Advertisement

70 ಲಕ್ಷ ರೂ. ನುಂಗಿ ನೀರು ಕುಡಿದ ಮೊಗ್ರಾಲ್‌ ಯೋಜನೆ!

10:12 PM Dec 08, 2019 | Sriram |

ಕುಂಬಳೆ: ಮೊಗ್ರಾಲಿನ ಸುತ್ತ ಮುತ್ತಲಿನ ಪ್ರದೇಶದ ನೀರಿನ ಕ್ಷಾಮ ಪರಿಹಾರಕ್ಕಾಗಿ ಈ ತನಕ ಸರಕಾರದ ತ್ರಿಸ್ತರ ಸ್ಥಳೀಯಾಡಳಿತ ಮತ್ತು ಜಿಲ್ಲಾಡಳಿತದ ವಿವಿಧ ಯೋಜನೆಗಳಲ್ಲಿ ಸುಮಾರು 70 ಲಕ್ಷ ರೂ. ವಿನಿಯೋಗಿಸಲಾಗಿದೆ. ಆದರೆ ಈ ಪ್ರದೇಶದ ನೀರಿನ ಕ್ಷಾಮ ಮಾತ್ರ ಇನ್ನೂ ಪರಿಹಾರವಾಗಿಲ್ಲ.

Advertisement

ಪ್ರಕೃತಿದತ್ತವಾದ ಕಾಡಿಯಾಂಕುಳ ಎಂಬ ಕೊಳದಲ್ಲಿ ಧಾರಾಳ ನೀರು ಇದ್ದರೂ ಪ್ರಕೃತ ಕೊಳದ ಸುತ್ತ ಕಾಡುಪೊದೆ ಆವರಿಸಿದೆ. ಆವರಣವಿಲ್ಲದೆ ಇದರ ನೀರು ಕುಡಿಯಲು ಅಯೋಗ್ಯವಾಗಿದೆ. ಕೊಳದ ಬಳಿಯಲ್ಲಿ ನಿರ್ಮಿಸಿದ ಶೆಡ್ಡಿನೊಳಗೆ ಸ್ಥಾಪಿಸಿರುವ ವಿದ್ಯುತ್‌ ಪಂಪ್‌ಸೆಟ್‌ ತುಕ್ಕು ಹಿಡಿಯುತ್ತಿದೆ.ಇದರ ಬಿಲ್‌ ಪಾವತಿಸದೆ ವಿದ್ಯುತ್‌ ಇಲಾಖೆ ಸಂಪರ್ಕ ಕಡಿತಗೊಳಿಸಿದೆ. ಕುಡಿಯುವ ನೀರಿನ ಯೋಜನೆಯಲ್ಲಿ ಗಾಂಧಿ ನಗರ, ರಹ್‌ಮತ್‌ನಗರ, ಕುತುಬ್‌ ನಗರ, ಕಾಡಿಯಾಕುಳಂ ಗಳಲ್ಲಿ ನಿರ್ಮಿಸಿದ 4 ಟ್ಯಾಂಕ್‌ ಗಳು ಗಾಳಿಮಳೆಗೆ ಶಿಥಿಲ ವಾಗುತ್ತಿದೆ. ಧಾರಾಳ ನೀರಾಶ್ರಯ ಪ್ರದೇಶವಾಗಿದ್ದು ಕೆಲವರು ಬಾವಿ ನಿರ್ಮಿಸಲು ಸ್ಥಳ ನೀಡಿದರೂ ಬಾವಿ ತೋಡಿಲ್ಲ. ಆದರೆ ವಿವಿಧ ಕುಡಿಯುವ ನೀರಿನ ಯೋಜನೆಗಳ ಗುತ್ತಿಗೆದಾರರು ಕಾಮಗಾರಿ ಪೂರ್ಣ ಗೊಳಿಸದೆ ವಶೀ ಲಿ ಯಿಂದ ಯೋಜನೆಯ ನಿಧಿ ನುಂಗಿದ್ದಾರಂತೆ.

