Advertisement

ಬಲು ಚಾಲಕಿ, ಈ ಬಾಲಕಿ, 11 ವಾಹನ ಓಡಿಸೋ 7ರ ರೀಪಾ

06:05 AM Nov 15, 2017 | Harsha Rao |

ಅದು ಮೂರು ಚಕ್ರದಿಂದ, ಎರಡು ಚಕ್ರದ ಸೈಕಲ್‌ಗೆ ಬಡ್ತಿ ಪಡೆಯುವ ವಯಸ್ಸು. ಅಪ್ಪನೋ, ಅಣ್ಣನೋ ಜೊತೆಗಿದ್ದಾರೆಂಬ ಧೈರ್ಯದಲ್ಲಿ ನಿಧಾನಕ್ಕೆ ಪೆಡಲ್‌ ತುಳಿಯುವ ವಯಸ್ಸಿನಲ್ಲಿ ಈ ಪೋರಿ ಎಂತೆಂಥ ವಾಹನಗಳನ್ನು ಚಲಾಯಿಸಿದ್ದಾಳೆ ಗೊತ್ತೇ? 10 ಚಕ್ರದ ಲಾರಿಯಿಂದ ಹಿಡಿದು, ಮಾರುತಿ 800 ತನಕ, ಈಕೆಯ ವಾಹನ ಚಲಾಯಿಸುವಿಕೆಯ ಜಾಣ್ಮೆ ಹುಬ್ಬೇರಿಸುತ್ತದೆ. ಈಕೆ ಮೈಸೂರಿನ ರೀಪಾ ತಸ್ಕೀನ್‌…

Advertisement

ಪುಟಾಣಿಗಳ ಆಟ ಹೇಗಿರುತ್ತೆ? ಹೆಣ್ಣು ಕಂದಮ್ಮ ಆದರೆ, ಆಕೆ ಟೆಡ್ಡಿಬೇರ್‌ಗೆ ಲಿಪ್‌ಸ್ಟಿಕ್‌ ಹಚ್ಚುತ್ತಾ ಕೂತಿರುತ್ತಾಳೆ. ಬಾರ್ಬಿಗಳನ್ನು ಮುದ್ದಿಸುತ್ತಾ ಅಪ್ಪುಗೆಯ ಬಿಸಿ ರವಾನಿಸುತ್ತಿರುತ್ತಾಳೆ. ಪ್ಲಾಸ್ಟಿಕ್‌ ಪಾತ್ರೆಗಳ ಮುಂದೆ ಅಮ್ಮನಂತೆ ದಿನಪೂರ್ತಿ ಅಡುಗೆ ಮಾಡುತ್ತಾ, ದಿನಸಿಯಿಲ್ಲದೇ, ಬಿಡಿಗಾಸು ಖರ್ಚಿಲ್ಲದೇ, ಸಂಸಾರ ನಡೆಸುತ್ತಿರುತ್ತಾಳೆ. ಅದೇ ಗಂಡು ಪುಟಾಣಿಗಳಿರುವ ಮನೆಯಲ್ಲಿ ಕಾರು, ಜೆಸಿಬಿ, ಬೈಕು, ಬಸ್ಸು, ರೈಲು, ವಿಮಾನಗಳ ಭರ್ರನೆ ಸದ್ದು ಕೇಳುತ್ತಲೇ ಇರುತ್ತೆ. ಆಟೋಮೊಬೈಲ್‌ ಅಂದ್ರೆ ಹೆಣ್ಮಕ್ಕಳಿಗಿಂತ ಹೆಚ್ಚು ಪ್ರೀತಿ ಈ ಗಂಡು ಪುಟಾಣಿಗಳಿಗೆ.

