ್ಲಿ ನೋಡಬೇಕಿತ್ತು. ಅದರಲ್ಲೂ ಡ್ರಮ್ಸ್‌ಗಳ ಬಳಕೆ ಹೆಚ್ಚಾಗಿ ಕ್ರಿಶ್ಚಿಯನ್ ಸಮುದಾಯದ ಮದುವೆ, ಹಬ್ಬಗಳಲ್ಲಿ ಮಾತ್ರ. ಇಂಥ ಸಂದರ್ಭದಲ್ಲಿ ಡ್ರಮ್ ಕಲಿಯಬೇಕು ಅನ್ನೋ ಸುಕುಮಾರರ ಹುಚ್ಚಿಗೆ ಕಿಚ್ಚು ಹಚ್ಚಿದವರು ರೂಬಿ. ಗಾಂಧಿಬಜಾರಿನ ಒಂದು ಪುಟ್ಟ ಮನೆಯಲ್ಲಿ ಡ್ರಮ್ಸ್ ಪಾಠ ಹೇಳಿಕೊಡುತ್ತಿದ್ದರು. ಇದನ್ನು ಹೇಗೋ ಪತ್ತೆ ಮಾಡಿದ ರೂಬಿ ಎದುರಿಗೆ ಸ್ಟಿಕ್ ಹಿಡಿದರು. ಆಮೇಲೆ ವೆಂಕಟರಾವ್ ಒಂದಷ್ಟು ಪಾಠ ಮಾಡಿದರು. ಇದಕ್ಕೆ ನೀರೆರೆದದ್ದು ನಟುವಾಂಗ ಕಲಾವಿದರಾದ ಆನೂರು ಸೂರಿ.
ಡ್ಯಾನ್ಸ್‌ಬಾರ್
ಸುಕುಮಾರ್ ಆರಂಭದಲ್ಲಿ ಬ್ಲೂಬಾಯ್ಸ ಆರ್ಕೆಸ್ಟ್ರಾದಲ್ಲಿ, ಆಮೇಲೆ ಡ್ಯಾನ್ಸ್ ಬಾರ್‌ಗಳಲ್ಲಿ ನುಡಿಸಲು ಶುರುಮಾಡಿದರು. ಆ ಕಾಲದಲ್ಲಿ ಟಾಕ್ ಆಫ್ದಿ ಟೌನ್ ಅನ್ನೋ ಹೆಸರಾಂತ ಆರ್ಕೇಸ್ಟ್ರಾ ತಂಡವಿತ್ತು. ತಾಜ್‌ಮಹಲ್ ಹೊಟೇಲ್‌ನಲ್ಲಿ ಪ್ರತಿದಿನ ಕ್ಯಾಬರೆ ನೃತ್ಯ ನಡೆಯುತ್ತಿತ್ತು. ಸಂಜೆ 7.30ರಿಂದ 8 ಪ್ರಾದೇಶಿಕ ಹಾಡುಗಳನ್ನೂ 8-9 ಕ್ಯಾಬರೆ, 10-12 ಗಂಟೆ ತನಕ ಕ್ಯಾಟರ್. ತಮಿಳು, ಹಿಂದಿ, ಕನ್ನಡ ಹೀಗೆ ಎಲ್ಲ ಭಾಷೆಯ ಹಾಡುಗಳು ಹಾಡುತ್ತಿದ್ದರು. ಸುಕುಮಾರ್ ಎಲ್ಲ ಹಾಡು ಕೇಳಿ ಪ್ರಾಕ್ಟೀಸುಮಾಡುತ್ತಿದ್ದರು. ಆ ಕಾಲದಲ್ಲಿ ಕ್ಯಾಬರೆಗೆಲ್ಲಾ ನುಡಿಸೋದಾ? ಅನ್ನೋ ಮಡಿವಂತಿಕೆ ಇತ್ತು.
“ನಿಜವಾದ ಚಾಲೆಂಜ್ ಎದುರಾಗಿದ್ದು ಆಗಲೇ. ಇವರು ರಾತ್ರಿ ಇಡೀ ಕ್ಯಾಬರೆಗೆ ಡ್ರಮ್ ನುಡಿಸುತ್ತಿದ್ದರಿಂದ ಮದುವೆಗೆ ಹೆಣ್ಣು ಕೊಡುವುದಕ್ಕೆ ಯಾರೂ ಮುಂದೆ ಬರುತ್ತಿರಲಿಲ್ಲವಂತೆ! ಕೊನೆಗೆ ಮುಂದೆ ಬಂದವರೂ ಹೋಟೆಲ್‌ನಲ್ಲಿ ವಿಚಾರಿಸಿ, ಹುಡುಗ ಪರವಾಗಿಲ್ಲವಾ? ಅಂತೆಲ್ಲಾ ಕೇಳಿದ ನಂತರ ಮದುವೆ ಮಾಡಿಕೊಟ್ಟರು’ ಅಂತ ನೆನಪಿಸಿಕೊಳ್ಳುತ್ತಾರೆ ಸುಕುಮಾರ್. ಆದರ್ಶ ಮೆಲೋಡಿ ಮೇಕರ್ಸ್, ಮೈಸೂರು ಮೋಹನ್ ತಂಡದ (ಕುಮಾರ್ ಬಳಗ)ದಲ್ಲಿ ಹಲವು ವರ್ಷಗಳ ಕಾಲ ಡ್ರಮ್ಮರ್ ಆದರು. ಸಾಧನ ಮ್ಯೂಸಿಕ್ ಸ್ಕೂಲ್, ರಿದಮ್ಸ್‌ನಲ್ಲಿ ಪಾಠಪ್ರವಚನ ಮುಂದುವರಿಯಿತು. ಕಸ್ತೂರಿ ಶಂಕರ್ ಆರ್ಕೇಸ್ಟ್ರಾದಲ್ಲಿ ಇನ್ನೊಂದಷ್ಟು ವರ್ಷ. ಇದರ ಜೊತೆಗೆ ವೇದಿಕೆ ಕಾರ್ಯಕ್ರಮಗಳು… ಹೀಗೆಸುಕುಮಾರ್ ವಿಸ್ತಾರವಾಗುತ್ತ ಹೋದವರು ಇವತ್ತು ನಾಲ್ಕು ದಶಕಗಳ ಕಾಲ ಡ್ರಮ್ ಜಗತ್ತನ್ನು ನೋಡಿದ್ದಾರೆ.
ಸುಕುಮಾರರು ಮೊನ್ನೆಯಷ್ಟೇ 70ರ ಹುಟ್ಟುಹಬ್ಬ ಮುಗಿದಿದೆ. ಗಾಯಕ ಬಾಲಸುಬ್ರಮಣ್ಯಂ ಹರಸಿ ಹೋಗಿದ್ದಾರೆ. ಬದುಕಿನ ಮುಸ್ಸಂಜೆಯ ಎಳೆ ಬಿಸಿಲಿನಲ್ಲಿ ಸ್ಟಿಕ್ ಹಿಡಿಯುತ್ತಾ ಮಕ್ಕಳಿಗೆ ಪಾಠಮಾಡುವ ಇವರ ಉತ್ಸಾಹ ಎಲ್ಲರಿಗೂ ಸ್ಪೂರ್ತಿ.