Advertisement

ಆದರ್ಶ ಗ್ರಾಮ ಯೋಜನೆಗೆ 7 ಗ್ರಾಮ ಆಯ್ಕೆ: ಪಾಟೀಲ್‌

03:45 PM Mar 04, 2018 | |

ಮಸ್ಕಿ: ಪಟ್ಟಣದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ 30 ಹಾಸಿಗೆಯ ತಾಲೂಕು ಸರ್ಕಾರಿ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಶಾಸಕ ಪ್ರತಾಪಗೌಡ ಪಾಟೀಲ್‌ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನೂತನ ತಾಲೂಕು ಕೇಂದ್ರಗಳಿಗೆ 30 ಹಾಸಿಗೆಯ ಸರ್ಕಾರಿ ಆಸ್ಪತ್ರೆ ಕಟ್ಟಡ ಮಂಜೂರು ಮಾಡಿದೆ. ರಾಯಚೂರು ಜಿಲ್ಲೆಯ ಮೂರು ಕೇಂದ್ರಗಳಲ್ಲಿ 30 ಹಾಸಿಗೆಯ ಆಸ್ಪತ್ರೆ ಕಟ್ಟಡ ಮಂಜೂರು ಆಗಿವೆ. ಮಸ್ಕಿ ನೂತನ ತಾಲೂಕಾಗಿ ಅಸ್ತಿತ್ವಕ್ಕೆ ಬಂದಿದ್ದು, ಪಟ್ಟಣದಲ್ಲಿ 30 ಹಾಸಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುತ್ತದೆ. ಕಟ್ಟಡದಲ್ಲಿ ಶಸ್ತ್ರ ಚಿಕಿತ್ಸಾ ಕೊಠಡಿ ಸಹ ಒಳಗೊಂಡಿದೆ. ಕಟ್ಟಡ ನಿರ್ಮಾಣಕ್ಕೆ ಒಂದು ವರ್ಷದ ಕಾಲಾವಧಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಎಸ್‌ಸಿ, ಎಸ್‌ಟಿ ಸಮುದಾಯ ಹೆಚ್ಚಾಗಿ ವಾಸಿಸುವ ಪ್ರದೇಶಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ಅದರಂತೆ
ಸಿಂಧನೂರು ತಾಲೂಕಿನ ವೀರಾಪುರು ಹಾಗೂ ಗುಡಲದಿನ್ನಿ, ಲಿಂಗಸುಗೂರು ತಾಲೂಕಿನ ಅಡವಿಬಾವಿ ತಾಂಡಾ, ಸೋಮಾಪುರ ಮತ್ತು ಮಾನ್ವಿ ತಾಲೂಕಿನ ಕೊಟೆಕಲ್‌, ಹಂಚಿನಾಳ ಗ್ರಾಮಗಳು ಮುಖ್ಯಮಂತ್ರಿ ಆದರ್ಶ ಗ್ರಾಮ ಯೋಜನೆಯಲ್ಲಿ ಆಯ್ಕೆಯಾಗಿವೆ.

ಪ್ರತಿ ಗ್ರಾಮಕ್ಕೂ 75 ಲಕ್ಷ ರೂ. ಮಂಜೂರು ಮಾಡಲಾಗುವುದು. ಶೇ.50ರಷ್ಟು ಅನುದಾನವನ್ನು ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಬಳಸಲಾಗುವುದು. ಉಳಿದ ಅನುದಾನವನ್ನು ಮೂಲ ಸೌಕರ್ಯ ಕಲ್ಪಿಸಲು ಬಳಸಲಾಗುತ್ತದೆ ಎಂದು ವಿವರಿಸಿದರು.
ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ನಾಗರಾಜ ಚೌಶೆಟ್ಟಿ ಇತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next