ಈ ಬೃಹತ್‌ ಅವ್ಯವಹಾರವನ್ನು ಸಂಂಧಪಟ್ಟ ಉನ್ನತ ಅಧಿಕಾರಿಗಳು ಮತ್ತು ವಿಜಿಲೆನ್ಸ್‌ ಅಧಿಕಾರಿಗಳು ಮತ್ತು ಕಾಂಚಾಣಕ್ಕೆ ಕೈ ಒಡ್ಡಿದ ಕೆಲವು ಚುನಾಯಿತರು ಕಾಮಗಾರಿ ಸರಿಯಾಗಿದೆ ಎಂದು ಸಮರ್ಥಿಸಿದ್ದಾರಂತೆ !

ಇದೀಗ ರಾಜ್ಯ ವಿಧಾನ ಸಭಾ ಸಮಿತಿಯ ಆದೇಶದಂತೆ ಕಾಸರಗೋಡು ಜಿಲ್ಲಾ ಪಂಚಾಯತ್‌ನ 2018-19ನೇ ವಾರ್ಷಿಕ ಯೋಜನೆಯ ಪ್ರಾಜೆಕ್ಟ್ ನಂಬ್ರ 665ರಲ್ಲಿ ಮತ್ತೆ ಮೊಗ್ರಾಲಿನ ಜಿವಿಎಚ್‌ಎಸ್‌ ಸರಕಾರಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಯೋಜನೆಗೆ 2.50 ಲಕ್ಷ ಮೀಸಲಿರಿಸಿದೆ. ಈ ಯೋಜನೆಯಲ್ಲಿ ವಿದ್ಯಾಲಯಕ್ಕೆ ಸಿಂಥೆಟಿಕ್‌ ಟ್ಯಾಂಕ್‌ ಒಂದನ್ನು ತಂದು ಇರಿಸಲಾಗಿದೆ. ಪೈಪ್‌ಲೈನ್‌ ಕಾಮಗಾರಿ ನಡೆದರೂ ವಿದ್ಯಾಲಯದ ಬೃಹತ್‌ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯತ್ತಿರುವುದರಿಂದ ಪೈಪ್‌ಲೈನ್‌ ಒಡೆದುಹೋಗಿದೆ. ಆದುದರಿಂದ ಟ್ಯಾಂಕಿನೊಳಗೆ ಈ ತನಕ ನೀರು ಹರಿದಿಲ್ಲ. ಯೋಜನೆಗೆ ನಿಧಿ ಸಾಲದೆಂಬ ಕಾರಣದಿಂದ ಕಾಮಗಾರಿ ಅಪೂರ್ಣವಾದರೂ ಗುತ್ತಿಗೆದಾರರಿಗೆ ಪಾರ್ಟ್‌ ಬಿಲ್‌ ನೀಡಲಾಗಿದೆಯಂತೆ.

