ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಏಳು ಕೆ.ಜಿ.ಅಕ್ಕಿ ಕೊಡುವ ವಿಚಾರದ ಬಗ್ಗೆ ಗೊಂದಲ ಮುಂದುವರಿದಿದೆಯಾದರೂ ಮುಂದಿನ ಲೋಕಸಭಾ
ಚುನಾವಣೆವರೆಗೆ ಈಗಿರುವ ವ್ಯವಸ್ಥೆಯನ್ನೇ ಮುಂದುವರಿಸಿ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕೆಲವು ಶಾಸಕರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೇಲೆ ಒತ್ತಡ ಹಾಕುತ್ತಿದ್ದಾರೆ.
2 ಕೆ.ಜಿ. ಅಕ್ಕಿ ಕಡಿತಗೊಳಿಸುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ, ಲೋಕಸಭೆ ಚುನಾವಣೆವರೆಗೆ ಹಾಲಿ ವ್ಯವಸ್ಥೆ ಮುಂದುವರಿದರೆ ಎರಡೂ ಪಕ್ಷಗಳಿಗೂ ಅನುಕೂಲವಾಗಲಿದೆ. ಹೀಗಾಗಿ, ಸದ್ಯಕ್ಕೆ ಯೋಜನೆ ಮುಂದುವರಿಯಲಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಏಳು ಕೆ.ಜಿ ಅಕ್ಕಿ ಕೊಡುವುದಾಗಿ ಮುಖ್ಯಮಂತ್ರಿ ಹಾಗೂ ಆಹಾರ ಸಚಿವರು ಹೇಳುತ್ತಿದ್ದಾರೆ. ಆದರೆ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿಗೆ ಏಳು ಕೆ.ಜಿ. ಅಕ್ಕಿ ಕೊಡಲು ಯಾವುದೇ ತೊಂದರೆಯಿಲ್ಲ. ಆದರೆ, ಮುಂದೇನು ಎಂದು ಈಗಲೇ ಹೇಳಲಿಕ್ಕಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಈಗಾಗಲೇ ಜುಲೈನಲ್ಲಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 7 ಕೆ.ಜಿ. ಅಕ್ಕಿ ವಿತರಿಸಲಾಗಿದೆ.
ಆಗಸ್ಟ್‌ಗೆ ಬೇಕಾಗುವ ಅಕ್ಕಿ ಈಗಾಗಲೇ ಖರೀದಿಸಿದ್ದು, ಅದನ್ನು ಪಡಿತರ ಅಂಗಡಿಗಳಿಗೆ ಪೂರೈಕೆ ಮಾಡುತ್ತೇವೆ. ಜುಲೈನಲ್ಲಿ ಉಳಿಕೆಯಾದ ಅಕ್ಕಿಯನ್ನು ಆಗಸ್ಟ್‌ನಲ್ಲಿ ಮತ್ತು ಆಗಸ್ಟ್‌ನಲ್ಲಿ ಉಳಿಕೆಯಾದ ಅಕ್ಕಿಯನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಳಕೆ ಮಾಡಕೊಳ್ಳಲಾಗುವುದು. ಹಾಗಾಗಿ, 2 ತಿಂಗಳ ಮಟ್ಟಿಗೆ ಏಳು ಕೆ.ಜಿ ಅಕ್ಕಿಗೆ ಸಮಸ್ಯೆಯಿಲ್ಲ. ಅದೇ ರೀತಿ ಒಂದು ಬಿಪಿಎಲ್ ಕಾರ್ಡ್‌ಗೆ 1 ಕೆ.ಜಿ ತೊಗರಿ ಬೇಳೆ ಸಹ ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಜೆಟ್‌ನಲ್ಲಿ ಘೋಷಿಸಿರುವ ಒಂದು ಬಿಪಿಎಲ್ ಕುಟುಂಬದ ಪ್ರತಿ ಸದಸ್ಯನಿಗೆ ರಿಯಾಯಿತಿ ದರದಲ್ಲಿ ಅರ್ಧ ಕೆ.ಜಿ. ತೊಗರಿ ಬೇಳೆ, ಪ್ರತಿ ಬಿಪಿಎಲ್ ಕಾರ್ಡ್‌ಗೆ 1 ಕೆ.ಜಿ. ತಾಳೆ ಎಣ್ಣೆ, 1 ಕೆ.ಜಿ. ಅಯೋಡಿನ್ ಮತ್ತುಕಬ್ಬಿಣಾಂಶಯುಕ್ತ ಉಪ್ಪು, 1 ಕೆ.ಜಿ. ಸಕ್ಕರೆ ಸಹ ಅ.1ರಿಂದಲೇ ಫಲಾನುಭವಿಗಳಿಗೆ ಸಿಗಲಿದೆ. ಈಗಿನ ವ್ಯವಸ್ಥೆಯಲ್ಲಿ ಒಂದು ಬಿಪಿಎಲ್ ಕಾರ್ಡ್‌ಗೆ 1 ಕೆ.ಜಿ.ತೊಗರಿ ಬೇಳೆ ನೀಡಲಾಗುತ್ತಿತ್ತು. ಈಗ ಕುಟುಂಬದ ಒಬ್ಬ ಸದಸ್ಯನಿಗೆ ಅರ್ಧ ಕೆ.ಜಿ ತೊಗರಿ ಬೇಳೆ ನೀಡಲು ಉದ್ದೇಶಿಸಲಾಗಿದೆ. ಹೀಗಾಗಿ ಹೆಚ್ಚುವರಿ ಬೇಳೆ ಹೊಂದಿಸಲು ಸಿದಟಛಿತೆ ಮಾಡಿಕೊಳ್ಳಬೇಕು. ಅದೇ ರೀತಿ ಗುಜರಾತ್‌ನಿಂದ ಉಪ್ಪು ಖರೀದಿಸಲು ಟೆಂಡರ್ ಕರೆಯಬೇಕು. ಇದಕ್ಕೆಲ್ಲ ಕನಿಷ್ಠ 2 ತಿಂಗಳಾದರೂ ಬೇಕು. ಹಾಗಾಗಿ, ಈಗಿನ ಬಜೆಟ್‌ನಲ್ಲಿ ಘೋಷಿಸಿರುವ ಪಡಿತರ ಪ್ರಮಾಣ ಅಕ್ಟೋಬರ್‌ನಿಂದ ಫಲಾನುಭವಿಗಳಿಗೆ ಸಿಗಲಿದೆ ಎಂದು ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ಅನ್ನಭಾಗ್ಯ ಯೋಜನೆಯಡಿ 7 ಕೆ.ಜಿ. ಅಕ್ಕಿ ವಿತರಣೆ ಮುಂದುವರಿಯಲಿದೆ. ಅಕ್ಕಿ ಕಡಿತ ಬಗ್ಗೆ ಮುಖ್ಯಮಂತ್ರಿ ನನ್ನ ಬಳಿ ಚರ್ಚೆ ನಡೆಸಿಲ್ಲ. ಹೀಗಾಗಿ, ಆ ವಿಚಾರದಲ್ಲಿ ಯಾವುದೇ ಗೊಂದಲ ಬೇಡ.
● ಜಮೀರ್ ಅಹಮದ್, ಸಚಿವ