ಪಟ್ನಾ : ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೊನೆಗೂ ತನ್ನ ಅಕ್ರಮ ವಶದಲ್ಲಿದ್ದ ಐಶಾರಾಮಿ ಸರಕಾರಿ ಬಂಗ್ಲೆಯನ್ನು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ತೆರವುಗೊಳಿಸಿದ್ದಾರೆ.
ಈ ಬಂಗ್ಲೆಯನ್ನು ಪ್ರಕೃತ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಅವರಿಗೆ ನೀಡಲಾಗಿದೆ. ಆ ಪ್ರಕಾರ ಅವರು ಈ ಐಶಾರಾಮಿ ಬಂಗ್ಲೆಯನ್ನು ಪ್ರವೇಶಿಸಿದಾಗ, ಪಂಚತಾರಾ ಹೊಟೇಲುಗಳನ್ನೂ ನಾಚಿಸುವ ರೀತಿಯ ಇಲ್ಲಿನ ವಿಲಾಸೀ ಸೌಕರ್ಯಗಳನ್ನು, ಅಲಂಕಾರಗಳನ್ನು ಕಂಡು ನಿಬ್ಬೆರಗಾಗಿದ್ದಾರೆ. 46 ಎಸಿಗಳ 7 ಸ್ಟಾರ್ ನ ಈ ಬಂಗ್ಲೆಯಲ್ಲಿ ತೇಜಸ್ವಿ ರಾಜ ವೈಭವ ನಡೆಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
’46 ಎಸಿ ಗಳು ಇರುವ ಈ ಭಾರೀ ಐಶಾರಾಮಿ ಬಂಗ್ಲೆ ಪಂಚ ತಾರಾ ಹೊಟೇಲುಗಳನ್ನು ಕೂಡ ನಾಚಿಸುವಂತಿದೆ. ಇದರ ನಿರ್ವಹಣೆಗೆ ತಗುಲುವ ವೆಚ್ಚವೇ ಒಂದು ಆನೆಯನ್ನು ಸಾಕುವ ವೆಚ್ಚವನ್ನು ಮೀರಿಸಲಿದೆ’ ಎಂದು ಸುಶೀಲ್ ಮೋದಿ ಟ್ವೀಟ್ ಮಾಡಿದ್ದಾರೆ.
ಈ ಬಂಗ್ಲೆಯನ್ನು ಪ್ರವೇಶಿಸಿದಾಗ ನಮಗೆ ಸೆವೆನ್ ಸ್ಟಾರ್ ಹೊಟೇಲ್ ಪ್ರವೇಶಿಸಿದ ಅನುಭವವಾಯಿತು. ಇಲ್ಲಿ ಎಲ್ಲವೂ ಸ್ಪೆಶಲ್, ಯಾವುದೂ ಆರ್ಡಿನರಿ ಇಲ್ಲ. ಈ ಬಂಗ್ಲೆಯ ವೈಭವೀಕರಣಕ್ಕೆ ಕೋಟಿ ಗಟ್ಟಲೆ ಖರ್ಚು ಮಾಡಲಾಗಿರುವುದು ಸ್ಪಷ್ಟವಿದೆ. ಇಷ್ಟೊಂದು ವೈಭವದ ವಿಲಾಸೀ ಬಂಗ್ಲೆಯಲ್ಲಿ ವಾಸಿಸುವ ತೇಜಸ್ವಿ ಯಾದವ್ ಗೆ ಬಡವರ ಮತ್ತು ಹಿಂದುಳಿದವರ ಕಷ್ಟ ಕಾರ್ಪಣ್ಯಗಳು ಹೇಗೆ ಗೊತ್ತಾಗಲು ಸಾಧ್ಯ ಎಂದು ಮೋದಿ ಪ್ರಶ್ನಿಸಿದ್ದಾರೆ.
‘ಈ ಐಶಾರಾಮಿ ಬಂಗ್ಲೆ ಯು ಬಿಹಾರ ರಾಜ್ಯಪಾಲ ಅಧಿಕೃತ ನಿವಾಸವಾಗಿರುವ ಪಟ್ನಾದಲ್ಲಿನ ರಾಜ ಭವನಕ್ಕಿಂತ ನೂರು ಪಟ್ಟು ವೈಭವೋಪೇತವಾಗಿದೆ; ಈ ಬಂಗ್ಲೆಯನ್ನು ಮುಖ್ಯಮಂತ್ರಿಗಳು ಬಳಸಬಹುದಾಗಿದೆ; ನಾನಲ್ಲ’ ಎಂದು ಸುಶೀಲ್ ಮೋದಿ ಹೇಳಿದರು.
ರಾಜ್ಯದ ಸಚಿವರಿಗೆ ಕೊಡಲಾಗುವ ಸರಕಾರಿ ಬಂಗ್ಲೆಯ ನವೀಕರಣ, ದುರಸ್ತಿಗೆಂದು ಒಟ್ಟು ಐದು ವರ್ಷಗಳ ಅವಧಿಯಲ್ಲಿ ಕೇವಲ 3 ಲಕ್ಷ ರೂ ಮಾತ್ರವೇ ಬಳಸುವ ಅರ್ಹತೆ ಇರುತ್ತದೆ. ಹಾಗಿರುವಾಗ ಈ ಸರಕಾರಿ ಬಂಗ್ಲೆಯನ್ನು ವೈಭವೋಪೇತಗೊಳಿಸಲು ತೇಜಸ್ವಿ ಅವರು ಸ್ವಂತದ ಹಣ ಖರ್ಚು ಮಾಡಿದ್ದಾರೆಯೇ ಅಥವಾ ತಮ್ಮ ಇಲಾಖೆಯ ಹಣವನ್ನು ಬಳಸಿಕೊಂಡಿದ್ದಾರೆಯೇ ಎಂಬ ಬಗ್ಗೆ ಈಗಿನ್ನು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಮೋದಿ ಹೇಳಿದರು.