ಬೆಂಗಳೂರು: ಸರ್ಕಾರದ ಮೋಡ ಬಿತ್ತನೆಯ “ವರ್ಷಧಾರೆ’ ಕಾರ್ಯಕ್ರಮಕ್ಕೆ ಕೊನೆಗೂ ಒಂದಿಷ್ಟು ಯಶಸ್ಸು ಸಿಕ್ಕಿದೆ. ಬುಧವಾರ ಏಳು ಕಡೆ ಮೋಡ ಬಿತ್ತನೆ ಮಾಡಲಾಗಿದ್ದು, ಅಲ್ಲಲ್ಲಿ ಮಳೆ ಹನಿಗಳು ಉದುರಿದ ಅನುಭವ ಆಗಿದೆ. ಜಕ್ಕೂರು ವಾಯು ನೆಲೆಯಿಂದ ಮಧ್ಯಾಹ್ನ 2.20ಕ್ಕೆ ಹಾರಾಟ ಆರಂಭಿಸಿದ ವಿಶೇಷ ವಿಮಾನ ಸಂಜೆ 4.25ರವರೆಗೆ ಮಾಗಡಿ, ನೆಲಮಂಗಲ, ಸೊಲೂರು, ರಾಮನಗರ, ಚನ್ನಪಟ್ಟಣ, ಮದ್ದೂರು ಹಾಗೂ ಮಂಡ್ಯದಲ್ಲಿ ಮೋಡ ಬಿತ್ತನೆ ಮಾಡಿದೆ. ಈ ಸಂದರ್ಭದಲ್ಲಿ 14 ಬೆಂಕಿ ಉಗುಳುವ ಸಾಧನಗಳನ್ನು ಬಳಸಿ ಮೋಡ ಬರಿಸುವ ಸಾಂದ್ರತೆ ಇರುವ 7 ದಟ್ಟ ಮೋಡಗಳಿಗೆ ರಾಸಾಯನಿಕ ಸಿಂಪರಣೆ ಮಾಡಲಾಯಿತು. ಇದರ ಬೆನ್ನಲ್ಲೇ ಆ ಪ್ರದೇಶಗಳಲ್ಲಿ ಮಳೆ ಹನಿಗಳು ಬಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ. ಮೋಡ ಬಿತ್ತನೆ ಮಾಡಿದ ಎಲ್ಲ ಪ್ರದೇಶಗಳಲ್ಲಿ ಅರ್ಧ ತಾಸಿನಿಂದ 1 ಗಂಟೆಯೊಳಗೆ ಮಳೆ ಬಿದ್ದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಾರ್ವಜನಿಕರು ದೂರವಾಣಿ ಕರೆ ಮಾಡಿ ಮಳೆ ಬಿದ್ದಿದ್ದನ್ನು ದೃಢೀಕರಿಸಿದ್ದಾರೆ. ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಾಗಿ ಅಂದರೆ 50 ಮೈಕ್ರಾನ್ ಗಾತ್ರದಷ್ಟು ಮಳೆ ಹನಿಗಳು ಬಿದ್ದಿವೆ. ರೆಡಾರ್ ಸಂಕೇತಗಳನ್ನು ಆಧರಿಸಿ ಗುರುವಾರವೂ ಮೋಡ ಬಿತ್ತನೆ ಮುಂದುವರಿಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.