ಆದರೆ, ಇಲ್ಲೊಬ್ಬಳು ಪುಟಾಣಿಗೆ ಬಾರ್ಬಿ ಯಾವತ್ತೋ ಬೋರ್‌ ಹಿಡಿಸಿಬಿಟ್ಟಿದ್ದಾಳೆ. ಗಂಡುಮಕ್ಕಳಂತೆ ಆಟಿಕೆಗಳ ವಾಹನಗಳ ಜತೆ ಸ್ನೇಹ ಇಟ್ಟುಕೊಳ್ಳುವ ಸಣ್ಣಪುಟ್ಟ ಸಾಹಸವೂ ಈಕೆಯದ್ದಲ್ಲ. ಈ 7 ವರ್ಷದ ಬಾಲೆ 10 ಚಕ್ರದ ದೊಡ್ಡ ಲಾರಿಯನ್ನು ಆಟಿಕೆಯಂತೆ ಓಡಿಸುತ್ತಾಳೆ; ಗೂಡ್ಸ್‌ ವಾಹನವನ್ನು ಆಯಾಸವಿಲ್ಲದೆ, ಚಲಾಯಿಸುತ್ತಾಳೆ; “108’ರ ಡ್ರೈವರ್‌ನಂತೆ ಆ್ಯಂಬುಲೆನ್ಸ್‌ಗೆ ವೇಗ ತುಂಬುತ್ತಾಳೆ; ಹೋಂಡಾ ಸಿಟಿ, ಸ್ಕಾರ್ಪಿಯೋ, ಟಾಟಾ ಸಫಾರಿ, ಮಾರುತಿ- 800… ಹೀಗೆ ಯಾವುದೇ ಕಾರನ್ನು ಕೊಟ್ಟು ನೋಡಿ, ಅದರ ಮೇಲೆ ಸವಾರಿ ಹೋಗುತ್ತಾಳೆ. ನಾಲ್ಕಾರು ಚಕ್ರದ ವಾಹನವೇಕೆ, ತಂದೆ ಸಿದ್ಧಪಡಿಸಿದ ಬೈಕನ್ನೂ ನೋಡುಗರು ನಿಬ್ಬೆರರಾಗುವಂತೆ ಓಡಿಸುತ್ತಾಳೆ.

ಮೈಸೂರಿನಲ್ಲಿ ಅಂಬಾರಿ ಸವಾರಿ ನೋಡುವುದು ಎಷ್ಟು ಚೆಂದವೋ, ಅದೇ ರೀತಿ ಅರಮನೆ ನಗರಿಯ ಈ ಬಾಲೆಯ ವಾಹನ ಚಲಾಯಿಸುವಿಕೆಯೂ ಅಷ್ಟೇ ಚೆಂದ. ಈಕೆಯ ಹೆಸರು ರೀಪಾ ತಸ್ಕೀನ್‌. ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿಕೊಂಡಿರುವ ಈ ಪುಟಾಣಿ, 11 ವಾಹನಗಳನ್ನು ಚಲಾಯಿಸುತ್ತಾಳೆ. ಮೈಸೂರಿನ ಎನ್‌.ಆರ್‌. ಮೊಹಲ್ಲಾ ನಿವಾಸಿ ತಾಜುದ್ದೀನ್‌ ಹಾಗೂ ಫಾತಿಮಾ ದಂಪತಿಯ ಪುತ್ರಿ ಈಗ ಸೇಂಟ್‌ ಜೋಸೆಫ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಾಳೆ.