ವಿದ್ಯಾಲಯದ ಕುಡಿಯುವ ನೀರಿನ ಯೋಜನೆಯನ್ನು ಪೂರ್ತಿಗೊಳಿಸಿ ಮೊಗ್ರಾಲಿನ ವಿದ್ಯಾರ್ಥಿಗಳಿಗೆ ನೀರುಣಿಸುವಂತೆಯೂ ಯೋಜನೆಯಲ್ಲಿ ಮತ್ತು ಹಿಂದಿನ ವಿವಿಧ ಯೋಜನೆಗಳಲ್ಲಿ 70 ಲಕ್ಷದ ನಿಧಿಯಲ್ಲಿ ಅಪೂರ್ಣ ಕಾಮಗಾರಿಯ ಮೂಲಕ ಭಾರೀ ಭ್ರಷ್ಟಾಚಾರ ನಡೆಸಿದ ಗುತ್ತಿಗೆದಾರರ‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಡಿ.ವೈ.ಎಫ್‌.ಐ. ಸ್ಥಳೀಯ ಘಟಕ ರಾಜ್ಯ ಸರಕಾರದ ಮುಖ್ಯಮಂತ್ರಿ ಮತ್ತು ಕಾಸರಗೋಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ತಜ್ಞರಿಂದ ವರದಿ
ಸಾರ್ವಜನಿಕರು ವಿಜಿಲೆನ್ಸ್‌ ಇಲಾಖೆಗೆ ಸಲ್ಲಿ ಸಿದ ದೂರಿಗೆ ಕಾಡಿಯಾಕುಳಂ ಕೊಳದ ನೀರು ಕುಡಿಯಲು ಯೋಗ್ಯ ವಲ್ಲವೆಂಬುದಾಗಿ ನೀರಾವರಿ ಇಲಾಖೆಯ ಅಧಿಕಾರಿಗಳು ವರದಿ ನೀಡಿದ್ದು ಉನ್ನತ ತಜ್ಞರಿಂದ ವರದಿ ಕೇಳಲಾಗಿದೆ. ಹಿಂದಿನ ಯೋಜನೆ ಯಲ್ಲಿ ವಿದ್ಯುತ್‌ ಬಿಲ್‌ ಪಾವತಿಸಲು ಬಾಕಿ ಇರುವುದರಿಂದ ಹೊಸ ಸಂಪರ್ಕಕ್ಕೆ ವಿದ್ಯುತ್‌ ಇಲಾಖೆ ತಡೆ ಹಿಡಿದಿದೆ. ನೀರಿನ ಗುಣಮಟ್ಟದ ಕುರಿತು ಉನ್ನತ ತಜ್ಞರಿಂದ ಇನ್ನಷ್ಟು ಹೆಚ್ಚಿನ ವರದಿ ಬಂದ ಬಳಿಕ ಯೋಜನೆಯನ್ನು ಪೂರ್ಣಗೊಳಿಸ ಲಾಗುವುದು.ಯಾವುದೇ ಯೋಜನೆಗೆ ಸಾರ್ವಜನಿಕರು ಸಹಕರಿಸಿದಲ್ಲಿ ಮಾತ್ರ ಯಶಸ್ವಿಯಾಗಲು ಸಾಧ್ಯ. ಎಲ್ಲದಕ್ಕೂ ವಿಜಿಲೆನ್ಸ್‌ಗೆ ದೂರು ಸಲ್ಲಿಸಿದಲ್ಲಿ ಯೋಜನೆ ಮೊಟಕುಗೊಳ್ಳುವುದು.
– ಎ.ಜಿ.ಸಿ. ಬಶೀರ್‌,
ಕಾಸರಗೋಡು ಜಿ.ಪಂ. ಅಧ್ಯಕ್ಷರು

ಮುಚ್ಚಿ ಹೋದ ಅವ್ಯವಹಾರ
ಮೊಗ್ರಾಲಿನ ವಿವಿಧ ಕುಡಿಯುವ ನೀರಿನ ಯೋಜನೆಗಳಲ್ಲಿ ಭಾರೀ ಅವ್ಯವಹಾರ ನಡೆದಿರುವುದಾಗಿ ವಿಜಿಲೆನ್ಸ್‌ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಇವರು ಕಳ್ಳರಿಗೆ ಬೆಳಕು ತೋರಿಸಿದಂತೆ ಕಾಮಗಾರಿ ಸಮರ್ಪಕವಾಗಿದೆ ಎಂದು ವರದಿ ಸಲ್ಲಿಸಿದ ಕಾರಣ ಭ್ರಷ್ಟಾಚಾರ ಮುಚ್ಚಿಹೋಗಿದೆ. ಇದೀಗ ಹೆಚ್ಚಿನ ತನಿಖೆಗಾಗಿ ಮುಖ್ಯಮಂತ್ರಿಯವರಿಗೆ ಮತ್ತು ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
-ಅಬ್ದುಲ್ಲ ಅರ್ಷಾದ್‌
ಸ್ಥಳೀಯ ಡಿವೈಎಫ್‌ಐ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next