ಮಣಿಪಾಲ: ಚುಟುಕು ಮಾದರಿ ಕ್ರಿಕೆಟ್ ನ ಅತೀ ದೊಡ್ಡ ಕೂಟ ಐಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಗೆ ಬಿಸಿಸಿಐ ಸಜ್ಜಾಗಿದೆ. ಭಾರತದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚಿರುವ ಕಾರಣ ಈ ಬಾರಿಯ ಐಪಿಎಲ್ ಅನ್ನು ಯುಎಇನಲ್ಲಿ ಆಯೋಜಿಸಿದ್ದು, ಇನ್ನು ಕೆಲವು ದಿನಗಳಷ್ಟೇ ಬಾಕಿಯಿದೆ. ದುಬೈ ತಲುಪಿರುವ ಆಟಗಾರರು ಕ್ವಾರಂಟೈನ್ ಮುಗಿಸಿ ಟ್ರೈನಿಂಗ್ ಆರಂಭಿಸಿದ್ದಾರೆ. ಕ್ರೀಡಾ ಜಗತ್ತು ಈ ಬಾರಿಯ ಐಪಿಎಲ್ ಕೂಟಕ್ಕಾಗಿ ಎದುರು ನೋಡುತ್ತಿದೆ. ಆದರೆ ಅಭಿಮಾನಿಗಳಿಗೆ ಕೆಲವು ಅಂಶಗಳು ನಿರಾಸೆ ತರಲಿದೆ.
1 ಪ್ರೇಕ್ಷಕರಿಗಿಲ್ಲ ಪ್ರವೇಶ
ಕೋವಿಡ್-19 ಸೋಂಕು ಭೀತಿಯ ಕಾರಣ ಈ ಬಾರಿಯ ಐಪಿಎಲ್ ಗೆ ಪ್ರೇಕ್ಷಕರಿಗೆ ಪ್ರವೇಶ ನಿರಾಕರಿಸಲಾಗಿದೆ. ದುಬೈ, ಅಬುದಾಬಿ, ಶಾರ್ಜಾದಲ್ಲಿ ಈ ಬಾರಿಯ ಕೂಟ ನಡೆಯಲಿದ್ದು, ಇದುವರೆಗೆ ನಿರ್ಧರಿಸಿದಂತೆ ಎಲ್ಲಾ ಪಂದ್ಯಗಳು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಈಗಾಗಲೇ ಪ್ರೇಕ್ಷಕರಿಲ್ಲದೆ ಪಂದ್ಯಾವಳಿ ಆಯೋಜಿಸಿರುವ ಕಾರಣ ಇದೇ ತಂತ್ರ ಅನುಸರಿಸಲು ಬಿಸಿಸಿಐ ಮುಂದಾಗಿದೆ.
2 ಲಾಂಛನ ವೇಷಧಾರಿಗಳಿಲ್ಲ
ಕೂಟದ ಪ್ರಮುಖ ಆಕರ್ಷಣೆಗಳಿಲ್ಲ ಒಂದಾದ ಲಾಂಛನ ವೇಷಧಾರಿಗಳಿಗೆ ಈ ಬಾರಿ ಅವಕಾಶವಿಲ್ಲ. ತಂಡಗಳ ಅಥವಾ ಪ್ರಾಯೋಜಕರ ಲಾಂಛನದ ವೇಷತೊಟ್ಟು ಮೈದಾನದಲ್ಲಿ ಓಡಾಡುತ್ತಿದ್ದ ಇವರು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದರು. ಆದರೆ ಈ ಬಾರಿ ಇದಕ್ಕೆ ಅವಕಾಶವಿಲ್ಲ.
ಇದನ್ನೂ ಓದಿ: ಐಪಿಎಲ್ 2020: ಕೋವಿಡ್ ನೆಗೆಟಿವ್ ಹಿನ್ನಲೆ ಚೆನ್ನೈ ಕ್ಯಾಂಪ್ ಗೆ ಮರಳಿದ ದೀಪಕ್ ಚಾಹರ್
3 ಬೇರೆ ರೀತಿಯ ಮಾಧ್ಯಮ ಸಂವಾದ
ಕೂಟದ ನಂತರ ನಡೆಯುವ ಪಂದ್ಯಶ್ರೇಷ್ಠ ಪುರಸ್ಕಾರ ಕಾರ್ಯಕ್ರಮದ ಸ್ವರೂಪವೂ ಈ ಬಾರಿ ಬದಲಾಗಲಿದೆ. ಪ್ರಾಯೋಜಕರ ಪ್ರತಿನಿಧಿಗಳು ಸ್ಥಳದಲ್ಲಿ ಇರುವುದಿಲ್ಲ. ಸಂದರ್ಶನ ಮಾಡುವ ವ್ಯಕ್ತಿಯೂ ಅಂತರ ವಹಿಸಿ ಸಂದರ್ಶನ ಮಾಡಬಹುದು ಅಥವಾ ಡಿಜಿಟಲ್ ಮಾದರಿಯಲ್ಲಿ ಸಂದರ್ಶನ ಇರುವ ಸಾಧ್ಯತೆಯಿದೆ.