ಎರಡನೇ ಕ್ಲಾಸಿನ ಮಕ್ಕಳನ್ನು ಏನಾಗ್ತಿàರ ಅಂತ ಕೇಳಿದರೆ, ಟೀಚರ್‌, ಡಾಕ್ಟರ್‌ ಎಂಬ ಉತ್ತರಗಳು ಸಿಗುತ್ತವೆ. ಆದರೆ, ಆ ಪ್ರಶ್ನೆಯನ್ನು ರೀಪಾ ಮುಂದಿಟ್ಟರೆ, “ಫಾರ್ಮುಲಾ ಒನ್‌ ಕಾರ್‌ ರೇಸರ್‌ ಆಗ್ತಿàನಿ’ ಅಂತಾಳೆ. ಈಕೆಗೆ 3 ವರ್ಷವಾಗಿದ್ದಾಗಲೇ ವಾಹನ ಚಾಲನಾ ತರಬೇತಿ ಪ್ರಾರಂಭವಾಗಿತ್ತು! ಅಪ್ಪ ತಾಜ್‌ವುದ್ದೀನ್‌, ಮಗಳಿಗಾಗಿಯೇ ಕ್ವಾಡ್‌ ಬೈಕ್‌ ಅನ್ನು ತಯಾರಿಸಿದ್ದಾರೆ. ಈ ಬೈಕ್‌ ಮೊಪೆಡ್‌ನ‌ ಬಿಡಿ ಭಾಗ, ಕೈನೆಟಿಕ್‌ ಹೋಂಡಾದ ಎಂಜಿನ್‌, ಸುಜುಕಿ ಬೈಕ್‌ನ ಚಾರಿÕ, ಸ್ಕೂಟಿ ಪೆಪ್‌ನ ಟೈರ್‌ಗಳಿಂದ ರೆಡಿಯಾಗಿದೆಯಂತೆ. ಈ ಬೈಕ್‌ ತಯಾರಿಕೆಗೆ ಅವರು ಆರು ತಿಂಗಳು ಶ್ರಮಿಸಿದ್ದಾರೆ. ಸ್ವತಃ ಬೈಕ್‌ ಹಾಗೂ ಕಾರ್‌ ರೇಸರ್‌ ಆಗಿದ್ದ ಅವರು, ರಾಷ್ಟ್ರಮಟ್ಟದಲ್ಲಿ 40 ಬೆಳ್ಳಿಯ ಟ್ರೋಫಿಗಳನ್ನು ಬಾಚಿದವರು. ಕಾರ್‌ ರೇಸ್‌ನಲ್ಲಿ ವಿಶ್ವಚಾಂಪಿಯನ್‌ ಆಗಬೇಕೆಂಬ ತಮ್ಮ ಕನಸನ್ನು, ಮಗಳ ಮೂಲಕ ನನಸು ಮಾಡಿಕೊಳ್ಳುವ ತವಕದಲ್ಲಿದ್ದಾರೆ. 

Advertisement

ರೀಪಾ ಎಲ್ಲಾ ಬಗೆಯ ಪವರ್‌ ಸ್ಟೀರಿಂಗ್‌ ವಾಹನಗಳನ್ನು ಓಡಿಸಬಲ್ಲಳು. ಮಂಡ್ಯ, ಮೈಸೂರಿನಲ್ಲಿ ನಡೆದ ಕೆಲವು ರೇಸ್‌ಗಳಲ್ಲೂ ಮಿಂಚಿದವಳು. ಆಕಾಶದ ಮೇಲೂ ಕಣ್ಣಿಟ್ಟಿರುವ ರೀಪಾಗೆ, ಮುಂದೆ ಯುದ್ಧ ವಿಮಾನಗಳ ಪೈಲೆಟ್‌ ಆಗಿ ದೇಶಸೇವೆ ಮಾಡಬೇಕೆಂಬ ಆಸೆಯಿದೆ. ಹೆತ್ತವರಿಂದ ಅದಕ್ಕೂ ವೇದಿಕೆ ಸಜ್ಜಾಗುತಿದೆ ಕೂಡ.

ನನ್ನ ಸಾಧನೆಗೆ ತಂದೆಯೇ ಸ್ಫೂರ್ತಿ. ವಾಹನ ಓಡಿಸುವಾಗ ಅವರು ನನ್ನ ಪಕ್ಕದಲ್ಲೇ ಕುಳಿತು ತರಬೇತಿ ನೀಡುತ್ತಾರೆ. ವಾಹನಗಳನ್ನು ಓಡಿಸುವುದೆಂದರೆ, ನನಗೆ ರೋಮಾಂಚನಕಾರಿ ಅನುಭವ. ಮುಂದೊಂದು ದಿನ ಪೈಲೆಟ್‌ ಆಗುವೆ. ಯುದ್ಧವಿಮಾನಗಳನ್ನು ಈ ವಾಹನಗಳಂತೆಯೇ ಓಡಿಸಬೇಕು.
– ರೀಪಾ ತಸ್ಕೀನ್‌, ಮೈಸೂರು

– ಸಿ. ದಿನೇಶ್‌, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next