Advertisement

ಪ್ರವಾಸಿಗರ ಸೆಳೆಯುವಲ್ಲಿ ಹಿಂದೆ ಬಿದ್ದ 7 ಝೂಗಳು

06:40 AM Jun 28, 2018 | |

ಮೈಸೂರು: ರಾಜ್ಯದಲ್ಲಿ 9 ಮೃಗಾಲಯಗಳಿದ್ದರೂ, ಪ್ರವಾಸಿಗರನ್ನು ಸೆಳೆಯುತ್ತಿರುವುದು ಎರಡು ಮಾತ್ರ. ಮೈಸೂರು ಮೃಗಾಲಯ ಮತ್ತು ಬನ್ನೇರುಘಟ್ಟ ಉದ್ಯಾನವನ ಹೊರತುಪಡಿಸಿದರೆ ಉಳಿದ ಕಿರು ಮೃಗಾಲಯಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಹಿಂದೆ ಬಿದ್ದಿವೆ.

Advertisement

1892ರಲ್ಲಿ ಮೈಸೂರು ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರ್‌ ಬಹದ್ದೂರ್‌ ಅವರಿಂದ 80 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಿ ಮೈಸೂರು ಮೃಗಾಲಯವೆಂದೇ ಖ್ಯಾತಿಗಳಿಸಿರುವ ಶ್ರೀ ಚಾಮರಾಜೇಂದ್ರ ಮೃಗಾಲಯ ಇಂದಿಗೂ ಪ್ರವಾಸಿಗರನ್ನು ಸೆಳೆಯುವಲ್ಲಿ ಮುಂಚೂಣಿಯಲ್ಲಿದೆ. 2017-18ನೇ ಸಾಲಿನಲ್ಲಿ ಮೈಸೂರು ಮೃಗಾಲಯಕ್ಕೆ
34.60 ಲಕ್ಷ ವೀಕ್ಷಕರು ಭೇಟಿ ನೀಡಿದ್ದು, 23.10 ಕೋಟಿ ಆದಾಯ ಬಂದಿದ್ದು, 24.90 ಕೋಟಿ ವೆಚ್ಚವಾಗಿದೆ. 2ನೇ
ಸ್ಥಾನದಲ್ಲಿರುವ ಬನ್ನೇರುಘಟ್ಟ ಉದ್ಯಾನವನಕ್ಕೆ 16 ಲಕ್ಷ ವೀಕ್ಷಕರು ಭೇಟಿ ನೀಡಿದ್ದು 31.35 ಕೋಟಿ ಆದಾಯ
ಬಂದಿದ್ದರೆ, 25.97 ಕೋಟಿ ವೆಚ್ಚವಾಗಿದೆ.

ಮೈಸೂರು ಮೃಗಾಲಯ ಪ್ರವಾಸಿಗರ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದ್ದರೂ, ಆದಾಯ ಗಳಿಕೆಯಲ್ಲಿ
ಮುಂಚೂಣಿಯಲ್ಲಿರುವುದು ಬನ್ನೇರುಘಟ್ಟ ಉದ್ಯಾನವನ. ಜತೆಗೆ ಇದು 5 ಕೋಟಿ ರೂ.ನಷ್ಟು ಲಾಭವನ್ನೂ ಗಳಿಸಿದೆ. ಮೈಸೂರು ಝೂ ಖರ್ಚು- ವೆಚ್ಚ ಬಹುತೇಕ ಸಮಸಮವಾಗಿದೆ.

ಆದರೆ, ಉಳಿದ ಮೃಗಾಲಯಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳ ವಾಗುತ್ತಿದ್ದರೂ, ಹೇಳಿಕೊಳ್ಳುವಂತಹ ಪ್ರಮಾಣದಲ್ಲಿಲ್ಲ. ಜತೆಗೆ, ಆರ್ಥಿಕ ಸ್ವಾವಲಂಬನೆಯನ್ನೂ ಸಾಧಿಸಲು ಸಾಧ್ಯವಾಗಿಲ್ಲ. ಐತಿಹಾಸಿಕ ಪ್ರವಾಸಿ ತಾಣ ಹಂಪಿ ಸಮೀಪದ ಕಮಲಾಪುರದ ಬಿಳಿಕಲ್‌ ಅರಣ್ಯ ಪ್ರದೇಶದ 145 ಎಕರೆ ಪ್ರದೇಶದಲ್ಲಿ ಸ್ಥಾಪಿಸ ಲಾಗಿರುವ ಅಟಲ್‌ ಬಿಹಾರಿ ವಾಜಪೇಯಿ ಉದ್ಯಾನವನ 2017ರ ನವೆಂಬರ್‌ನಲ್ಲಿ ಲೋಕಾರ್ಪಣೆಗೊಂಡಿತ್ತು. ನಂತರದ ಆರು ತಿಂಗಳ ಅವಧಿಯಲ್ಲಿ ಈ ಮೃಗಾಲಯಕ್ಕೆ 1,797 ವೀಕ್ಷಕರು ಭೇಟಿ ಕೊಟ್ಟಿದ್ದು, 79 ಸಾವಿರ ರೂ. ಆದಾಯ ಬಂದಿದ್ದರೆ, 3 ಕೋಟಿ ರೂ. ವೆಚ್ಚವಾಗಿದೆ.

ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ 2.51 ಲಕ್ಷ ವೀಕ್ಷಕರು ಭೇಟಿ ಕೊಟ್ಟಿದ್ದು,1.75 ಕೋಟಿ ಆದಾಯಗಳಿಸಿದರೆ, 2.97 ಕೋಟಿ ರೂ. ವೆಚ್ಚವಾಗಿದೆ. ಬಳ್ಳಾರಿಯ ಮಕ್ಕಳ ಉದ್ಯಾನವನ ಮತ್ತು ಕಿರು ಮೃಗಾಲಯಕ್ಕೆ 1 ಲಕ್ಷ ವೀಕ್ಷಕರು ಭೇಟಿ ಕೊಟ್ಟಿದ್ದು, 16.59 ಲಕ್ಷ ಆದಾಯ ಬಂದಿದ್ದರೆ, 93.87 ಲಕ್ಷ ರೂ. ವೆಚ್ಚವಾಗಿದೆ. ಬೆಳಗಾವಿಯ ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ನಿಸರ್ಗಧಾಮ ಕಿರು ಮೃಗಾಲಯಕ್ಕೆ 56 ಸಾವಿರ ವೀಕ್ಷಕರು ಮಾತ್ರ ಭೇಟಿ ಕೊಟ್ಟಿದ್ದು, 5.54 ಲಕ್ಷ ರೂ. ಆದಾಯ ಬಂದಿದ್ದರೆ, 35.71 ಲಕ್ಷ ರೂ. ವೆಚ್ಚವಾಗಿದೆ. ದಾವಣಗೆರೆಯ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯಕ್ಕೆ 59 ಸಾವಿರ ವೀಕ್ಷಕರು ಭೇಟಿ ಕೊಟ್ಟಿದ್ದು 8.52 ಲಕ್ಷ ಆದಾಯಕ್ಕೆ 24.04 ಲಕ್ಷ ವೆಚ್ಚವಾಗಿದೆ. ಕಲುºರ್ಗಿಯ ಮಕ್ಕಳ ಉದ್ಯಾನವನ ಮತ್ತು ಕಿರು ಮೃಗಾಲಯಕ್ಕೆ 1.17 ಲಕ್ಷ ವೀಕ್ಷಕರು ಭೇಟಿ ನೀಡಿದ್ದು, 22.69 ಲಕ್ಷ ಆದಾಯಕ್ಕೆ 24.95 ಲಕ್ಷ ರೂ. ವೆಚ್ಚವಾಗಿದೆ. ಚಿತ್ರದುರ್ಗದಲ್ಲಿ ಸ್ಥಾಪಿಸಿರುವ ಆಡು ಮಲ್ಲೇಶ್ವರ ಬಾಲವನ ಮತ್ತು ಕಿರು ಮೃಗಾಲಯಕ್ಕೆ 1.15 ಲಕ್ಷ ವೀಕ್ಷಕರು ಭೇಟಿ ಕೊಟ್ಟಿದ್ದು 17.66 ಲಕ್ಷ ರೂ. ಆದಾಯ ಬಂದಿದ್ದು, 3.18 ಲಕ್ಷ ರೂ. ವೆಚ್ಚವಾಗಿದೆ.

Advertisement

ಗದಗ ಬಿಂಕದಕಟ್ಟೆಯಲ್ಲಿರುವ ಮಕ್ಕಳ ಉದ್ಯಾನವನ ಮತ್ತು ಕಿರು ಮೃಗಾಲಯಕ್ಕೆ 83 ಸಾವಿರ ವೀಕ್ಷಕರು ಭೇಟಿ 
ನೀಡಿದ್ದು, 17 ಲಕ್ಷ ಆದಾಯ ಬಂದಿದ್ದರೆ, 90.81 ಲಕ್ಷ ರೂ. ವೆಚ್ಚವಾಗಿದೆ.

ಮೈಸೂರು ಮೃಗಾಲಯ, ಬನ್ನೇರುಘಟ್ಟ ಉದ್ಯಾನವನಗಳಿಗೆ ಭೇಟಿ ನೀಡುವಷ್ಟು ವೀಕ್ಷಕರು ರಾಜ್ಯದ ಇನ್ನುಳಿದ ಕಿರು
ಮೃಗಾಲಯಗಳಿಗೆ ಭೇಟಿ ನೀಡುತ್ತಿಲ್ಲ. ಆದರೂ ವರ್ಷದಿಂದ ವರ್ಷಕ್ಕೆ ಕಿರು ಮೃಗಾಲಯಗಳ ವೀಕ್ಷಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬರುತ್ತಿದೆ.

– ಬಿ.ಪಿ.ರವಿ, ಸದಸ್ಯ
ಕಾರ್ಯದರ್ಶಿ, ಕರ್ನಾಟಕ ಮೃಗಾಲಯ ಪ್ರಾಧಿಕಾರ

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next