4 ಡ್ರೆಸಿಂಗ್ ರೂಮ್ ಸಂದರ್ಶನವಿಲ್ಲ
ಆಟಗಾರರು ಬಯೋ ಬಬಲ್ ನಲ್ಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯವಿರುವ ಕಾರಣ ನೇರಪ್ರಸಾರ ಮಾಡುವ ವಾಹಿನಿ ಸಿಬ್ಬಂದಿ ಆಟಗಾರರ ಕೊಠಡಿ ಪ್ರವೇಶಿಸಿ ಸಂದರ್ಶನ ಮಾಡುವ ಅವಕಾಶ ಈ ಬಾರಿ ಕಡಿಮೆ.
5 ಕಿಟ್ ಹಸ್ತಾಂತರವಿಲ್ಲ
ಕೋವಿಡ್ ಕಾರಣದಿಂದ ಈ ಬಾರಿ ಆಟಗಾರರು ಬೇರೆಯವರ ಬ್ಯಾಟ್, ಪ್ಯಾಡ್, ಹೆಲ್ಮೆಟ್ ಮುಂತಾದ ಕಿಟ್ ಗಳನ್ನು ಪಡೆಯುವಂತಿಲ್ಲ. ತಮ್ಮ ತಮ್ಮ ಕಿಟ್ ಗಳನ್ನೇ ಬಳಸಬೇಕಾದ ಅನಿವಾರ್ಯತೆ ಆಟಗಾರರಿಗೆ ಎದುರಾಗಿದೆ.
6 ಶಾರುಖ್ ಖಾನ್, ಪ್ರೀತಿ ಜಿಂಟಾ, ಶಿಲ್ಪಾ ಶೆಟ್ಟಿ ಇರಲಾರರು
ಐಪಿಎಲ್ ನ ಪ್ರಮುಖ ಆಕರ್ಷಣೆಗಳಾದ ಬಾಲಿವುಡ್ ಸ್ಟಾರ್ ಗಳು ಈ ಬಾರಿ ಮೈದಾನಕ್ಕೆ ಬರುವಂತಿಲ್ಲ. ಪ್ರಾಂಚೈಸಿ ಮಾಲಕರಾದ ಶಾರುಖ್ ಖಾನ್, ಪ್ರೀತಿ ಜಿಂಟಾ, ಶಿಲ್ಪಾ ಶೆಟ್ಟಿ ಪ್ರತೀ ವರ್ಷವೂ ತಮ್ಮ ತಂಡಗಳಿಗೆ ಬೆಂಬಲಿಸಲು ಮೈದಾನಕ್ಕೆ ಆಗಮಿಸುತ್ತಿದ್ದರು. ಈ ಮೂಲಕ ಅಭಿಮಾನಿಗಳ ಪ್ರೋತ್ಸಾಹಕ್ಕೂ ಕಿಚ್ಚು ಹಚ್ಚುತ್ತಿದ್ದರು. ಆದರೆ ಈ ಬಾರಿ ಇದಕ್ಕೆ ಅವಕಾಶವಿಲ್ಲ.
7 ಚಿಯರ್ ಲೀಡರ್ಸ್ ಇರಲ್ಲ
ಪ್ರತೀ ಬೌಂಡರಿ ಸಿಕ್ಸರ್ ಹೊಡೆದಾಗ, ವಿಕೆಟ್ ಬಿದ್ದಾಗ ಕುಣಿದು ಕುಪ್ಪಳಿಸುತ್ತಿದ್ದ ಚಿಯರ್ ಲೀಡರ್ಸ್ ಗೆ ಈ ಬಾರಿಯ ಐಪಿಎಲ್ ನಲ್ಲಿ ಅವಕಾಶವಿಲ್ಲ. ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡಿಜಿಟಲ್ ಪರದೆ ಮೇಲೆ ಚಿಯರ್ ಲೀಡರ್ಸ್ ವಿಡಿಯೋ ಪ್ರಸಾರ ಮಾಡಲಾಗುತ್ತಿತ್ತು. ಐಪಿಎಲ್ ನಲ್ಲೂ ಇಂತಹದೇ ಅಥವಾ ಇದಕ್ಕಿಂತ ವಿಭಿನ್ನವಾದ ಯೋಜನೆಯನ್ನು ಬಿಸಿಸಿಐ ಮಾಡುವ ನಿರೀಕ್ಷೆಯಿದೆ.